Advertisement

ಸೂತ್ರಧಾರರಿಲ್ಲದೆ ಸೊರಗಿದ “ಕರಾವಳಿ ಅಭಿವೃದ್ಧಿ ಪ್ರಾಧಿಕಾರ’!

11:46 PM Nov 01, 2019 | mahesh |

ಮಂಗಳೂರು: ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕರಾವಳಿ ಭಾಗದ ಅಭಿವೃದ್ಧಿಗಾಗಿ ರಚಿಸಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಒಂದೂವರೆ ವರ್ಷದಿಂದ ಅಧ್ಯಕ್ಷರು-ಸದಸ್ಯರು ಸೇರಿದಂತೆ ಸೂಕ್ತ ಸೂತ್ರಧಾರರಿಲ್ಲದೆ ಸೊರಗಿದೆ.

Advertisement

ರಾಜ್ಯ ಸರಕಾರವು ಇತ್ತೀಚೆಗೆ ವಿವಿಧ ಸಾಹಿತ್ಯ ಅಕಾಡೆಮಿಗಳಿಗೆ ಅಧ್ಯಕ್ಷರು- ಸದಸ್ಯರನ್ನು ನೇಮಿಸಿದ್ದರೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಸಂಪೂರ್ಣ ಮರೆತಿದೆ. ಒಂದೂವರೆ ವರ್ಷದಿಂದ ಆಡಳಿತ ವ್ಯವಸ್ಥೆ ಇಲ್ಲದೆ ಪ್ರಾಧಿಕಾರವು ವರ್ಚಸ್ಸು ಕಳೆದು ಕೊಳ್ಳುತ್ತಿದೆ. ಈಗ ಅದು ಕೇವಲ ಹಳೆಯ ಯೋಜನೆಗಳಿಗೆ ಅನುದಾನ ಹಂಚಿಕೆಗಷ್ಟೇ ಸೀಮಿತವಾಗಿದೆ.

2008ರಲ್ಲಿ ರಚನೆ
ಕರಾವಳಿಯ ಸಮಗ್ರ ಅಭಿವೃದ್ಧಿಯ ಸಂಕಲ್ಪದಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು 2008ರಲ್ಲಿ ರಚಿಸಲಾಗಿತ್ತು. ಬಳಿಕ ಬೆರಳೆಣಿಕೆಯ ಯೋಜನೆಗಳನ್ನು ಬಿಟ್ಟರೆ ಮಹತ್ವದ- ಆಮೂಲಾಗ್ರ ಯೋಜನೆಗಳು ಆಗಿರಲಿಲ್ಲ. ಬದಲಾಗಿ ಶಿಲಾನ್ಯಾಸ ನಡೆಸಿದ್ದ ಮಂಗಳೂರಿನ ಸ್ಕೈವಾಕ್‌ ಯೋಜನೆ ಕೈಬಿಟ್ಟದ್ದು ಸೇರಿದಂತೆ ಹಲವು ಅಪಸವ್ಯಗಳಿಗೆ ಸಾಕ್ಷಿಯಾಗಿತ್ತು.

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಾಧಿಕಾರಕ್ಕೆ ಅಧ್ಯಕ್ಷರು-ಸದಸ್ಯರ ನೇಮಕ ಮಾಡಿಲ್ಲ. ಕುಮಟಾದ ಶಾಸಕರಾಗಿದ್ದ ಶಾರದಾ ಮೋಹನ್‌ ಅವರು ಪ್ರಾಧಿಕಾರದ ಕೊನೆಯ ಅಧ್ಯಕ್ಷರು. ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ಇತ್ತು. ಹೊಸ ಕಾರು ಇದ್ದರೂ ಅಧ್ಯಕ್ಷರಿಲ್ಲದೆ ಸುಮ್ಮನಿದೆ. ಹಾಳಾಗದಿರಲಿ ಎಂದು ಎರಡು ವಾರಕ್ಕೊಮ್ಮೆ ಕಾರನ್ನು ಸಿಬಂದಿ ಚಾಲನೆಗೊಳಿಸಿ ಆಫ್‌ ಮಾಡಿಡುತ್ತಾರೆ.

ರಸ್ತೆ, ಪ್ರವಾಸೋದ್ಯಮ, ಬಂದರು ಸೇರಿದಂತೆ ಸಾರ್ವಜನಿಕ – ಖಾಸಗಿ ಪಾಲುದಾರಿಕೆಯೊಂದಿಗೆ ಯೋಜನೆಗಳನ್ನು ಗುರುತಿಸಿ ಡಿಪಿಆರ್‌ (ವಿಸ್ತೃತ ಯೋಜನ ವರದಿ)ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸುವುದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಜವಾಬ್ದಾರಿ. ಈ ಸಂಬಂಧ ತಲಪಾಡಿಯಿಂದ ಉತ್ತರ ಕನ್ನಡದವರೆಗೆ ಮೀನುಗಾರಿಕೆ ರಸ್ತೆ, ಅತ್ರಾಡಿಯಿಂದ ಬಜಪೆ ವಿಮಾನ ನಿಲ್ದಾಣದವರೆಗೆ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳ ಡಿಪಿಆರ್‌ ಸರಕಾರಕ್ಕೆ ಸಲ್ಲಿಸಿದ್ದರೂ ಸರಕಾರ ಮಾತ್ರ ಈ ವರದಿಗಳಿಗೆ ನ್ಯಾಯ ಒದಗಿಸಿಲ್ಲ. ಈ ಮೂಲಕ ಪ್ರಾಧಿಕಾರದ ಬಗ್ಗೆ ಸರಕಾರದ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.

Advertisement

26 ಸದಸ್ಯರು
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಆರಂಭದ ಸಮಯದಲ್ಲಿ ಅಧ್ಯಕ್ಷರು ಮತ್ತು ಐವರು ಸದಸ್ಯರನ್ನು ನೇಮಿಸಲಾಗಿತ್ತು. ಬಳಿಕದ ಸರಕಾರಗಳು ತಮ್ಮಿಷ್ಟದಂತೆ ಮತ್ತು ಕೆಲವರ ಒತ್ತಾಸೆಯಂತೆ ಸದಸ್ಯರ ಸಂಖ್ಯೆಯನ್ನು ಏರಿಸುತ್ತ ಹೋಗಿವೆ. ಹೀಗಾಗಿ ಕಳೆದ ವರ್ಷ ಆರಂಭದಲ್ಲಿ ಬರೋಬ್ಬರಿ 26 ಸದಸ್ಯರಿದ್ದರು!

ಪ್ರಾಧಿಕಾರಕ್ಕೆ ವಾರ್ಷಿಕವಾಗಿ 8.85 ಕೋ.ರೂ. ಅನುದಾನ ಬರುತ್ತದೆ. ಆದರೆ ಆಡಳಿತ ವ್ಯವಸ್ಥೆ ಇಲ್ಲದ್ದರಿಂದ ಯೋಜನೆಗಳು ಇಲ್ಲಿ ಜಾರಿಯಾಗುತ್ತಿಲ್ಲ. ಹಳೆಯ ಯೋಜನೆಗಳಿಗೆ ನಿಯಮ ಪ್ರಕಾರ ಅಧಿಕಾರಿಗಳು ಹಣ ಮಂಜೂರು ಮಾಡುತ್ತಿದ್ದಾರೆ. ಸಿಬಂದಿ ಸಂಖ್ಯೆ ಕೂಡ ನಿರೀಕ್ಷೆಯಷ್ಟಿಲ್ಲ.

ಉಪಚುನಾವಣೆ ಬಳಿಕ ನೇಮಕ
ಬಿಜೆಪಿ ಸರಕಾರ ಇತ್ತೀಚೆಗಷ್ಟೇ ಆಡಳಿತಕ್ಕೆ ಬಂದಿದೆ. ವಿವಿಧ ಅಕಾಡೆಮಿ, ಪ್ರಾಧಿಕಾರಕ್ಕೆ ಅಧ್ಯಕ್ಷರು-ಸದಸ್ಯರ ನೇಮಕವನ್ನು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ ಉಪಚುನಾವಣೆ ಇದ್ದು, ಅದು ಮುಗಿದ ಬಳಿಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಸದಸ್ಯರನ್ನು ನೇಮಿಸಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಉಸ್ತುವಾರಿ ಸಚಿವರು-ದ.ಕ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next