Advertisement
ಬಜೆಟ್ ಮಂಡಿಸುವ ಹಾಗೂ ಮಹತ್ವದ ಖಾತೆಯಾದ ಹಣಕಾಸು ತಮ್ಮ ಬಳಿ ಇರಬೇಕು ಎಂಬುದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ವಾದ. ಆದರೆ, ಈಹಿಂದೆ ಸಮ್ಮಿಶ್ರ ಸರ್ಕಾರ ರಚನೆಯಾದಾಗಲೂ ಉಪ ಮುಖ್ಯಮಂತ್ರಿಗೆ ಹಣಕಾಸು ಖಾತೆ ನೀಡಲಾಗಿತ್ತು. ಹೀಗಾಗಿ, ನಮಗೇ ಬಿಟ್ಟುಕೊಡಬೇಕು ಎಂಬುದು ಕಾಂಗ್ರೆಸ್ ವಾದ ಎಂದು ಹೇಳಲಾಗಿದೆ.
Related Articles
Advertisement
ಮೂಲಗಳ ಪ್ರಕಾರ ಇಂಧನ, ಹಣಕಾಸು, ಗ್ರಾಮೀಣಾಭಿವೃದ್ಧಿ, ಜಲ ಸಂಪನ್ಮೂಲದಂತ ಪ್ರಮುಖ ಖಾತೆಗಳಿಗೆ ಕಾಂಗ್ರೆಸ್ ಬೇಡಿಕೆ ಇಟ್ಟಿದೆ. ಆದರೆ, ಹಣಕಾಸು, ಲೋಕೋಪಯೋಗಿಯಂತಹ ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಶನಿವಾರ ದೆಹಲಿಗೆ ತಲುಪಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿರಿಯ ನಾಯಕರ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಹ ರಾಹುಲ್‌ಗಾಂಧಿಯವರ ಬಳಿ ಖಾತೆ ಹಂಚಿಕೆ ವಿಚಾರ ಚರ್ಚಿಸಿದ್ದಾರೆ. ಹಣಕಾಸು ನಮ್ಮ ಬಳಿಯೇ ಇದ್ದರೆ ನಮ್ಮ ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂಬ ಸಮರ್ಥನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಧ್ಯೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಹಿರಿಯರಿಗೆ ಈ ಬಾರಿ ಸಂಪುಟದಲ್ಲಿ ಅವಕಾಶ ನೀಡಬೇಕೊ ಬೇಡವೋ ಎನ್ನುವ ಕುರಿತಂತೆಯೂ ರಾಹುಲ್ ಗಾಂಧಿಯೊಂದಿಗಿನ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ.
ಹಿರಿಯರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಹೆಚ್ಚಾಗಿರುವುದರಿಂದ ರಾಹುಲ್ ಗಾಂಧಿ ಸೂಚನೆಯಂತೆ ನಡೆದುಕೊಳ್ಳಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ.
ಸಚಿವ ಸ್ಥಾನ ಕೈ ತಪ್ಪುವ ಆತಂಕದಿಂದ ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್ ಸೇರಿದಂತೆ ಅನೇಕ ಹಿರಿಯ ನಾಯಕರು ದೆಹಲಿಗೆ ತೆರಳಿ ತಮ್ಮದೇ ಆದ ರೀತಿಯಲ್ಲಿ ಹೈ ಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ.
ಇನ್ನು ಪ್ರಸಾದ್ ಅಬಯ್ಯ, ಪ್ರತಾಪ್‌ಗೌಡ ಪಾಟೀಲ್, ಪಿ.ಟಿ. ಪರಮೇಶ್ವರ್ ನಾಯ್ಕ, ಅಮರೇಗೌಡ ಬಯ್ನಾಪುರ್ ಶನಿವಾರ ಬೆಳಿಗ್ಗೆಯೇ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದರೆ, ಎಂ.ಟಿ.ಬಿ ನಾಗರಾಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.
ಆರ್.ವಿ.ದೇಶಪಾಂಡೆ, ಶಾಮನೂರು ಶಿವಶಂಕರಪ್ಪ, ಎಂ. ಕೃಷ್ಣಪ್ಪ, ರೋಷನ್‌ಬೇಗ್, ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಸಂಪುಟದಲ್ಲಿ ಸ್ಥಾನ ಪಡೆಯುವ ಪ್ರಯತ್ನ ನಡೆಸಿದ್ದು, ಕಾಂಗ್ರೆಸ್ ಹೈ ಕಮಾಂಡ್ ಯಾವ ರೀತಿ ಸ್ಪಂದಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಉನ್ನತ ಮೂಲಗಳ ಪ್ರಕಾರ ಕಾಂಗ್ರೆಸ್ ಸಚಿವರಾಗುವವರ ಪಟ್ಟಿ ಶನಿವಾರ ರಾತ್ರಿಯೇ ಬಹುತೇಕ ಅಂತಿಮಗೊಂಡಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರ ಆಯ್ಕೆ ಕುರಿತಂತೆಯೂ ಹೈ ಕಮಾಂಡ್ ರಾಜ್ಯ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್‌ನಲ್ಲೂ ಕಸರತ್ತುಕಾಂಗ್ರೆಸ್ನಲ್ಲಿ ಸಂಪುಟ ವಿಸ್ತರಣೆ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ ಜೆಡಿಎಸ್‌ನಲ್ಲೂ ಸಚಿವ ಸ್ಥಾನಕ್ಕಾಗಿ ಶಾಸಕರು ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡ.ಕುಮಾರಸ್ವಾಮಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಜಿಲ್ಲಾ, ವಲಯ, ಜಾತಿವಾರು ಲೆಕ್ಕಾಚಾರದೊಂದಿಗೆ ಮಂತ್ರಿ ಪದವಿ ಬೇಡಿಕೆ ಇಡುತ್ತಿರುವ ಶಾಸಕರು, ತಮಗೆ ಸಚಿವ ಸ್ಥಾನ ನೀಡಿದರೆ ಪಕ್ಷ ಸಂಘಟನೆಗೂ ಅನುಕೂಲವಾಗುತ್ತದೆ ಎಂಬ ವಾದ ಸಹ ಮುಂದಿಡುತ್ತಿದ್ದಾರೆ. ಶನಿವಾರ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಮನವಿ ಮಾಡಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ. ನಾನೇನೂ ಸನ್ಯಾಸಿಯಲ್ಲ. ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸಲು ಸಿದ್ಧನಿದ್ಧೇನೆ ಎಂದು ಹೇಳಿದರು. ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಕಗ್ಗಂಟು ಇಲ್ಲ. ನಮ್ಮಲ್ಲಿಯೂ ಗೊಂದಲ ಇಲ್ಲ, ಕಾಂಗ್ರೆಸ್‌ನಲ್ಲೂ ಗೊಂದಲ ಇಲ್ಲ. ಹೈಕಮಾಂಡ್ ಜತೆ ಚರ್ಚಿಸಿ ಪಟ್ಟಿ ಅಂತಿಮಗೊಳಿಸಲು ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿದ್ದಾರೆ. ಅಲ್ಲಿಂದ ಒಪ್ಪಿಗೆ ಸಿಕ್ಕ ನಂತರ ಸಂಪುಟ ವಿಸ್ತರಣೆ ನಡೆಯಲಿದೆ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಂಪುಟ ವಿಸ್ತರಣೆ ಕುರಿತು ಹೈ ಕಮಾಂಡ್ ಜೊತೆ ಚರ್ಚಿಸಿ ಅಂತಿಮಗೊಳಿಸುತ್ತೇವೆ. ನನಗೆ ಇಂತದೇ ಖಾತೆ ಬೇಕೆಂದು ಪಟ್ಟು ಹಿಡಿದಿಲ್ಲ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಗೃಹ ಖಾತೆ ಬೇಕೆಂದು ಎಲ್ಲಿಯೂ ಹೇಳಿಲ್ಲ. ನಾನು ಸರ್ಕಾರದಲ್ಲಿ ಸಕ್ರೀಯನಾಗಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇರೆಯವರಿಗೆ ಅವಕಾಶ ಸಿಗಲಿ.
– ಡಾ.ಜಿ. ಪರಮೇಶ್ವರ್, ಉಪ ಮುಖ್ಯಮಂತ್ರಿ ನಾನು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿಲ್ಲ. ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಸಚಿವ ಸ್ಥಾನ ನೀಡಿದರೆ ಉತ್ತಮವಾಗಿ ಕೆಲಸ ಮಾಡುವೆ. ನಾನೇನು ಸನ್ಯಾಸಿಯಲ್ಲ. ಪಕ್ಷದ ಜವಾಬ್ದಾರಿ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಪಕ್ಷ ಮತ್ತೂಮ್ಮೆ ಅವಕಾಶ ಕೊಟ್ಟರೆ ಉತ್ತಮ ಕೆಲಸ ಮಾಡುವೆ.
– ಎಸ್. ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ. ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ. ನಾಲ್ಕು ಬಾರಿ ಶಾಸಕನಾಗಿದ್ದೇನೆ. ನನಗೂ ಸಚಿವ ಸ್ಥಾನದ ಅವಕಾಶ ನೀಡಿ ಎಂದು ಮನವಿ ಮಾಡಿದ್ದೇನೆ. ನಾಯಕರ ತೀರ್ಮಾನ ನೋಡಿಕೊಂಡು ದೆಹಲಿಗೆ ಹೋಗುವ ತೀರ್ಮಾನ ಕೈಗೊಳ್ಳುವೆ.
– ಎಂ.ಟಿ.ಬಿ.ನಾಗರಾಜ್, ಸಚಿವಾಕಾಂಕ್ಷಿ