Advertisement

ಆಪರೇಷನ್‌ ವಾಟರ್‌ ಬೇಬಿ; ಇಡುಕ್ಕಿಯಲ್ಲಿ ನಡೆದ‌ ರೋಚಕ ಕಾರ್ಯಾಚರಣೆ

06:00 AM Aug 20, 2018 | |

ತಿರುವನಂತಪುರ: ಕೇರಳದಲ್ಲಿ ಪ್ರವಾಹದಿಂದ ಉಂಟಾಗಿರುವ ಅನಾಹುತಗಳು ಅನಾವರಣಗೊಳ್ಳುತ್ತಿರುವ ನಡುವೆಯೇ ಕುತೂಹಲ, ಮನ ಕರಗುವ, ಸಾಹಸದ ಪರಿಹಾರ ಕಾರ್ಯಾಚರಣೆ ವಿವರಗಳೂ ಹೊರಬರುತ್ತಿವೆ. ಕರಾವಳಿ ರಕ್ಷಣಾ ಪಡೆ (ಕೋಸ್ಟ್‌ ಗಾರ್ಡ್‌) ಇಡುಕ್ಕಿ ಜಿಲ್ಲೆಯಲ್ಲಿ ನಡುರಾತ್ರಿ ಬಾಣಂತಿ ಮತ್ತು ಮಗುವನ್ನು ರಕ್ಷಿಸಿದ ಕಾರ್ಯವು ಈಗ “ಆಪರೇಷನ್‌ ವಾಟರ್‌ ಬೇಬಿ’ಎಂಬ ಹೆಸರಿನಿಂದ ಜನಪ್ರಿಯವಾಗಿದೆ.

Advertisement

ರಕ್ಷಣೆಗಾಗಿ 30 ಸದಸ್ಯರ ತಂಡವನ್ನು ಲೆ.ಕ.ಶಶಿಕಾಂತ್‌ ವಾಗ್ಮೋರೆ ನೇತೃತ್ವದಲ್ಲಿ ರಚಿಸಲಾಗಿತ್ತು. ಇಡುಕ್ಕಿಗೆ ಬಂದ ಅವರು ಸತತ 4 ದಿನಗಳ ಕಾಲ ಮಂಜುಮಾಲ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರು. ಆ.16ರ ರಾತ್ರಿ ಇನ್ನೇನು ವಿಶ್ರಾಂತಿ ಪಡೆಯಬೇಕು ಎಂಬಷ್ಟರಲ್ಲಿ ಸ್ಥಳೀಯ ಪೊಲೀಸ್‌ ಅಧಿಕಾರಿಗಳು, ಎನ್‌ಡಿಆರ್‌ಎಫ್, ಗ್ರಾಮಸ್ಥರು ಸಮೀಪದಲ್ಲಿಯೇ ಇದ್ದ ಮನೆಯಲ್ಲಿ ಮಹಿಳೆ ಮತ್ತು ಇತರ ಐವರು 4 ದಿನಗಳಿಂದ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸುವಂತೆ ಕೇಳಿಕೊಂಡರು. ಸಿಬ್ಬಂದಿ ಇದ್ದಲ್ಲಿಂದ 2 ಕಿಮೀ ದೂರದಲ್ಲಿ ಆ ಮನೆ ಇತ್ತು. 6 ಮಂದಿ ಸದಸ್ಯರೊಂದಿಗೆ ರಾತ್ರಿ 10.30ರ ವೇಳೆಗೆ ಪ್ರವಾಹದ ಎದುರಾಗಿ ದೋಣಿಗೆ ಹುಟ್ಟು ಹಾಕುತ್ತಾ ಹೋಗಬೇಕಾಯಿತು. ರಾತ್ರಿ 1.30ಕ್ಕೆ ಮನೆ ಸಮೀಪ ತಲುಪಿದೆವು ಎಂದು ವಿವರಿಸಿದ್ದಾರೆ ವಾಗ್ಮೋರೆ.

“ಆಹಾರವಿಲ್ಲದೆ ಬಾಣಂತಿ, ಆಗ ತಾನೆ ಜನಿಸಿದ ಶಿಶು ಮತ್ತು ಇತರ ಸದಸ್ಯರು ತೀರಾ ಅಸಹಾಯಕ ಸ್ಥಿತಿಯಲ್ಲಿದ್ದರು. ಸ್ಥಳೀಯ ವೈದ್ಯರೊಬ್ಬರ ಸಹಾಯದಿಂದ ಅವರನ್ನು ಸ್ಥಳಾಂತರಿಸಲಾಯಿತು. ಆ ಕುಟುಂಬ ಯಾರೂ ತಮ್ಮ ನೆರವಿಗೆ ಬರುತ್ತಾರೆಂದು ಕಲ್ಪಿಸಿಯೂ ಇರಲಿಲ್ಲ’ ಎಂದು ವಾಗ್ಮೋರೆ ತಿಳಿಸಿದ್ದಾರೆ. ಕೋಸ್ಟ್‌ಗಾರ್ಡ್‌ನ ನೆರವಿನಿಂದ ಸಂತಸ ಪಟ್ಟ ಮಹಿಳೆ ಮಗನನ್ನು ಮುಂದಿನ ದಿನಗಳಲ್ಲಿ ಸೇನೆಗೆ ಸೇರಿಸಲು ಪ್ರೋತ್ಸಾಹಿಸುವೆ ಎಂದು ಹೇಳಿದ್ದಾರಂತೆ.

ಪೋಪ್‌ ಮನವಿ: ಕೇರಳದ ಸ್ಥಿತಿ ಆತಂಕಕಾರಿ. ಅವರಿಗಾಗಿ ನೆರವು ನೀಡಬೇಕಾಗಿದೆ ಎಂದು ಪೋಪ್‌ ಫ್ರಾನ್ಸಿಸ್‌ ಜಾಗ ತಿಕ ಸಮು ದಾ ಯಕ್ಕೆ ಕರೆ ನೀಡಿದ್ದಾರೆ. 

ರಕ್ಷಣೆಗೆ ಬೆನ್ನನ್ನೇ ಒಡ್ಡಿಕೊಂಡ
ರಕ್ಷಣಾ ಕಾರ್ಯಾಚರಣೆ ವೇಳೆ ಎನ್‌ಡಿಆರ್‌ಎಫ್ಗೆ ಮಲಪ್ಪುರಂನಲ್ಲಿ ನೆರವು ನೀಡಿದ್ದು, ಮೀನುಗಾರ ಜೈಸಲ್‌ ಕೆ.ಪಿ. ಅವರು ಎನ್‌ಡಿಆರ್‌ಎಫ್ ಸಿಬ್ಬಂದಿಯ ದೋಣಿಗೆ ಹಿರಿಯ ನಾಗರಿಕರು ಮತ್ತು ಅಶಕ್ತರು ಏರಲು ಮೆಟ್ಟಿಲಾಗಿ ತಮ್ಮ ಬೆನ್ನನ್ನೇ ಬಳಕೆ ಮಾಡುವಂತೆ ಮಲಗಿಕೊಂಡು ಸಹಾಯ ಮಾಡಿದ್ದಾರೆ. ಈ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅವರು ತನೂರ್‌ ಎಂಬಲ್ಲಿಯ ನಿವಾಸಿ. ವೆಂಗರ ಎಂಬಲ್ಲಿಗೆ ತೆರಳಲು ಅಸಾಧ್ಯವಾಗದೆ ನಿಂತಿದ್ದರು. ಅದನ್ನು ತಿಳಿದು ಅವರಿಗೆ ನೆರವಾಗುವ ನಿಟ್ಟಿನಲ್ಲಿ ದೋಣಿಯನ್ನು ಪಡೆದುಕೊಂಡು ವೃದ್ಧರು ಮತ್ತು ಇತರರನ್ನು ರಕ್ಷಿಸಿ ಕರೆ ತಂದಿದ್ದಾರೆ. ಈ ಸಂದರ್ಭದಲ್ಲಿ ದೋಣಿ ಏರಲು ಮೆಟ್ಟಿಲಿನಂತೆ ನೀರಿನಲ್ಲಿ ಮಲಗಿ ಅವರೆಲ್ಲರೂ, ಸುರಕ್ಷಿತವಾಗಿ ಪಾರಾಗಲು ನೆರವಾಗಿದ್ದಾರೆ. 

Advertisement

19 ನಾಯಿಗಳ ರಕ್ಷಣೆ: ಕೊಟ್ಟಾಯಂನ ಮನೆಯೊಂದರಿಂದ 19 ನಾಯಿ ಗಳನ್ನು ಎನ್‌ಡಿಆರ್‌ಎಫ್ ರಕ್ಷಿಸಿದೆ. ರಕ್ಷಣೆಗಾಗಿ ಅವುಗಳು ಬೊಗಳುತ್ತಿ ದ್ದುದರಿಂದ ಸಿಬ್ಬಂದಿಗೆ ಅವುಗಳನ್ನು ರಕ್ಷಿಸಲು ಸಾಧ್ಯವಾಯಿತು. 

ಗೋವಾಕ್ಕೂ ಕೇರಳದ ಗತಿಯೇ: ಗಾಡ್ಗಿಳ್‌
ಪಶ್ಚಿಮ ಘಟ್ಟ ಸಂರಕ್ಷಣೆ ಬಗ್ಗೆ ವರದಿ ನೀಡಿರುವ ಖ್ಯಾತ ವಿಜ್ಞಾನಿ ಪ್ರೊ.ಮಾಧವ ಗಾಡ್ಗಿಳ್‌ ಕೇರಳದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಗೋವಾದಲ್ಲಿಯೂ ಉಂಟಾದೀತು ಎಂದು ಎಚ್ಚರಿಕೆ ನೀಡಿದ್ದಾರೆ. ಪರಿಸರ ಸಂರಕ್ಷಣೆಯ ಕ್ರಮಗಳನ್ನು ಗೋವಾದಲ್ಲಿ ರಾಜ್ಯ ಸರ್ಕಾರ ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿಸಿದ್ದಾರೆ. “ಪರಿಸರಕ್ಕೆ ಧಕ್ಕೆಯಾಗಿರುವುದ ರಿಂದಲೇ ಪಶ್ಚಿಮ ಘಟದಲ್ಲಿ ಸದ್ಯ ಅನಾಹುತ ಉಂಟಾಗಿದೆ. ಕೇರಳಕ್ಕೆ ಹೋಲಿಕೆ ಮಾಡಿದರೆ ಗೋವಾದಲ್ಲಿ ಪಶ್ಚಿಮ ಘಟ್ಟ ಪ್ರದೇಶ ಇಲ್ಲವಾದರೂ, ಲಾಭಕ್ಕಾಗಿ ಪರಿಸರದ ಮೇಲೆ ನಡೆಸುತ್ತಿರುವ ಹಾನಿಯು ಗೋವಾಗೆ ಪ್ರತಿಕೂಲವಾಗಿ ಪರಿಣಮಿಸಲಿವೆ’ ಎಂದಿದ್ದಾರೆ.

ಸಾಗಣೆ ವೆಚ್ಚ ಪಡೆಯುವುದಿಲ್ಲ
ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಕೇರಳಕ್ಕೆ ನೀಡುವ ವಸ್ತುಗಳ ಸಾಗಣೆಯನ್ನು ಶುಲ್ಕ ಪಡೆಯದೆ ಸಾಗಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಪ್ರಕಟಿಸಿದ್ದು, ಎನ್‌ಜಿಒಗಳು ಕಳುಹಿಸುವ ಸಾಮಗ್ರಿಗಳ ವಿವರಗಳನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಕಳುಹಿಸಿದ ಬಳಿಕವೇ ಸಾಗಣೆಗೆ ಪರಿಗಣಿಸಲಾಗುತ್ತದೆ ಎಂದಿದೆ. ಇದೇ ವೇಳೆ, ರಾಜ್‌ಕೋಟ್‌ನಿಂದ ಪಶ್ಚಿಮ ರೈಲ್ವೆ ಕೇರಳಕ್ಕೆ 9 ಲಕ್ಷ ಲೀ. ನೀರು ಕಳುಹಿಸಿಕೊಟ್ಟಿದೆ. ಕೇಂದ್ರ ರೈಲ್ವೆ ಕೂಡ ಪುಣೆಯಿಂದ 14 ಲಕ್ಷ ಲೀ. ಕುಡಿವ ನೀರನ್ನು ಟ್ಯಾಂಕ್‌ಗಳ ಮೂಲಕ ಕಳುಹಿಸಿಕೊಟ್ಟಿದೆ.

ನೆರವಾದ 5 ಉಪಗ್ರಹ
ಕೇರಳದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ಕಾಪಾಡಿದ್ದು ಇಸ್ರೋದ ಓಶನ್‌ಸ್ಯಾಟ್‌-2, ರಿಸೋರ್ಸ್‌ಸ್ಯಾಟ್‌-2, ಕಾಟೋìಸ್ಯಾಟ್‌2 ಮತ್ತು 2ಎ ಮತ್ತು ಇನ್‌ಸ್ಯಾಟ್‌ 3ಡಿಆರ್‌ ಉಪಗ್ರಹಗಳು. ಇವು ಮಳೆ ಮತ್ತು ಪ್ರವಾಹದ ಸ್ಥಿತಿಯ ತಾಜಾ ಫೋಟೋಗಳನ್ನು ರವಾನೆ ಮಾಡಿದ್ದವು. ಹೈದರಾಬಾದ್‌ನಲ್ಲಿರುವ ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ನಲ್ಲಿರುವ ಡಿಸಿಷನ್‌ ಸಪೋರ್ಟ್‌ ಸೆಂಟರ್‌ ಈ ಫೋಟೋಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಹೀಗಾಗಿ, ರಕ್ಷಣಾ ಪಡೆಗಳಿಗೆ ಕ್ಷಿಪ್ರ ಕಾರ್ಯಾಚರಣೆ ಸಾಧ್ಯವಾಯಿತು.

ಶಿಬಿರದಲ್ಲೇ ಮದುವೆ
ಮಲಪ್ಪುರಂ ಜಿಲ್ಲೆಯಲ್ಲಿ ಧಾರಾಕಾರ ಮಳೆಯ ನಡುವೆಯೇ ಅಂಜು ಮತ್ತು ಶೈಜು ಎಂಬುವರ ನಡುವೆ ವಿವಾಹ ನಡೆದಿದೆ. ವಧು ಅಂಜು ಅವರ ಮನೆ ನೀರಿನಲ್ಲಿ ಮುಳುಗಿದ್ದರಿಂದ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಹೀಗಾಗಿ, ಕಾರ್ಯಕ್ರಮ ಮುಂದೂಡಲಾಗಿತ್ತು. ನಿರಾಶ್ರಿತರ ಶಿಬಿರದಲ್ಲಿ ಕಾರ್ಯಕ್ರಮ ಮುಂದೂಡದಂತೆ ಒತ್ತಾಯಿಸಿದ್ದರಿಂದ ಎರಡೂ ಕುಟುಂಬದ ಸದಸ್ಯರು ಮಾತುಕತೆ ನಡೆಸಿ ವಾಲಗ ಊದಿಸಿಯೇ ಬಿಟ್ಟರು.
ಇಂದಿನಿಂದ ನೌಕಾ ನೆಲೆ ಬಳಕೆ ಏರ್‌ಇಂಡಿಯಾದ ಸಹ ಸಂಸ್ಥೆ ಅಲಯನ್ಸ್‌ ಏರ್‌ ಸೋಮವಾರದಿಂದ ಕೊಚ್ಚಿ ಮತ್ತು ಬೆಂಗಳೂರು, ಬೆಂಗಳೂರು- ಕೊಯಮತ್ತೂರು  ನಡುವೆ ವಿಮಾನ ಯಾನ ಆರಂಭಿಸಲಿದೆ. ಅದಕ್ಕಾಗಿ ಕೊಚ್ಚಿಯಲ್ಲಿರುವ ನೌಕಾಪಡೆಯ ವಿಮಾನ ನಿಲ್ದಾಣ ಬಳಕೆ ಮಾಡಲಿದೆ.

25 ಸೆಂಟ್ಸ್‌ ಸ್ಥಳ ಕೊಟ್ಟರು
ಪಟ್ಟಂಣಂತಿಟ್ಟ ಜಿಲ್ಲೆಯ ಅಡೂರ್‌ನಲ್ಲಿ ದುರಂತದಿಂದ ಅಸುನೀಗಿದವರ ಶವ ಸಂಸ್ಕಾರಕ್ಕೆ ಮತ್ತು ಹೂಳಲು ಕ್ರೈಸ್ತ ಧರ್ಮಗುರು ಕುರುವಿಳ ಕುಳಂಜಿಕೊಂಪಿಲ್‌ ಸಾಮ್ಯು ವೆಲ್‌ (49) 25 ಸೆಂಟ್ಸ್‌ ಜಮೀನು ನೀಡುವುದಾಗಿ ತಿಳಿಸಿದ್ದಾರೆ. ಯಾವುದೇ ಜಾತಿ, ಜನಾಂಗದ ಅಭ್ಯಂತರವಿಲ್ಲದೆ ಅದನ್ನು ಬಳಕೆ ಮಾಡಿಕೊಳ್ಳ ಬಹುದು ಎಂದು ತಿಳಿಸಿದ್ದಾರೆ. 

ಶಿಬಿರದಲ್ಲಿ ಜಡ್ಜ್ ಕುಟುಂಬ
ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್ರ ಕುಟುಂಬ ಸದಸ್ಯರು ಕಾಲಡಿಯಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. 3 ದಿನಗಳ ಹಿಂದೆ ಅವರು ಪ್ರವಾಹದ ಹಿನ್ನೆಲೆಯಲ್ಲಿ ಮನೆ ಬಿಟ್ಟು ಬರಬೇಕಾಯಿತು ಎಂದಿದ್ದಾರೆ. ನ್ಯಾ.ಕುರಿಯನ್‌ ಫೋನ್‌ ಮೂಲಕ ಅವರನ್ನು ಸಂಪರ್ಕಿಸಲೂ ಸಾಧ್ಯವಾಗಲಿಲ್ಲ. ಇದೇ ವೇಳೆ, ಸುಪ್ರೀಂ ಕೋರ್ಟ್‌ ಹೊರಗಡೆ ಇಟ್ಟಿದ್ದ ಪರಿಹಾರ ನಿಧಿಯ ಪೆಟ್ಟಿಗೆಗೆ ನ್ಯಾ. ಕುರಿಯನ್‌ ಅವರು ದೇಣಿಗೆ ಹಾಕುವ ಫೋಟೋ ವೈರಲ್‌ ಆಗಿದೆ.

ನೆರವಿನ ಮಹಾಪೂರ
ಕತಾರ್‌ ಕೂಡ ಕೇರಳಕ್ಕೆ 34.89 ಕೋಟಿ ರೂ. ನೆರವು ಘೋಷಣೆ ಮಾಡಿದೆ. ಕೇರಳ ಮೂಲದ ದುಬೈ ಉದ್ಯಮಿ ಯೂಸುಫ್ ಅಲಿ ಎಂ.ಎ. 12.5 ಕೋಟಿ ರೂ. ರೂ. ನೆರವು ನೀಡುವ ವಾಗ್ಧಾನ ಮಾಡಿದ್ದಾರೆ. ಅವರು ಯುಎಇನ ಲುಲು ಗ್ರೂಪ್‌ನ ಅಧ್ಯಕ್ಷರಾಗಿ ದ್ದಾರೆ. ಕರ್ನಾಟಕ ಮೂಲಕ ಬಿ.ಆರ್‌.ಶೆಟ್ಟಿ 2 ಕೋಟಿ ರೂ. ನೆರವಿನ ವಾಗ್ಧಾನ ಮಾಡಿದ್ದಾರೆ. ನಟ ಶಾರುಖ್‌ ಖಾನ್‌ ಸಂತ್ರಸ್ತರಿಗಾಗಿ ತಮ್ಮ ಮೀರ್‌ ಫೌಂಡೇಷನ್‌ ವತಿಯಿಂದ 21 ಲಕ್ಷ ರೂ. ನೆರವು ನೀಡಿದ್ದಾರೆ. ಟಿವಿಎಸ್‌ ಮೋಟಾರ್‌ ಕಂಪನಿ 1 ಕೋಟಿ ರೂ. ನೀಡಿದೆ. 

3 ಸಾವಿರ ರೂ. ನೀಡಲು ಕ್ರಮ
ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿ ಸಿ ಕೊಂಡಿರುವ ಮೀನುಗಾರರ ಸಮುದಾಯಕ್ಕೆ ಉಚಿತ ವಾಗಿ ಇಂಧನ, ಪ್ರತಿ ದಿನ 3 ಸಾವಿರ ರೂ. ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ ಕೇರಳ ಸಿಎಂ. ಜತೆಗೆ ಯಾವ ಸ್ಥಳದಿಂದ ದೋಣಿಗಳನ್ನು ತರಲಾಗಿದೆ ಯೋ ಅಲ್ಲಿಗೆ ಸಾಗಿಸುವ ಹೊಣೆ ನಮ್ಮದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next