Advertisement

ಕರಾವಳಿ: ಅತ್ಯಧಿಕ ಮಲೇರಿಯಾ, ಡೆಂಗ್ಯೂ

11:33 AM Mar 08, 2017 | |

ಉಡುಪಿ: ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಮಲೇರಿಯಾ, ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಜಿಲ್ಲೆಯಲ್ಲಿ ಈ ವರ್ಷದ ಜನವರಿಯಲ್ಲಿ ಒಟ್ಟು 27 ಮಲೇರಿಯಾ ಪ್ರಕರಣ ಪತ್ತೆಯಾಗಿವೆ. ರಾಜ್ಯದಲ್ಲಿ ಉಡುಪಿ ದ್ವಿತೀಯ ಸ್ಥಾನದಲ್ಲಿದ್ದು, ದ.ಕ. ಪ್ರಥಮ ಸ್ಥಾನದಲ್ಲಿದೆ. ಡೆಂಗ್ಯೂನಲ್ಲಿ ಮೈಸೂರು ಪ್ರಥಮ ಸ್ಥಾನದಲ್ಲಿದ್ದರೆ, ಉಡುಪಿ ದ್ವಿತೀಯ ಸ್ಥಾನ ಪಡೆದಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಕಾರಿ ಡಾ| ಪ್ರೇಮಾನಂದ್‌ ತಿಳಿಸಿದರು.

Advertisement

ಅವರು ಮಂಗಳವಾರ ವಾರ್ತಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತಾ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ವತಿಯಿಂದ ನಡೆದ ರಾಷ್ಟ್ರೀಯ ಕೀಟ ಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ಮಲೇರಿಯಾದಲ್ಲಿ ಜಿಲ್ಲೆಯು 3-ಕೆಟಗರಿಯಲ್ಲಿದ್ದು, “ಜಿ’ ಕೆಟಗರಿಗೆ ಬರುವಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಈಗ 1,000 ಜನರಲ್ಲಿ ಶೇ. 0.9 ಮಂದಿಗೆ ಮಾತ್ರ ಈ ರೋಗ ಕಾಣಿಸಿಕೊಳ್ಳುತ್ತಿದೆ. 2020ರಲ್ಲಿ 1 ಕೆಟಗರಿಗೆ, 2020ರಿಂದ 30ರಲ್ಲಿ ಜಿ ಕೆಟಗರಿಗೆ ಖಂಡಿತ ಬರುತ್ತೇವೆ ಎನ್ನುವ ಆಶಾಭಾವನೆ ವ್ಯಕ್ತಪಡಿಸಿದರು.

ಆನೆಕಾಲು ರೋಗ ಇಲ್ಲ
ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ಆನೆಕಾಲು ರೋಗ ಕಾಣಿಸಿಕೊಂಡಿಲ್ಲ. ರಾಯಚೂರು, ಬಳ್ಳಾರಿ, ಗುಲ್ಬರ್ಗಾ ಜಿಲ್ಲೆಗಳಲ್ಲಿ ಈ ರೋಗ ಅಧಿಕವಿದೆ. ಆ ಕಡೆಯಿಂದ ಇಲ್ಲಿಗೆ ವಲಸೆ ಕಾರ್ಮಿಕರು ಹೆಚ್ಚಾಗಿ ಬರುತ್ತಿದ್ದು, ರೋಗ ಹರಡುವ ಸಾಧ್ಯತೆ ಇದೆ. ಆನೆಕಾಲು ರೋಗ ನಿರ್ಮೂಲನೆಗೆ ಮನೆ ಮನೆಗೆ ಭೇಟಿ ನೀಡಿ ಮಾತ್ರೆ ನೀಡಲಾಗಿದೆ. 2013-14ರ ಅನಂತರ ಜಿಲ್ಲೆಯಲ್ಲಿ ಒಂದೇ ಒಂದು ಆನೇಕಾಲು ರೋಗದ ಪ್ರಕರಣ ಪತ್ತೆಯಾಗಿಲ್ಲ.

ಮೆದುಳು ಜ್ವರ ಸಂಖ್ಯೆ ಇಳಿಕೆ
ಮೆದುಳು ಜ್ವರವೂ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಹೊಸದಾಗಿ ಯಾರಲ್ಲಿಯೂ ಈ ರೋಗ ಕಾಣಿಸಿಕೊಂಡಿಲ್ಲ. 60-70 ವರ್ಷದವರಲ್ಲಿ ಮಾತ್ರ ಕಾಣಿಸಿಕೊಂಡಿದೆ. ಕಳೆದ ವರ್ಷ ಕೇವಲ 1 ಪ್ರಕರಣ ದಾಖಲಾದರೆ, 2015ರಲ್ಲಿ 3 ಪ್ರಕರಣ ದಾಖಲಾಗಿತ್ತು ಎಂದರು.

Advertisement

ಡೆಂಗ್ಯೂ ಪ್ರಕರಣ ಹೆಚ್ಚಳ
ಉಡುಪಿ ಜಿಲ್ಲೆ ಡೆಂಗ್ಯೂ ಪ್ರಕರಣಗಳಲ್ಲಿ ದ್ವಿತೀಯ ಸ್ಥಾನಿಯಾಗಿದ್ದು, ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಡೆಂಗ್ಯೂನಿಂದ ಕಾರ್ಕಳದ ಬಜಗೋಳಿಯಲ್ಲಿ ಕಳೆದ ಜುಲೈಯಲ್ಲಿ ಒಂದು ಸಾವು ಸಂಭವಿಸಿದೆ. ಮಾಳದಲ್ಲೂ ಒಬ್ಬರು ಸಾವನ್ನಪ್ಪಿದ್ದಾರೆ. 2017ರಲ್ಲಿ 29 ಪ್ರಕರಣ ದೃಢಪಟ್ಟಿದೆ. ಚಿಕೂನ್‌ಗುನ್ಯಕ್ಕೆ ಸಂಬಂಧಿಸಿ 7 ಮಂದಿಯ ರಕ್ತ ಪರೀಕ್ಷೆಗೆ ತೆಗೆದುಕೊಂಡಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯ ಎಲ್ಲ 67 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿರ್ದಿಷ್ಟ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು. ಚಿಕುನ್‌ಗುನ್ಯಾ ಹೆಚ್ಚಾಗಿ ವಲಸೆ ಕಾರ್ಮಿಕ ಹಾಗೂ ನಮ್ಮ ಜಿಲ್ಲೆಯಿಂದ ವಲಸೆ ಹೋದ ಕಾರ್ಮಿಕಧಿರಲ್ಲಿ ಕಂಡುಬಂದಿದೆ ಎಂದರು.

ಕೀಟ ಶಾಸ್ತ್ರಜ್ಞೆ ಮುಕ್ತ ಆಚಾರ್ಯ ಮಾತನಾಡಿ, ಮಳೆಗಾಲದಲ್ಲಿ ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತಿದ್ದು, ಇದರಿಂದ ಹಲವು ಕಾಯಿಲೆಗಳು ಹರಡುತ್ತದೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಧಿಬೇಕು. ಸೊಳ್ಳೆ ಉತ್ಪತ್ತಿಗೆ ಎಲ್ಲ ರೀತಿಯಿಂದಲೂ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ರೋಹಿಣಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ, ವಾರ್ತಾಧಿಕಾರಿ ಕೆ. ರೋಹಿಣಿ ಮೊದಲಾದವರು ಉಪಸ್ಥಿತರಿದ್ದರು.

ನೀರು ನಿಲ್ಲದಂತೆ ಎಚ್ಚರ ವಹಿಸಿ
ಜಿಲ್ಲೆಯಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಚಿಕೂನ್‌ಗುನ್ಯಾ, ಆನೆಕಾಲು, ಮೆದುಳು ಜ್ವರದ ಪ್ರಮಾಣ ಕಡಿಮೆಯಾಗುತ್ತಿದೆ. ಸ್ವಯಂ ಜಾಗೃತಿ ಹಾಗೂ ಮುನ್ನೆಚ್ಚರಿಕೆಯಿಂದ ಮಳೆಗಾಲದಲ್ಲಿ ಬರುವ ಕಾಯಿಲೆ ತಡೆಗಟ್ಟಲು ಸಾಧ್ಯ. ಮನೆಯ ಆವರಣದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು. ಜ್ವರ ಅಥವಾ ಯಾವುದೇ ರೀತಿಯ ರೋಗದ ಲಕ್ಷಣ ಕಂಡುಬಂದರೆ ಶೀಘ್ರ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ರಕ್ತ ಪರೀಕ್ಷೆ ಮಾಡಿಸಿ. ನೀರಿನ ಮಿತ, ಸಮರ್ಪಕ ಬಳಕೆ ಜತೆಗೆ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ. 
ಡಾ| ಪ್ರೇಮಾನಂದ,  ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next