ಬೆಂಗಳೂರು : ಕರಾವಳಿ ಕಾವಲುಪಡೆ ಸಹಿತ ಆಂತರಿಕ ಭದ್ರತ ದಳ(ಐಎಸ್ಡಿ) ಸಿಬಂದಿಗೆ ಗುಜರಾತ್ ಮಾದರಿಯಲ್ಲಿ ತರಬೇತಿ ನೀಡಿ ಕಾರ್ಯಕ್ಷಮತೆಯನ್ನು ವೃದ್ಧಿಸಲಾಗುತ್ತಿದೆ.
ಗುಜರಾತ್ ಕರಾವಳಿ ಪಾಕಿಸ್ಥಾನಕ್ಕೆ ಹತ್ತಿರದಲ್ಲಿದ್ದು, ಸಮುದ್ರದ ಮೂಲಕ ಉಗ್ರರ ಒಳನುಸುಳುವಿಕೆಯನ್ನು ತಡೆಯುವಲ್ಲಿ ಗುಜರಾತ್ ಕರಾವಳಿಯ ಗಡಿ ಭದ್ರತಾ ಯೋಧರು ನೈಪುಣ್ಯ ಹೊಂದಿದ್ದಾರೆ. ನಮ್ಮ ಕರಾವಳಿಯಲ್ಲೂ ಇಂಥ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಐಎಸ್‌ಡಿಯ ಕರಾವಳಿ ಕಾವಲು ಪಡೆಯ ಸಿಬಂದಿಗೂ ತರಬೇತಿ ನೀಡಲಾಗುತ್ತಿದೆ. ಗುಜರಾತ್‌ನ ಒಖಾರಾದಲ್ಲಿ ಇರುವ ಬಿಎಸ್‌ಎಫ್ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಕರ್ನಾಟಕದ ಐಎಸ್‌ಡಿ ಸಿಬಂದಿಗೆ ತರಬೇತಿ ಆರಂಭವಾಗಿದೆ.
ಜಲಾಶಯಗಳ ರಕ್ಷಣೆಯ ದೃಷ್ಟಿಯಿಂದಲೂ ಈ ತರಬೇತಿ ಮಹತ್ವದ್ದು. ಕರಾವಳಿ ಕಾವಲು ಪಡೆಯ ಕಾನ್‌ಸ್ಟೇಬಲ್ ಮತ್ತು ಹೆಡ್‌ಕಾನ್ಸ್ಟೆಬಲ್ ಸ್ತರದ ಸಿಬಂದಿಗೆ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯಿಂದ ಕಾರ್ಯಾಚರಣೆಗೆ ಅನುಕೂಲವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲ ತಂಡದಲ್ಲಿ ಕರಾವಳಿ ಕಾವಲು ಪಡೆಯ 18 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಈ ತಂಡದ 3 ತಿಂಗಳ ತರಬೇತಿ ಮುಕ್ತಾಯವಾದ ಬಳಿಕ ಮತ್ತೂಂದು ತಂಡ ಕಳುಹಿಸಲಾಗುತ್ತದೆ.
ಐಎಸ್‌ಡಿ ವ್ಯಾಪ್ತಿಯಲ್ಲಿ ಇರುವ ಕರಾವಳಿ ಭದ್ರತಾ ಪಡೆಯನ್ನು ಬಲಪಡಿಸುವುದಕ್ಕಾಗಿ ಗುಜರಾತ್‌ನಲ್ಲಿ ತರಬೇತಿ ಕೊಡಿಸಲಾಗುತ್ತಿದೆ. ಈ ಮೂಲಕ ರಾಜ್ಯದ ಆಂತರಿಕ ಭದ್ರತೆಯನ್ನು ಬಲಪಡಿಸಲಾಗುತ್ತದೆ.
– ಭಾಸ್ಕರ ರಾವ್, ಐಡಿಎಸ್‌ಡಿಯ ನಿಕಟಪೂರ್ವ ಮುಖ್ಯಸ್ಥರು