Advertisement

ಕರಾವಳಿಯ ಆಟಿ: ಇದು ಕೇವಲ ತಿಂಗಳಲ್ಲ!

11:29 PM Jul 15, 2023 | Team Udayavani |

ಕರ್ನಾಟಕ ಕರಾವಳಿಯ ಆಟಿ ತಿಂಗಳಿಗೆ ಕ್ಷಣಗಣನೆ ಆರಂಭವಾಗಿದೆ. ಜಡಿ ಮಳೆಯ ನಡುವೆ ಆಂಗ್ಲ ಕ್ಯಾಲೆಂಡರಿನ ಜುಲೈ- ಆಗಸ್ಟ್‌ ನಡುವೆ ಮತ್ತು ಸಾಂಪ್ರದಾಯಿಕ ತುಳುವಿನ ನಾಲ್ಕನೆಯ ತಿಂಗಳು.

Advertisement

ಈ ಹಿಂದಿನ ಕಾಲಘಟ್ಟದಲ್ಲಿ ಪ್ರಚಲಿತ ಆಧುನಿಕ ಜೀವನ ಶೈಲಿಯ ಆಟಿ ಆಚರಣೆಗೂ ಬಹಳಷ್ಟು ವ್ಯತ್ಯಾಸಗಳು ಕಾಲ ಸಹಜವಾಗಿ ಉಂಟಾಗಿದೆ. ಇದು ಸಹಜ ಮತ್ತು ಅನಿವಾರ್ಯ ಕೂಡ. ಆದರೆ ಈ ಆಟಿ ಅನ್ನುವುದು ತುಳುನಾಡಿನ ಸಂಪ್ರದಾಯ ಮತ್ತು ಪರಂಪರೆಯ ಮಹತ್ವದ ಕೊಂಡಿ ಎಂಬ ಬಗ್ಗೆ ಎರಡು ಮಾತಿಲ್ಲ. ಈ ಬಗ್ಗೆ ಪುಟ್ಟ ಇಣುಕು ನೋಟ ಇಲ್ಲಿ ಪ್ರಸ್ತುತವಾಗಬಹುದು.

ಸುಮಾರು ನಾಲ್ಕೈದು ದಶಕಗಳ ಹಿಂದಿನ ವರೆಗೂ ಈ ಆಟಿ ಅನ್ನುವುದು ದುಡಿಯುವ ಶ್ರಮಿಕ; ಬೇಸಾಯವೇ ಪ್ರಧಾನವಾಗಿದ್ದ, ಆರ್ಥಿಕವಾಗಿ ಸಶಕ್ತವಲ್ಲದ ಕುಟುಂಬಗಳಿಗೆ ಪ್ರಯಾಸಕರ ಆಗಿತ್ತು.

ಆಗ ತಾನೇ ಏಣಿಲು ಭತ್ತದ ಉಳುಮೆ- ನಾಟಿ ಕಾರ್ಯ ಪೂರ್ಣಗೊಂಡು ನಿರ್ದಿಷ್ಟ ವರ್ಗಕ್ಕೆ ಆದಾಯ ಮೂಲವಿರಲಿಲ್ಲ. ನಿಜ ಅರ್ಥದ ಕಷ್ಟ ಕಾರ್ಪಣ್ಯದ ದಿನಗಳು. ಧೋ ಎಂದು ಸುರಿಯುವ ಮಳೆಯ ನಡುವೆ ಕೆಲಸ ಕಾರ್ಯಗಳಿಲ್ಲ; ಆರ್ಥಿಕ ಅಶಕ್ತ ಕುಟುಂಬಗಳಿಗೆ ಒಲೆಗೆ ಬೆಂಕಿ ಹಚ್ಚುವುದೂ ದುಸ್ತರ. ಆಗಿನ ಯಜಮಾನರಿಂದ ಅಥವಾ ಅಂಗಡಿ ಮಾಲಕರಿಂದ ಭತ್ತ, ಅಕ್ಕಿ, ಬೇಳೆ, ತರಕಾರಿ ತರಬೇಕಾದ ಅನಿವಾರ್ಯತೆ. ಯಜಮಾನರಿಂದ ಅಕ್ಕಿ ತಂದರೆ, ಮುಂದೆ ದುಡಿದು ಪೊಲಿ ಸಹಿತ ಅಂದರೆ ಅದೇ ಪ್ರಮಾಣದ ಬಡ್ಡಿ ತೆರಬೇಕು. (ಈಗ ಅಂತಹ ಪರಿಸ್ಥಿತಿ ಇಲ್ಲ).

ಮಳೆಯ ಕಾರಣ ಎಲ್ಲೂ ದೂರ ಹೋಗುವಂತಿಲ್ಲ. ಸಿಕ್ಕಿದರೆ, ಹಲಸು- ಗೆಣಸು- ತೊಜಂಕ್‌- ತಿಮರೆ- ಅಮಟೆ- ನುಗ್ಗೆಯೇ ಮೃಷ್ಟಾನ್ನ. ಹಾಗೆ ನೋಡಿದರೆ, ಈ ತಿಂಗಳ ಕೆಲವು ಆಚರಣೆಗಳಿಗೂ ಇಲ್ಲಿನ ಪರಂಪರೆಗೂ ನಂಟಿದೆ. ಕೆರೆ, ತೋಡು, ಬಾವಿ, ನದಿಗಳಿಗೆ ನೀರು- ಪ್ರವಾಹ ನುಗ್ಗಿ ಕೊಚ್ಚೆಯು ಸರಿದು ಹೋಗಿ ಮುಂದಿನ ಸೋಣಕ್ಕೆ ಶುದ್ಧ ಆಗುವುದೆಂಬ ನಂಬಿಕೆ. (ಆಟಿ, ಸೋಣ ಮತ್ತು ಆಷಾಢ- ಶ್ರಾವಣಕ್ಕೆ ಕೆಲವು ದಿನಗಳ ಅಂತರ).

Advertisement

ಆಟಿ ತಿಂಗಳು ಅಂದರೆ, ಆಟಿ ಕಳೆಂಜನ ಆಗಮನ. ಧಾರ್ಮಿಕ ಆಚರಣೆಯ ಭಾವದಲ್ಲಿ ಜನಪದೀಯ ಪರಂಪರೆ. ಮನೆ ಮನೆಗಳಿಗೆ ತೆರಳುವ ಆಟಿ ಕಳೆಂಜ ತನ್ನ ದರ್ಶನವ ನೀಡಿ ಆಟಿ ತಿಂಗಳ ದೋಷಗಳನ್ನು ಕಳೆಯುವ ನಂಬಿಕೆ. ನಿರ್ದಿಷ್ಟ ಪರಂಪರೆಯ ತಲೆಮಾರಿನವರು ಪಾರಂಪರಿಕ ಕಳೆಂಜನ ವೇಷ ಧರಿಸಿ ಬರುತ್ತಾರೆ. ತೆಂಬರೆಯ ಸದ್ದಿನ ಹಿನ್ನೆಲೆಯಲ್ಲಿ ಅಭಯದ ಮಾತುಗಳನ್ನು ನೀಡುತ್ತಾರೆ. ರೋಗ ರುಜಿನಗಳಿಂದ ಜನರನ್ನು ಮುಕ್ತಗೊಳಿಸುವುದಾಗಿ ಹೇಳುತ್ತಾರೆ. ಆಟಿ ಕಳೆಂಜದ ಚೈತನ್ಯವನ್ನು ಭೂಮಿಗೆ ತರುವ ಮೂಲಕ, ಧಾರಾಕಾರ ಮಳೆಯಿಂದ ಮಾನವನನ್ನು ರಕ್ಷಿಸಲು ಪ್ರಕೃತಿಯೊಂದಿಗೆ ವ್ಯವಹರಿಸುವ ಜನಪದೀಯ ಮಾರ್ಗವಾಗಿದೆ. ಭೂಮಿ ತಾಯಿಯ ಮೇಲೆ ನಡೆಯುವ ಅನಿಷ್ಟವನ್ನು ಓಡಿಸಲು ಮತ್ತು ಸಮೃದ್ಧಿಯನ್ನು ತರಲು ನೃತ್ಯ ಮಾರ್ಗದ ಮೂಲಕದ ಆಚರಣೆ ಆಗಿರುತ್ತದೆ.

ಎಲೆಗಳು ಮತ್ತು ಹೂವುಗಳಿಂದ ಮಾಡಿದ ಕಳೆಂಜದ ವೇಷ ಭೂಷಣಗಳು ಪರಿಸರ ಸ್ನೇಹಿ ಸಂದೇಶ ಯುತವಾಗಿರುವುದು ಗಮನಾರ್ಹ. ಶಿರಸ್ತ್ರಾಣ ಮತ್ತು ಬಣ್ಣ ಬಣ್ಣದ ಮುಖಗಳನ್ನು ಕಳೆಂಜನಿಗೆ ಕೇಪುಳದ ಕಾಂಡಗಳಿಂದ ತಯಾರಿಸ ಲಾಗುತ್ತದೆ. ತೆಂಗಿನ ಸೋಗೆಯ ಹಸುರು ಎಲೆಗಳಿಂದ ವೇಷಭೂಷಣಗಳು, ಅಡಿಕೆಯ ಹಾಳೆಯಿಂದ ಬಗೆಬಗೆಯ ಶೃಂಗಾರ ಕುಸುರಿ ಕಾರ್ಯ ರಾರಾಜಿಸುವ ಮೀಸೆ, ಪ್ರತಿಫಲವಾಗಿ ಅಕ್ಕಿ,ಭತ್ತ, ತೆಂಗು, ಅರಿಶಿಣ ಇತ್ಯಾದಿ.

ಅಗಲಿದ ಹಿರಿಯರನ್ನು ನೆನಪಿಸುವ ಕೌಟುಂಬಿಕ ಕಾರ್ಯವು ಆಟಿಯ ವಿಶೇಷ. ಈ ಮೂಲಕ ಆ ಕುಟುಂಬದ ಸಾಗಿ ಬಂದ ಹಾದಿಯ ವಿವರಗಳು
ಈಗಿನ ತಲೆಮಾರಿನ ಎಳೆಯರಿಗೆ ದೊರೆಯುವಂತಾಗಲು ಸಾಧ್ಯ.

ಆಟಿ ಕುಲ್ಲುನು ಎಂಬುದು ತುಳುನಾಡಿನ ಆಟಿ ತಿಂಗಳ ಅನನ್ಯ ಪರಂಪರೆ. ನಿರ್ದಿಷ್ಟ ಕುಟುಂಬಕ್ಕೆ ವಿವಾಹವಾಗಿ ಬಂದವಳು ತನ್ನ ತವರು ಮನೆಗೆ ತೆರಳಿ ಅಲ್ಲಿ ಒಂದು ತಿಂಗಳು ಇರುವುದು ಹಿಂದಿನ ಸಂಪ್ರದಾಯ. ಮಳೆಗಾಲ ಆರಂಭದ ಬೇಸಾಯ ಇತ್ಯಾದಿ ಕಾರ್ಯಗಳ ಧಣಿವಿನ ಬಳಿಕ ತಾಯಿ ಮನೆಯಲ್ಲಿ ಒಂದಿಷ್ಟು ವಿಶ್ರಾಂತಿ ಇದರ ಆಶಯವಾಗಿದ್ದಿರಬಹುದು.

ಆದರೆ ಈಗ ಈ ಪದ್ಧತಿ ವಸ್ತುಶಃ ಅಸ್ತಿತ್ವದಲ್ಲಿಲ್ಲ. ಹೀಗೆ ಬಗೆಬಗೆಯ ವಿಶೇಷಗಳು ಆಟಿ ತಿಂಗಳಲ್ಲಿ ಈ ಪ್ರದೇಶದಲ್ಲಿ ಕಂಡು ಬಂದರೆ; ಈ ತಿಂಗಳಲ್ಲಿ ಶುಭ ಕಾರ್ಯಗಳು ನಡೆಯುವುದಿಲ್ಲ. ಮದುವೆ, ಔತಣ, ಹಬ್ಬ, ಉತ್ಸವ ಇತ್ಯಾದಿಗಳಿಗೆ ಈ ಒಂದು ತಿಂಗಳ ಮಟ್ಟಿಗೆ ವಿರಾಮವೇ ಸರಿ. ಮಳೆಯ ಕಾರಣದಿಂದ ಓಡಾಟ ಕಷ್ಟ. ಒಂದು ಕಾಲದಲ್ಲಿ ಸಾರಿಗೆ ಸಂಪರ್ಕ ಇಲ್ಲದ ಸಂದರ್ಭದಲ್ಲಿ ಸೇತುವೆ ಇತ್ಯಾದಿ ಸೌಲಭ್ಯಗಳಿಲ್ಲದ ಕಾಲಘಟ್ಟದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಓಡಾಟ ಅಪಾಯಕಾರಿ ಎಂಬ ದೃಷ್ಟಿಯಲ್ಲಿ ಇದು ಮುಂಜಾಗ್ರತೆಯ ಪರಿಕಲ್ಪನೆಯೂ ಆಗಿರಬಹುದು. ಆಟಿ ಅಮಾ ವಾಸ್ಯೆಯ ಉಲ್ಲೇಖವಿಲ್ಲದೆ ಆಟಿ ಆಚರಣೆಯ ವಿವರ ಪೂರ್ಣಗೊಳ್ಳುವುದಿಲ್ಲ.

ಆಟಿಯ ಅಮಾ ವಾಸ್ಯೆಯನ್ನು ತುಳುವರು ಬಹಳ ಬದ್ಧತೆಯಿಂದ ಎದುರು ನೋಡುತ್ತಾರೆ. ಅಂದು ಆಟಿಯ ಮದ್ದು ಸೇವನೆಯು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕಾಡಿನಲ್ಲಿ ಬೆಳೆಯುವ ಪಾಲೆದ ಮರದ ಕೆತ್ತೆಯನ್ನು ಮುಂಜಾನೆ ಕಲ್ಲಿನಿಂದ ಕೆತ್ತಿ ತಂದು ಅದಕ್ಕೆ ವಿವಿಧ ಔಷಧೀಯ ವಸ್ತು ಬೆರೆಸಿ ಈ ಮದ್ದನ್ನು ಮನೆಯಲ್ಲಿ ತಯಾರಿಸಲಾಗುತ್ತದೆ. ಮನೆ ಮಂದಿ ಬರಿ ಹೊಟ್ಟೆಗೆ ಈ ಕಷಾಯವನ್ನು ಸೇವಿಸುತ್ತಾರೆ. ಬಳಿಕ ಮಕ್ಕಳಿಗೆ ಬೆಲ್ಲ, ಗೋಡಂಬಿ ಇತ್ಯಾದಿ ನೀಡಲಾಗುತ್ತದೆ. ಆಟಿಯ ಅಮಾವಾಸ್ಯೆ
ಯಂದು ಈ ಪಾಲೆದ ಮರದಲ್ಲಿ ಬಹುಬಗೆಯ ಔಷಧೀಯ ಗುಣಗಳು ಆವಿರ್ಭವಿಸುತ್ತವೆ ಎಂದು ತುಳುವರು ಪ್ರಾಚೀನ ಕಾಲದಿಂದಲೂ ಅರಿತವರಾಗಿದ್ದರು.

ಈ ಕಷಾಯವು ದೇಹದೊಳಗಿನ ನಂಜು ಮತ್ತಿತರ ಅನಾವಶ್ಯಕ ವಸ್ತುಗಳನ್ನು ನಿವಾರಿಸುವುದು. ಶಕ್ತಿಯನ್ನು ಸಂಚಯಿಸುವುದು ಎಂದು ಈ ಔಷಧವನ್ನು ಸೇವಿಸುವ ಕ್ರಮವಿತ್ತು. ವೈಜ್ಞಾನಿಕವಾಗಿಯೂ ಈ ಅಂಶವನ್ನು ಕೆಲವು ಸಂಶೋಧನೆಗಳು ದೃಢೀಕರಿಸಿವೆ ಅನ್ನುವುದು ತುಳುವರಲ್ಲಿದ್ದ ಜನಪದೀಯ ಔಷಧ ಜ್ಞಾನಕ್ಕೆ ದೃಷ್ಟಾಂತವಾಗಿದೆ. ಈಗ ಎಲ್ಲರಿಗೂ ಕಾಡಿನಿಂದ ತರಲು ಸಾಧ್ಯವಿಲ್ಲ. ಈ ಕಾರಣದಿಂದ ಧಾರ್ಮಿಕ ಕೇಂದ್ರಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಆಟಿ ಅಮಾವಾಸ್ಯೆಯ ಮುಂಜಾನೆ ಈ ಔಷಧ ವಿತರಣೆಯ ವ್ಯವಸ್ಥೆ ಬೆಳೆದು ಬಂದಿದೆ. ಸೇವನೆಯ ಬಳಿಕ ಮನೆ ಮಂದಿ ಮೆಂತೆಯ ಗಂಜಿಯನ್ನು ಸೇವಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ.

ಅಂದಹಾಗೆ
ಆಟಿ ತಿಂಗಳ ಕೆಲವು ಖಾದ್ಯಗಳ ವಿವರ ಹೀಗಿದೆ (ಕೆಲವು ಖಾದ್ಯಗಳು ಬೇರೆ ತಿಂಗಳಲ್ಲೂ ಬಳಕೆಯಾಗಬಹುದು ಮತ್ತು ಈ ಖಾದ್ಯಗಳಲ್ಲಿ ಆಟಿಯಲ್ಲಿ ಒಂದೆರಡು ಮಾತ್ರ ಬಹು ಕುಟುಂಬಗಳಿಗೆ ಸಾಧ್ಯವಾಗಿತ್ತು): ಹಲಸಿನ ಹಪ್ಪಳ- ಮಾಂಬಳ- ಹಲಸಿನ ತೇಗದೆಲೆಯ ಗಟ್ಟಿ-ದೋಸೆ- ಗಾರಿಗೆ- ಸಾಂತಾಣಿ- ರಚ್ಚೆಯ ಸೋಂಟೆ; ಮಾವಿನ ರಸಾಯನ ಮಾಂಬಳ ಚಟ್ನಿ, ತಿಮರೆ ಚಟ್ನಿ, ತೊಜಂಕಿನ ಅಂಬಡೆ, ನುಗ್ಗೆ, ಹರಿವೆ ಇತ್ಯಾದಿ ಸೊಪ್ಪುಗಳು, ಕಲ ಲಾಂಬು- ಕಣಿಲೆ, ನೆಲ್ಲಿ- ಪೇರಳೆ- ಶುಂಠಿ- ತಂಬುಳಿ, ಕುಡು ಸಾರ್‌, ಕುಲ್ಕೊಟೆ, ಕೆಸುವಿನ ಮತ್ತು ತದ್ರೂಪಿ ಎಲೆಗಳ ಪತ್ರೊಡೆ, ಉದ್ದಿನ ಹಪ್ಪಳ.

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next