Advertisement

ಸಂಕಷ್ಟದಲ್ಲಿ ಕರಾವಳಿ ಗೋಡಂಬಿ ಉದ್ಯಮ

10:35 AM Dec 11, 2019 | mahesh |

ಮಂಗಳೂರು: ಕರಾವಳಿಯಲ್ಲಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ ಗೋಡಂಬಿ ಉದ್ಯಮ ಪ್ರಸ್ತುತ ಸಮಸ್ಯೆಗಳ ಸುಳಿಯಲ್ಲಿದೆ. ಈ ನಡುವೆ ಆಮದಿತ ಕಚ್ಚಾ ಗೇರುಬೀಜಕ್ಕೆ ನವಮಂಗಳೂರು ಬಂದರಿನಲ್ಲಿ ದುಪ್ಪಟ್ಟು ಕಸ್ಟಮ್ಸ್‌ ಸುಂಕ ವಿಧಿಸುತ್ತಿರುವುದು ಗೋಡಂಬಿ ಉತ್ಪಾದಕರನ್ನು ಕಂಗೆಡಿಸಿದೆ.

Advertisement

ಖರೀದಿ ದರ (ಇನ್‌ವಾಸ್‌)ಕ್ಕಿಂತ ಅಧಿಕ ದರವನ್ನು ಪರಿಗಣಿಸಿ ಆಮದು ಸುಂಕ ವಿಧಿಸುತ್ತಿರುವುದು ಸಂಕಷ್ಟಕ್ಕೆ ಕಾರಣ. ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದಿದ್ದರೂ ಪರಿಹಾರವಾಗಿಲ್ಲ. ಪರಿಣಾಮವಾಗಿ ಆರ್ಥಿಕ ಸಮಸ್ಯೆಯಿಂದ ನಲುಗುತ್ತಿರುವ ಗೋಡಂಬಿ ಉದ್ದಿಮೆದಾರರು ವ್ಯವಹಾರ ತೊರೆಯಬೇಕಾದ ಪರಿಸ್ಥಿತಿ ಬಂದಿದೆ. ಇದೇ ಸ್ಥಿತಿ ಮುಂದುವರಿದರೆ ಕರಾವಳಿಯ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಗೋಡಂಬಿ ಉದ್ದಿಮೆದಾರರು.

ಏನಿದು ಸಮಸ್ಯೆ ?
ವಿದೇಶದಿಂದ ಕಚ್ಚಾ ಗೋಡಂಬಿ ಆಮದು ಸಂದರ್ಭ ನಿರ್ದಿಷ್ಟ ಸುಂಕ ಪಾವತಿಸಬೇಕು. ಆದರೆ ಮಾರುಕಟ್ಟೆಯಲ್ಲಿ ಗೋಡಂಬಿ ದರ ಇಳಿದರೂ ಸುಂಕ ಕಡಿಮೆಯಾಗಿಲ್ಲ ಎಂಬುದು ಉದ್ದಿಮೆದಾರರ ವಾದ. ಕಡಿಮೆ ಮೌಲ್ಯವನ್ನು ತೋರಿಸಿ ಆಮದು ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಕಸ್ಟಮ್ಸ್‌ ಅಧಿಕಾರಿಗಳ ಆರೋಪ.

ಮಾರುಕಟ್ಟೆಯಲ್ಲಿನ ಗೋಡಂಬಿ ಖರೀದಿ ದರದ ಆಧಾರ ದಲ್ಲಿಯೇ ಸುಂಕ ವಸೂಲಿ ಮಾಡ
ಬೇಕು ಎನ್ನುವುದು ಉದ್ದಿಮೆದಾರರ ಬೇಡಿಕೆ. ದೇಶದ ಇತರ ಬಂದರುಗಳಲ್ಲಿ ಇದೇ ವ್ಯವಸ್ಥೆಯಿದ್ದು, ಎನ್‌ಎಂಪಿಟಿಯಲ್ಲಿಯೂ ಅನುಸರಿಸಬೇಕು ಎಂಬುದು ಅವರ ವಾದ.

ಎಷ್ಟು ಹೊರೆ?
ವಾರ್ಷಿಕ 2 ಲಕ್ಷ ಟನ್‌ ಗೇರುಬೀಜ ಆಮದು ಮಾಡಲಾಗುತ್ತದೆ. ಈ ಪೈಕಿ ಒಂದು ಕಿಲೋ ಗೇರುಬೀಜಕ್ಕೆ ಸುಮಾರು 100 ರೂ. ಮೌಲ್ಯವಿದ್ದಾಗ ಸುಮಾರು 5 ರೂ.ಗಳಷ್ಟು ಸುಂಕ ವಸೂಲಿ ಮಾಡಲಾಗುತ್ತದೆ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಾಸ್ತವವಾಗಿ ಇರುವ 100 ರೂ. ಮೌಲ್ಯವನ್ನೇ ಅಧಿಕ, ಅಂದಾಜು 140 ರೂ. ಎಂದು ಪರಿಗಣಿಸಿ 2 ರೂ. ಸುಂಕ ಏರಿಸಲಾಗುತ್ತಿದೆ. ಅಂದರೆ ಪ್ರತೀ ಕೆಜಿಗೆ 7 ರೂ. ತೆರಬೇಕು. ಇದರಿಂದ ವಾರ್ಷಿಕವಾಗಿ ಅಂದಾಜು ಒಟ್ಟು 40 ಕೋ.ರೂ.ಗಳಷ್ಟು ಹೆಚ್ಚುವರಿ ಸುಂಕ ನೀಡಿದಂತಾಗುತ್ತದೆ ಎನ್ನುವುದು ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘದ ಲೆಕ್ಕಾಚಾರ.

Advertisement

ಆಮದಿತ ಗೇರುಬೀಜಕ್ಕೂ ಎಪಿಎಂಸಿ ತೆರಿಗೆ!
ದೇಶೀಯವಾಗಿ ಗೇರುಬೀಜ ಖರೀದಿಸಿದಾಗ ಎಪಿಎಂಸಿಗೆ ತೆರಿಗೆ ಪಾವತಿಸಬೇಕು. ಇದರ ಜತೆಗೆ ಈಗ ಆಮದು ಮಾಡುವವರೂ ಮಂಗಳೂರಿನ ಎಪಿಎಂಸಿಗೆ ತೆರಿಗೆ ಪಾವತಿಸಬೇಕು ಎಂದು ಇತ್ತೀಚೆಗೆ ನೋಟಿಸ್‌ ಜಾರಿ ಮಾಡಲಾಗಿದೆ. ಬೇರಾವುದೇ ರಾಜ್ಯದಲ್ಲಿ ಇಂಥ ಪದ್ಧತಿ ಇಲ್ಲ ಎನ್ನುತ್ತಾರೆ ಪ್ರಮುಖ ಗೋಡಂಬಿ ಉದ್ಯಮಿ ತುಕಾರಾಮ ಪ್ರಭು.

ಆಫ್ರಿಕದ ಗೇರುಬೀಜವನ್ನು ವಿಯೆಟ್ನಾಂನವರು ಪೈಪೋಟಿ ದರದಲ್ಲಿ ಖರೀದಿಸುತ್ತಿದ್ದಾರೆ. ಇದರಿಂದ ಭಾರತಕ್ಕೆ ಲಭ್ಯತೆ ಕಡಿಮೆಯಾಗಿದೆ. ನಾವೂ ದರ ಪೈಪೋಟಿ ನಡೆಸಿ ಗೇರುಬೀಜ ಆಮದು ಮಾಡಿದರೆ ಇಲ್ಲಿ ಇನ್ನೊಂದು ಬಗೆಯ ಸಂಕಷ್ಟ ಎದುರಾಗುತ್ತದೆ ಎನ್ನುತ್ತಾರೆ ಇನ್ನೋರ್ವ ಉದ್ಯಮಿ ಕಲಾºವಿ ಪ್ರಕಾಶ್‌.

ಉತ್ಪಾದನೆಗಿಂತ ಬೇಡಿಕೆಯೇ ಅಧಿಕ!
ರಾಜ್ಯದಲ್ಲಿ ಸುಮಾರು 60 ಸಾವಿರ ಟನ್‌ ಗೋಡಂಬಿ ಉತ್ಪಾದನೆಯಾಗುತ್ತಿದೆ. ಬೇಡಿಕೆ 3 ಲಕ್ಷ ಟನ್‌ಗಳಷ್ಟಿದ್ದು, ಸುಮಾರು ಎರಡೂವರೆ ಲಕ್ಷ ಟನ್‌ ಆಮದು ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ 33 ಸಾವಿರ ಮತ್ತು ಉಡುಪಿ ಜಿಲ್ಲೆಯಲ್ಲಿ 19,541 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಗೇರು ಕೃಷಿಯಿದೆ. ಕರಾವಳಿಯಲ್ಲಿ 300ಕ್ಕೂ ಅಧಿಕ ಸಹಿತ ರಾಜ್ಯದಲ್ಲಿ 400ಕ್ಕೂ ಅಧಿಕ ಗೇರು ಸಂಸ್ಕರಣ ಘಟಕಗಳಿವೆ. ಸುಮಾರು 60 ಸಾವಿರ ಕಾರ್ಮಿಕರು ಪ್ರತ್ಯಕ್ಷ-ಪರೋಕ್ಷವಾಗಿ ಕೆಲಸ ಮಾಡುತ್ತಿದ್ದಾರೆ.

ಅಧಿಕಾರಿಗಳ ಭರವಸೆ
ಕಸ್ಟಮ್ಸ್‌ ಸಮಸ್ಯೆಯ ಬಗ್ಗೆ ಉದ್ಯಮಿಗಳು ಮಂಗಳೂರಿನಲ್ಲಿ ಇತ್ತೀಚೆಗೆ ಜರಗಿದ ರಫ್ತು ದಾರರ ಸಮಾವೇಶದಲ್ಲಿ ಬೆಂಗಳೂರಿನ ಕಸ್ಟಮ್ಸ್‌
ವಿಭಾಗದ ಕಮಿಷನರ್‌ ಬಸವರಾಜ್‌ ನಲಗೆವ್‌ ಅವರ ಗಮನಕ್ಕೆ ತಂದಿದ್ದು, ಪರಿಹಾರ ರೂಪಿಸು ವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಕಮಿಷನರ್‌, ಸಮಸ್ಯೆ ಪರಿಹಾರಕ್ಕೆ ವಿಶೇಷ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಆಮದು ಗೇರುಬೀಜಕ್ಕೆ ಎನ್‌ಎಂಪಿಟಿ ಕಸ್ಟಮ್ಸ್‌ನಿಂದ ಹಲವು ಸಮಸ್ಯೆಗಳಾಗುತ್ತಿವೆ. ಎಲ್ಲೂ ಇಲ್ಲದ ನಿಯಮಾವಳಿಯನ್ನು ಹೊರಿಸಲಾಗುತ್ತಿದೆ. ಇದರಿಂದಾಗಿ ಗೋಡಂಬಿ ಉದ್ಯಮ ಸಂಕಷ್ಟದಲ್ಲಿದೆ. ಕೇಂದ್ರ-ರಾಜ್ಯ ಸರಕಾರ ಇದರ ಪರಿಹಾರಕ್ಕೆ ಶೀಘ್ರ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
 - ಸುಬ್ರಾಯ ಪೈ, ಅಧ್ಯಕ್ಷರು, ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘ

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next