Advertisement

ಕರಾವಳಿ: ಟೋಲ್‌ ಪಾವತಿಗೆ ಸ್ವಯಂಚಾಲಿತ ವ್ಯವಸ್ಥೆ

07:55 AM Sep 03, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಸಹಿತ ಕರಾವಳಿ ಭಾಗದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಕಟ್ಟಲು ಇನ್ನು ಮುಂದೆ ವಾಹನಗಳು ಸಾಲುಗಟ್ಟಿ ನಿಲ್ಲಬೇಕಿಲ್ಲ. ಏಕೆಂದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು “ಫಾಸ್‌ ಟ್ಯಾಗ್‌’ ಹೆಸರಿನಲ್ಲಿ ವಿನೂತನ ಇ-ಟೋಲ್‌ ಸಂಗ್ರಹ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ವಾಹನ ಸವಾರರು ಟೋಲ್‌ ಸುಂಕ ಪಾವತಿಸುವ ಕಿರಿಕಿರಿಯಿಲ್ಲದೆ ಆರಾಮವಾಗಿ ಸಂಚರಿಸಬಹುದು. 

Advertisement

ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಸರಕಾರ ನಿಯಂತ್ರಣದ ಸುರತ್ಕಲ್‌ನ ಎನ್‌ಐಟಿಕೆ ಟೋಲ್‌ನಲ್ಲಿ “ಫಾಸ್‌ಟ್ಯಾಗ್‌’ ತಂತ್ರಜ್ಞಾನ ವ್ಯವಸ್ಥೆ ಅಳವಡಿಸಿದ್ದು, ಇದ ಕ್ಕಾಗಿ ಈ ಟೋಲ್‌ನಲ್ಲಿ ಪ್ರತ್ಯೇಕ ಲೇನ್‌ ಒಂದನ್ನು ಕೂಡ ಮೀಸಲಿಡ ಲಾಗುವುದು. ಹಾಗೆಯೇ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ  ರೋಡ್‌ನ‌ ಬ್ರಹ್ಮರಕೂಟ್ಲು ಟೋಲ್‌ನಲ್ಲಿಯೂ ಶೀಘ್ರದಲ್ಲೇ ಫಾಸ್‌ಟ್ಯಾಗ್‌ ಟೋಲ್‌ ವಸೂಲಿ ವ್ಯವಸ್ಥೆ ಅಳವಡಿಸಲಾಗುತ್ತದೆ. ಆದರೆ ಸದ್ಯಕ್ಕೆ ಅಲ್ಲಿ ಪ್ರತ್ಯೇಕ ಫಾಸ್‌ಟ್ಯಾಗ್‌ ವ್ಯವಸ್ಥೆಗೆ ಸ್ಥಳಾವಕಾಶದ ಕೊರತೆಯಿದೆ. ಇನ್ನುಳಿದಂತೆ ನವಯುಗ ಸಂಸ್ಥೆಗೆ ಸೇರಿದ ಕುಂದಾಪುರದ ಸಾಸ್ತಾನ, ಉಡುಪಿಯ ಹೆಜಮಾಡಿ, ತಲಪಾಡಿ ಟೋಲ್‌ಗ‌ಳಲ್ಲಿ ಕೂಡ ಮುಂದಿನ ಒಂದು ತಿಂಗಳ ಒಳಗೆ ಫಾಸ್‌ಟ್ಯಾಗ್‌ ಟೋಲ್‌ ಸಂಗ್ರಹ ವ್ಯವಸ್ಥೆ ಅಳವಡಿಸಲು ಪ್ರಾಧಿಕಾರ ಮುಂದಾಗಿದೆ. 

“ಫಾಸ್‌ಟ್ಯಾಗ್‌’ ಅಂದರೆ ವಾಹನ ಸವಾರ ಟೋಲ್‌ ದಾಟುವಾಗ ಹಣವನ್ನು ಟೋಲ್‌ ಸಿಬಂದಿಯ ಕೈಯಲ್ಲಿ ಕೊಡುವಂತಿಲ್ಲ. ಬದಲಿಗೆ ಅವರ ಬ್ಯಾಂಕ್‌ ಖಾತೆಯಿಂದಲೇ ನೇರವಾಗಿ ಟೋಲ್‌ ನಿರ್ವಹಿಸುವ ಕಂಪೆನಿ ಖಾತೆಗೆ ಜಮೆಯಾಗುತ್ತದೆ. ಇದಕ್ಕಾಗಿ ಫಾಸ್‌ಟ್ಯಾಗ್‌ ಎಂಬ ಮೆಷಿನ್‌ ಅನ್ನು ಈ ಎಲ್ಲ ಟೋಲ್‌ ಕೇಂದ್ರದಲ್ಲಿ ಅಳವಡಿಸಲಾಗಿದೆ.

ಬ್ಯಾಂಕ್‌ನಲ್ಲಿ ಮುಂಗಡವಾಗಿ ಹಣ ಪಾವತಿಸಿ “ಫಾಸ್‌ ಟ್ಯಾಗ್‌’ ಎಂಬ ಸ್ಟಿಕ್ಕರ್‌ ಪಡೆದು ವಾಹನದ ಮುಂಭಾಗದಲ್ಲಿ ಅಂಟಿಸಬೇಕು. ಈ ಸ್ಟಿಕ್ಕರ್‌ನಲ್ಲಿ ರೇಡಿಯೋ ತರಂಗಾಂತರ ಗುರುತು ತಂತ್ರಜ್ಞಾನ ಅಳವಡಿಸಲಾಗಿರುತ್ತದೆ. ಟೋಲ್‌ ಫ್ಲಾಜಾದಲ್ಲಿ ಅಳವಡಿಸಿರುವ ಟ್ಯಾಗ್‌ ರೀಡರ್‌ ಇಂತಹ ವಾಹನಗಳ ಮುಂಭಾಗದಲ್ಲಿ ಅಂಟಿಸಿರುವ ಸ್ಟಿಕ್ಕರ್‌ನ ರೇಡಿಯೋ ತರಂಗಾಂತರವನ್ನು ಗುರುತಿಸುತ್ತದೆ. ಅದರಲ್ಲಿರುವ ದತ್ತಾಂಶವನ್ನು ಗ್ರಹಿಸಿ ಶುಲ್ಕವನ್ನು ತನ್ನಷ್ಟಕ್ಕೆ ವಾಹನ ಮಾಲಕರ ಫಾಸ್‌ಟ್ಯಾಗ್‌ ಖಾತೆಯಿಂದ ಸಂಗ್ರಹಿಸುತ್ತದೆ. ಒಂದು ವೇಳೆ ಖಾತೆಯಲ್ಲಿ ಹಣವಿಲ್ಲದಿದ್ದರೆ ಅಂಥ ಮಾಲಕರ ಹೆಸರನ್ನು ಬ್ಲ್ಯಾಕ್‌ ಲಿಸ್ಟ್‌ನಲ್ಲಿ ತೋರಿಸಲಿದ್ದು, ಖಾತೆದಾರನಿಗೆ ಮಾಹಿತಿ ರವಾನೆಯಾಗುತ್ತದೆ. ಅನಂತರದಲ್ಲಿ ಖಾತೆಗೆ ಮತ್ತೆ ಹಣ ಜಮೆ ಮಾಡುವ ಮೂಲಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

ಈ ಟೋಲ್‌ ವಸೂಲಿ ವ್ಯವಸ್ಥೆ ಸಂಪೂರ್ಣ ಎಲೆಕ್ಟ್ರಾನಿಕ್‌ ಆಧಾರಿತವಾಗಿದ್ದರೆ, ಅಂಥ ಟೋಲ್‌ಗ‌ಳಲ್ಲಿ ಪ್ರತ್ಯೇಕ ಎಲೆಕ್ಟ್ರಾನಿಕ್‌ ಲೇನ್‌ ಅನ್ನು ಕೂಡ ಮಾಡಲಾಗುತ್ತದೆ. ವಾಹನ ಸಾಗುವಾಗಲೇ ಅದರ ಮಾಹಿತಿ ರೀಡಿಂಗ್‌ ಮಾಡುವ 
ವ್ಯವಸ್ಥೆ ಅಲ್ಲಿರುತ್ತದೆ. ಸದ್ಯಕ್ಕೆ ದ.ಕ./ಉಡುಪಿ ಭಾಗದಲ್ಲಿ ಈ ರೀತಿಯ ಪೂರ್ಣ ಪ್ರಮಾಣದ ಎಲೆಕ್ಟ್ರಾನಿಕ್‌ ಟೋಲ್‌ ಅಳವಡಿಸಿಲ್ಲ. ಟೋಲ್‌ ಮೂಲಕ ವಾಹನ ದಾಟುವಾಗ ಅದರ ಕೆಳಭಾಗದಲ್ಲಿ ರೀಡಿಂಗ್‌ ಮೂಲಕ ಯಾವ ವಾಹನ 
ಹೋಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಕರಾವಳಿಯಲ್ಲಿ ಇನ್ನಷ್ಟೇ ಜಾರಿಗೆ ಬರಬೇಕಿದೆ.

Advertisement

ಎಂಟು ಲೇನ್‌ನ ಟೋಲ್‌ ವ್ಯವಸ್ಥೆ ಇರುವಲ್ಲಿ ಒಂದು ಲೇನನ್ನು ಫಾಸ್‌ಟ್ಯಾಗ್‌ಗೆ ಬಿಡಬೇಕು ಎಂಬ ಬಗ್ಗೆ ನಿಯಮಾವಳಿ ಇದೆ. ಕನಿಷ್ಠ 6-6 ಅಂದರೆ ಒಟ್ಟು 12 ಲೈನ್‌ ಇರುವ ಟೋಲ್‌ನಲ್ಲಿ ಪ್ರತ್ಯೇಕ ಲೈನ್‌ ಒದಗಿಸಲು ಸಾಧ್ಯವಾಗುತ್ತದೆ. ಆದರೆ, ಸುರತ್ಕಲ್‌ ಟೋಲ್‌ನಲ್ಲಿ ಪ್ರಸ್ತುತ ಆಗಮನ, ನಿರ್ಗಮನಕ್ಕೆ ತಲಾ ಮೂರರಂತೆ ಒಟ್ಟು ಆರು ಟೋಲ್‌ ಲೇನ್‌ಗಳಿವೆ. ಆದರೂ ಒಂದು ಲೇನನ್ನು ಫಾಸ್‌ಟ್ಯಾಗ್‌ಗೆ ಎಂದು ಮೀಸಲಿಡಲಾಗಿದೆ. ಆದರೆ ಎಲೆಕ್ಟ್ರಾನಿಕ್‌ ಡಿವೈಸ್‌ ಹ್ಯಾಂಡ್‌ರೀಡಿಂಗ್‌ ಮೂಲಕ ಮಾಡಲಾಗುತ್ತಿದೆ. ಫಾಸ್‌ಟ್ಯಾಗ್‌ ಮೂಲಕ ರೀಡ್‌ ಮಾಡಿ, ಬ್ಯಾಂಕ್‌ ಖಾತೆಯಿಂದ ಹಣ ಸಂಗ್ರಹಿಸಲಾಗುತ್ತಿದೆ. 

ಬ್ರಹ್ಮರಕೂಟ್ಲುವಿನಲ್ಲಿ ಆಗಮನಕ್ಕೆ ಎರಡು ಮತ್ತು ನಿರ್ಗಮನಕ್ಕೆ ಎರಡು ಟೋಲ್‌ ಲೇನ್‌ಗಳಿವೆ. ಇದರಲ್ಲಿ ಫಾಸ್‌ಟ್ಯಾಗ್‌ಗೆ ಪ್ರತ್ಯೇಕವಾಗಿ ಒಂದೊಂದು ಲೇನನ್ನು ಮೀಸಲಿಟ್ಟರೆ, ಎರಡೂ ಬದಿಯಲ್ಲಿ ಟ್ರಾಫಿಕ್‌ ಸಮಸ್ಯೆ ಉದ್ದವಾಗಿ ಬೆಳೆಯಬಹುದು. ಫಾಸ್‌ ಟ್ಯಾಗ್‌ನಲ್ಲಿ ಒಂದು ವಾಹನ ರೀಡಿಂಗ್‌ಗೆ ಕನಿಷ್ಠ 50 ಸೆಕೆಂಡ್‌ ಅಥವಾ ಗರಿಷ್ಠ 2ರಿಂದ 3 ನಿಮಿಷ ತಲುಪುತ್ತದೆ. ಇಷ್ಟು ಸಮಯವನ್ನು ಒಂದು ಲೇನ್‌ಗೆ ಮೀಸಲಿಟ್ಟರೆ ಬ್ರಹ್ಮರಕೂಟ್ಲುವಿನಲ್ಲಿ ಒಂದು ನಿಮಿಷಕ್ಕೆ ಸುಮಾರು 10 ವಾಹನಗಳಂತೆ 10,000 ವಾಹನಗಳು ಸಂಚರಿಸುವ ಹಿನ್ನೆಲೆಯಲ್ಲಿ ವಾಹನ ದಟ್ಟನೆ ಕಾಡಲಿದೆ.

ಹೀಗಾಗಿ ಇಲ್ಲಿ ಪ್ರತ್ಯೇಕ ಲೈನ್‌ ಮೀಸಲಿಡುವುದು ಹೇಗೆ ಎಂಬುದೇ ಪ್ರಶ್ನೆ. ಈ ಮಧ್ಯೆ ಸೆ.1ರಿಂದ ಟೋಲ್‌ ಪ್ಲಾಜಾದಲ್ಲಿ ಫಾಸ್‌ ಟ್ಯಾಗ್‌ ಬಳಕೆದಾರರಿಗೆ ಕನಿಷ್ಠ 1 ಲೇನ್‌ ಅನ್ನು ಮೀಸಲಿಡುವುದು ಕಡ್ಡಾಯ ಎಂಬುದಾಗಿ ಕೇಂದ್ರ ಸರಕಾರ ಸೂಚಿಸಿತ್ತು. ಇದರನ್ವಯ ಆ.31ರಂದು ಸಾಸ್ತಾನ ಟೋಲ್‌ನಲ್ಲಿ ಇದನ್ನು ಪ್ರಾಯೋಗಿಕವಾಗಿ ಪರಿಶೀಲಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆ ಎದುರಾಗಿ ಇದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಉಳಿದಂತೆ ತಲಪಾಡಿ, ಹೆಜಮಾಡಿ ಟೋಲ್‌ಗ‌ಳಲ್ಲಿ ಪ್ರತ್ಯೇಕ ಎರಡು ಟೋಲ್‌ ಲೇನ್‌ಗಳನ್ನು ಫಾಸ್‌ಟ್ಯಾಗ್‌ಗೆಂದು ಮೀಸಲಿಡಲಾಗಿದೆ. 

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next