Advertisement

ಕರಾವಳಿಯಲ್ಲಿ  ನಾಳೆ ಅಘೋಷಿತ ಬಂದ್‌ ಸಾಧ್ಯತೆ

10:09 AM Mar 22, 2020 | Sriram |

ಮಂಗಳೂರು/ಉಡುಪಿ: ಕೋವಿಡ್‌ 19 ಭೀತಿ ಹೆಚ್ಚಾಗುತ್ತಿರುವುದರಿಂದ ಸುರಕ್ಷತಾ ಕ್ರಮಗಳನ್ನು ಜನರು ಕೈಗೊಳ್ಳುವ ಇರಾದೆಯಿಂದ ರವಿವಾರ (ಮಾ.22)
“ಜನತಾ ಕರ್ಫ್ಯೂ’ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆಗೆ ದ.ಕ., ಉಡುಪಿ ಮತ್ತು ಕೊಡುಗು ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ, ರವಿವಾರ ದ.ಕ. ಜಿಲ್ಲೆಯಾದ್ಯಂತ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಲಿದೆ.

Advertisement

ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಆಟೋರಿಕ್ಷಾ ಸಂಚಾರ ನಿರ್ಧಾರದ ಬಗ್ಗೆ ಶನಿವಾರ ತೀರ್ಮಾನವಾಗಲಿದೆ. ಹಾಲು ಸೇರಿದಂತೆ ನಿತ್ಯ ಬಳಕೆಯ ವಸ್ತುಗಳು ಎಂದಿನಂತೆ ಸಿಗಲಿವೆ ಎಂದು ಮೂಲಗಳು ತಿಳಿಸಿವೆ.

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರವಿವಾರ ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಯಾವುದೇ ರೀತಿಯ ಮೀನುಗಾರಿಕಾ ವ್ಯವಹಾರ ನಡೆಯುವುದಿಲ್ಲ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಕೋವಿಡ್‌ 19 ವೈರಸ್‌ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ರವಿವಾರ ಒಂದು ದಿನದ ಜನತಾ ಕರ್ಫ್ಯೂನಲ್ಲಿ ಸರ್ವರೂ ಕೈಜೋಡಿಸಬೇಕು. ಅಂದು ಒಂದು ದಿನ ಮನೆಯಲ್ಲೇ ಉಳಿದುಕೊಳ್ಳುವಂತೆ ಶಾಸಕರಾದ ವೇದವ್ಯಾಸ ಕಾಮತ್‌ ಮತ್ತು ಕೆ.ರಘುಪತಿ ಭಟ್‌ ಮನವಿ ಮಾಡಿದ್ದಾರೆ.

ಯಶಸ್ವಿಗೆ ಜಿಲ್ಲಾ ಬಿಜೆಪಿ ಆಗ್ರಹ
ಕೋವಿಡ್‌ 19 ವೈರಸ್‌ ಸೋಂಕು ಹರಡುವುದನ್ನು ತಡೆಯಲು ಪ್ರಧಾನಿ ಮೋದಿಯವರು ಕರೆ ನೀಡಿರುವ ರವಿವಾರದ ಜನತಾ ಕರ್ಪೂÂವನ್ನು ಯಶಸ್ವಿಗೊಳಿಸುವಂತೆ ದ.ಕ. ಮತ್ತು ಉಡುಪಿ ಜಿಲ್ಲಾ ಬಿಜೆಪಿ ಆಗ್ರಹಿಸಿದೆ. ಅಂದು ಬೆಳಗ್ಗೆ 7ರಿಂದ ರಾತ್ರಿ 9ರ ತನಕ ನಾಗರಿಕರು ಮನೆಯಲ್ಲಿಯೇ ಕುಳಿತು ಸ್ವಯಂ ಪ್ರೇರಣೆಯಿಂದ ಜನತಾ ಕರ್ಫ್ಯೂ ಪಾಲಿಸಬೇಕು ಹಾಗೂ ಆ ದಿನ ನಡೆಯಲಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಿ ಸಮಾಜದ, ದೇಶದ ಹಿತದೃಷ್ಟಿಯಿಂದ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಮತ್ತು ಸುರೇಶ ನಾಯಕ್‌ ಕರೆ ನೀಡಿದ್ದಾರೆ.

Advertisement

ಕೊಡಗಿನಲ್ಲೂ ಬೆಂಬಲ
ಜನತಾ ಕಪ್ಯೂì’ಗೆ ಕೊಡಗು ಜಿಲ್ಲಾ ಖಾಸಗಿ ಬಸ್‌ ಮಾಲಕರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಖಾಸಗಿ ಬಸ್‌ಗಳ ಸಂಚಾರ ಇರುವುದಿಲ್ಲ ಎಂದು ಸಂಘದ ಅಧ್ಯಕ್ಷ ಹೊಸೂರು ರಮೇಶ್‌ ಜೋಯಪ್ಪ ಅವರು ತಿಳಿಸಿದ್ದಾರೆ.

ಕೊಡಗು ಖಾಸಗಿ ಬಸ್‌ ಕಾರ್ಮಿ ಕರ ಸಂಘವೂ ಕರ್ಫ್ಯೂಗೆ ಬೆಂಬಲ ನೀಡಲಿದೆ. ಜಿಲ್ಲೆಯಾದ್ಯಂತ ಹೊಟೇಲ್‌ ಮತ್ತು ಬಾರ್‌ಗಳು ಕೂಡ ಬಂದ್‌ ಆಗಲಿವೆ.

ಅಗತ್ಯವಿದ್ದರೆ ಸರಕಾರಿ ಬಸ್‌ ಸೇವೆ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಕೂಡಾ ರಸ್ತೆಗಿಳಿಯುವುದು ಅನುಮಾನ. ಆದರೆ ಸಾರ್ವಜನಿಕರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಒದಗಿಸುವ ಜವಾಬ್ದಾರಿ ಇರುವುದರಿಂದ ಯಾವುದೇ ಅನಾನುಕೂಲವಾಗದಂತೆ ಎಚ್ಚರ ವಹಿಸಿ ಪ್ರಯಾಣಿಕರ ಕೋರಿಕೆ ಮೇರೆಗೆ ಅಗತ್ಯಬಿದ್ದರೆ ಬಸ್‌ ಓಡಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿಯ ಮಡಿಕೇರಿ ಘಟಕದ ವ್ಯವಸ್ಥಾಪಕಿ ಎಚ್‌. ಗೀತಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಾಳೆ ಕರಾವಳಿಯಾದ್ಯಂತ ಬಸ್‌ ಬಂದ್‌
ಪ್ರಧಾನಿ ಕರೆಯ ಹಿನ್ನೆಲೆಯಲ್ಲಿ ದ.ಕ./ಉಡುಪಿ ಜಿಲ್ಲೆಯಲ್ಲಿ ಇಡೀ ದಿನ ಖಾಸಗಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ. ಕೋವಿಡ್‌ 19 ಮಹಾಮಾರಿಯಿಂದ ಮುಕ್ತಿ ಪಡೆಯಲು ಪ್ರಧಾನಿ ಅವರ ಸಲಹೆ ಮೇರೆಗೆ ಸಾರ್ವಜನಿಕರು “ಜನತಾ ಕರ್ಫ್ಯೂ’ ಆಚರಿಸುವ ಹಿನ್ನೆಲೆಯಲ್ಲಿ ಬಸ್‌ ಸಂಚಾರ ಸ್ಥಗಿತ ಮಾಡಲು ನಿರ್ಧರಿಸಲಾಗಿದೆ ಎಂದು ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್‌ ಹಾಗೂ ಮಂಗಳೂರು ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ, ಉಡುಪಿ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕೆ. ಸುರೇಶ ನಾಯಕ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಕಾಸರಗೋಡಿಗೆ ಕೆಎಸ್‌ಆರ್‌ಟಿಸಿ ಬಸ್‌ ಇಲ್ಲ

ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ 6 ಹೊಸ ಕೋವಿಡ್‌ 19 ಸೋಂಕು ಪತ್ತೆಯಾದ ಹಿನ್ನೆಲೆ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದಿಂದ ಕಾಸರಗೋಡಿಗೆ ತೆರಳುವ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಶನಿವಾರದಿಂದ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next