ಬೆಂಗಳೂರು: ಕಳೆದ 3 ದಶಕಗಳಿಂದ ಕರಾವಳಿಯ ಶ್ರೀಮಂತ ಸಂಸ್ಕೃತಿಯ ಪರಂಪರೆಯನ್ನು ಬಿಂಬಿಸುವ ಕಲಾಕೃತಿ ಹಾಗೂ ರಾಜ ಕಾಲದ ನಾಣ್ಯ, ಅಪರೂಪದ ವಸ್ತುಗಳ ಸಂಗ್ರಹ ಪ್ರದರ್ಶನಕ್ಕೆ ಬೆಂಗಳೂರಿಗರು ಮನಸೋತರು.
ಕಂಬಳ ಉತ್ಸವದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದ ಹಿರ್ಗಾನ ಮೂಲದ ದಂಪತಿಗಳಾದ ಸುಧಾಕರ್ ಶೆಟ್ಟಿ ಹಾಗೂ ಆಶಿತಾ ಶೆಟ್ಟಿ ಎಸ್. ಕದಂಬ ಅವರ “ಶ್ರೀ ದತ್ತ ತುಳು ಜಾನಪದ ಕೇಂದ್ರ’ ವಸ್ತು ಪ್ರದರ್ಶನ ಮಳಿಗೆಗೆ ಜನರಿಂದ ಉತ್ತಮ ಸ್ಪಂದನೆ ದೊರಕಿದೆ.
ಈ ದಂಪತಿ 3 ದಶಕಗಳಿಂದ ಸಂಗ್ರಹಿಸಿದ ತುಳುನಾಡಿನ ಇತಿಹಾಸ ಮತ್ತು ಧಾರ್ಮಿಕ ಆಚರಣೆಗಳು ಸೇರಿದಂತೆ ವಿವಿಧ ಅಂಶಗಳನ್ನು ಬಿಂಬಿಸುವ ಕಲಾಕೃತಿಗಳು ಮತ್ತು ಸಾಂಪ್ರದಾಯಿಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಯಿತು. ಇಲ್ಲಿ ದೈವಾರಾಧನೆ, ದೇವತಾ ಆರಾಧನೆ, ನಾಗಾರಾಧನೆ, ಯಕ್ಷಗಾನ, ಕ್ರೀಡೆ ಮತ್ತು ಕಲೆಗಳನ್ನು ಆಧರಿಸಿ ವಸ್ತುಗಳು ಪರಿಚಯ ಬೆಂಗಳೂರಿಗೆ ಆಗಿದೆ.
ಪ್ರಾಚ್ಯ ನಾಣ್ಯ ಸಂಗ್ರಹ: ಗುಪ್ತ, ಮೌರ್ಯ, ಶಾತವಾಹನ, ಪಾಂಡ್ಯರು, ಕುಶಾನರು, ಚೋಳರು ಇನ್ನಿತರ ಸುಮಾರು 75 ರಾಜರ ಆಳ್ವಿಕೆಯಲ್ಲಿ ಬಳಕೆಯಾಗಿರುವ ಸುಮಾರು 400 ನಾಣ್ಯಗಳ ಸಂಗ್ರಹವನ್ನು ಇಲ್ಲಿ ಕಾಣಬಹುದು. ಈ ಪ್ರಾಚ್ಯ ನಾಣ್ಯಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ಆಸಕ್ತಿಯನ್ನು ಮೂಡಿಸುವಂತಿದೆ. ಜತೆಗೆ ಸುಮಾರು 150 ದೇಶ-ವಿದೇಶಗಳ ವಿವಿಧ ಮುಖಬೆಲೆಯ ನೋಟುಗಳಿವೆ.
ಬ್ರಿಟಿಷರ ಕಾಫಿ ಫಿಲ್ಟರ್: ಸುಮಾರು 100 ವರ್ಷಗಳ ಹಳೇ ಬ್ರಿಟಿಷರು ಬಳಸುತ್ತಿದ್ದ ಕಾಫಿ ಫಿಲ್ಟರ್ ಸುಂದರವಾಗಿದ್ದು, ಅಂದಿನ ಕಾಲದ ತಂತ್ರಜ್ಞಾನಕ್ಕೆ ಬೆಂಗಳೂರಿಗರು ಮನಸೋತರು ಅಂದು ಬ್ರಿಟಿಷರು ಬಳಸುತ್ತಿದ್ದ ಮದ್ಯದ ಬಾಟಲಿಗಳು ಇದ್ದವು. ಇನ್ನೂ ಹಿಂದೆ ತುಳುನಾಡಿನ ಮನೆಗಳಲ್ಲಿ ಬಳಸುತ್ತಿದ್ದ ಸಾಂಪ್ರದಾಯಿಕ ಕೃಷಿ ಸಲಕರಣೆಗಳು, ಮರದ ದೀಪಕಂಬ, ವಿವಿಧ ಪ್ರಾಣಿಯಾಕಾರದಲ್ಲಿರುವ ಕತ್ತರಿಗಳು, ಆಯುಧಗಳು, ಹಿತ್ತಳೆ ಹಾಗೂ ಕಂಚಿನ ಪಾತ್ರೆಗಳು, ತೂಕದ ಕಲ್ಲುಗಳು ಹಾಗೂ ರಾಜ ಮಹಾರಾಜರ ಕಾಲದ ಆಯುಧಗಳು ವಸ್ತುಗಳ ಸಂಗ್ರಹದಲ್ಲಿ ಕಾಣ ಸಿಕ್ಕಿದೆ.
ಪುಟಾಣಿ ಟೀವಿ!: ವಸ್ತು ಪ್ರದರ್ಶನದಲ್ಲಿ ಅತ್ಯಂತ ಪುರಾತನ ಹಾಗೂ ಪುಟ್ಟಾಣಿ ಟಿವಿ, ಕೈ ಕತ್ತಿ-ಮರ್ಗಿ, ಪತಾಸು, ಪೆಟ್ಟಿಗೆ, ಕೈ ಕನ್ನಡಿ, ಕುಟಾಣಿ, ಮರದ ಬಾಚಣಿಗೆ, ಮರದ ಸೌಟುಗಳು ಹಾಗೂ ವಿವಿಧ ಆಕಾರದ ಅಪರೂಪದ ಪಾತ್ರೆಗಳ ಜತೆಗೆ ಮಾಹಿತಿ ಪಡೆದು ಸಾರ್ವಜನಿಕರು ಫೋಟೋ ಕ್ಲಿಕಿಸಿಕೊಂಡರು.
2ನೇ ತರಗತಿಯಲ್ಲಿ ಪುರಾತನ ನಾಣ್ಯಗಳ ಸಂಗ್ರಹಕ್ಕೆ ಒಲವು ಮೂಡಿತ್ತು. ಮದುವೆ ಬಳಿಕ ಪತಿ ಜತೆ ಸೇರಿದಂತೆ ಅಪರೂಪದ ವಸ್ತುಗಳ ಸಂಗ್ರಹಕ್ಕೆ ಮುಂದಾಗಿದ್ದೇವೆ. ಇಂದು 15 ಸಾವಿರ ರೂ. ಕೊಟ್ಟರೂ ಪುರಾತನ ನಾಣ್ಯಗಳು ಸಿಗುತ್ತಿಲ್ಲ. ಬೆಂಗಳೂರಿನ ಜನರು ತುಳುನಾಡಿ ದೈವ-ದೇವರಿಗೆ ಸಂಬಂಧಿಸಿದ ವಸ್ತುಗಳ ಬಗ್ಗೆ ಹೆಚ್ಚಿನ ಆಸ್ತಕಿ ವಹಿಸಿ ಕೇಳುತ್ತಿದ್ದಾರೆ
. –ಆಶಿತಾ ಶೆಟ್ಟಿ ಎಸ್. ಕದಂಬ, ಪುರಾತನ ವಸ್ತು ಸಂಗ್ರಾಹಕರು.
ನಾನು ಕರಾವಳಿ ಮೂಲದವಳು. ಆದರೆ ನನಗೆ ಮಾಹಿತಿ ಇರದ ಅನೇಕ ತುಳುನಾಡಿನಲ್ಲಿ ಬಳಕೆ ಮಾಡುತ್ತಿದ್ದ ವಸ್ತುಗಳ ಪರಿಚಯವಾಗಿದೆ
. –ಸೌಜನ್ಯ, ಬೆಂಗಳೂರು.
–ತೃಪ್ತಿ ಕುಮ್ರಗೋಡು