Advertisement
ವಿದೇಶಿ ಕಲ್ಲಿದ್ದಲು ಆಮದಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರಕಿದ್ದು, ಜನವರಿಯಿಂದ ಪೂರೈಕೆಯಾಗುವ ನಿರೀಕ್ಷೆ ಇದೆ. ಜಲವಿದ್ಯುತ್ ಘಟಕಗಳಲ್ಲಿನ ನೀರಿನ ಸಂಗ್ರಹವೂ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮವಾಗಿದೆ. ಆದರೆ ಬೇಡಿಕೆ ಹೆಚ್ಚುತ್ತಿದ್ದು, ಅದಕ್ಕೆ ಪೂರಕವಾಗಿ ವಿದ್ಯುತ್ ಪೂರೈಸುವುದು ಸವಾಲೆನಿಸಿದೆ. ಆ ಹಿನ್ನೆಲೆಯಲ್ಲಿ ಕಲ್ಲಿದ್ದಲು ಗಣಿ ಸಂಸ್ಥೆಗಳಿಂದ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪಡೆಯುವ ಪ್ರಯತ್ನವನ್ನು ಇಂಧನ ಇಲಾಖೆ ಮುಂದುವರಿಸಿದೆ.
ಕಳೆದ ಅ.25ಕ್ಕೆ ರಾಯಚೂರಿನ ಆರ್‌ಟಿಪಿಎಸ್ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ದಾಸ್ತಾನು ಶೂನ್ಯ ತಲುಪಿತ್ತು. ಆಯಾ ದಿನ ಪೂರೈಕೆಯಾಗುವ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸಬೇಕಾದ ಗಂಭೀರ ಸ್ಥಿತಿ ತಲುಪಿತ್ತು. ಹಾಗೆಯೇ ಬಳ್ಳಾರಿಯ ಬಿಟಿಪಿಎಸ್ ಘಟಕದಲ್ಲಿ 36,000 ಟನ್ ಹಾಗೂ ಯರಮರಸ್‌ನ ವೈಟಿಪಿಎಸ್ ಘಟಕದಲ್ಲಿ 40,000 ಟನ್ ಕಲ್ಲಿದ್ದಲು ದಾಸ್ತಾನು ಮಾತ್ರ ಉಳಿದಿತ್ತು. ಆದರೆ ತಿಂಗಳಿನಿಂದೀಚೆಗೆ ಕಲ್ಲಿದ್ದಲು ದಾಸ್ತಾನಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
Related Articles
ತಿಂಗಳಿನಿಂದೀಚೆಗೆ ಕಲ್ಲಿದ್ದಲು ಪೂರೈಕೆ ಸುಧಾರಿಸಿದೆ. ಆರ್‌ಟಿಪಿಎಸ್‌ನಲ್ಲಿ 60,000 ಟನ್, ಬಿಟಿಪಿಎಸ್‌ನಲ್ಲಿ 1.35 ಲಕ್ಷ ಟನ್ ಹಾಗೂ ವೈಟಿಪಿಎಸ್‌ನಲ್ಲಿ 45,000 ಟನ್ ಕಲ್ಲಿದ್ದಲು ದಾಸ್ತಾನು ಇದೆ. ತಿಂಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಸದ್ಯ ಹೆಚ್ಚುವರಿ 1.64 ಲಕ್ಷ ಟನ್ ಕಲ್ಲಿದ್ದಲು ಶೇಖರಣೆ ಇರುವುದು ತುಸು ಸಮಾಧಾನ ತರಬಹುದು. ಆದರೂ ರಾಜ್ಯಕ್ಕೆ ಅಗತ್ಯವಿರುವಷ್ಟು ಹಾಗೂ ಕಲ್ಲಿದ್ದಲು ಗಣಿ ಸಂಸ್ಥೆಗಳು ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸುತ್ತಿಲ. ವೈಟಿಪಿಎಸ್‌ನ ಒಂದು ಘಟಕ ತಾಂತ್ರಿಕ ದೋಷ ಕಾರಣಕ್ಕೆ ಸ್ಥಗಿತಗೊಂಡಿರುವುದರಿಂದ ಕಲ್ಲಿದ್ದಲು ದಾಸ್ತಾನು ಶೇಖರಣೆಗೂ ಸಹಾಯಕವಾದಂತಾಗಿದೆ.
Advertisement
ಉತ್ತಮ ನೀರು ಸಂಗ್ರಹಜಲವಿದ್ಯುತ್ ಘಟಕಗಳಿರುವ ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದೆ. 2017ರ ನ.30ಕ್ಕೆ ಹೋಲಿಸಿದರೆ 2018ರ ನ.30ನಲ್ಲಿ ಹೆಚ್ಚುವರಿಯಾಗಿ 2,500 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಬಹುದಾದಷ್ಟು ನೀರಿನ ಸಂಗ್ರಹವಿದೆ. ಸದ್ಯ ನಿತ್ಯ 20ರಿಂದ 25 ದಶಲಕ್ಷ ಯೂನಿಟ್ ವಿದ್ಯುತ್‌ಅನ್ನು ಜಲವಿದ್ಯುತ್ ಘಟಕಗಳಿಂದ ಉತ್ಪಾದಿಸಲಾಗುತ್ತಿದೆ. ಜನವರಿವರೆಗೆ ಇದೇ ಪ್ರಮಾಣದಲ್ಲಿ ಜಲವಿದ್ಯುತ್ ಉತ್ಪಾದನೆಯಾಗಲಿದ್ದು, ನಂತರ ಮೇ ಅಂತ್ಯದವರೆಗೆ ನಿತ್ಯ ಸರಾಸರಿ 30ರಿಂದ 35 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲು ಯೋಜನೆ ರೂಪಿಸಲಾಗಿದೆ. ಹಾಗಾಗಿ ಮೇ ಅಂತ್ಯದವರೆಗೆ ಜಲವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಿನ ವ್ಯತ್ಯಯವಾಗದು ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ. 400 ಕೋಟಿ ರೂ. ವೆಚ್ಚ?
ದೇಶೀಯ ಕಲ್ಲಿದ್ದಲು ಗಣಿ ಸಂಸ್ಥೆಗಳಿಂದ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗದ ಕಾರಣ ವಿದೇಶಿ ಕಲ್ಲಿದ್ದಲು ಆಮದು ಮಾಡಿಕೊಂಡು ಬಳಸಲು ಸರ್ಕಾರ ನಿರ್ಧರಿಸಿದೆ. ಆ ಹಿನ್ನೆಲೆಯಲ್ಲಿ ಕೆಪಿಸಿಎಲ್ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು, ಸದ್ಯದಲ್ಲೇ ಟೆಂಡರ್ ತೆರೆದು ಮುಂದಿನ ಪ್ರಕ್ರಿಯೆ ನಡೆಸಲಿದೆ. ವಿದೇಶಿ ಕಲ್ಲಿದ್ದಲು ದರ ಪ್ರತಿ ಟನ್‌ಗೆ ಸುಮಾರು 7,500ರಿಂದ 8000 ರೂ.ನಷ್ಟಿದ್ದು, 400 ಕೋಟಿ ರೂ. ವೆಚ್ಚವಾಗುವ ಅಂದಾಜು ಇದೆ. ಜನವರಿ ಆರಂಭದಿಂದ ವಿದೇಶಿ ಕಲ್ಲಿದ್ದಲು ಪೂರೈಕೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ. ಸದ್ಯ ಬೇಡಿಕೆ ಪ್ರಮಾಣ ಸರಾಸರಿ 208 ದಶಲಕ್ಷ ಯೂನಿಟ್‌ನಷ್ಟಿದ್ದು (10,000 ಮೆಗಾವ್ಯಾಟ್‌ಗೂ ಹೆಚ್ಚು), ಬೇಡಿಕೆಯಷ್ಟು ಪೂರೈಕೆ ಮಾಡಲು ಇಂಧನ ಇಲಾಖೆ ತೀವ್ರ ಕಸರತ್ತು ನಡೆಸಿದೆ. ಸೌರಶಕ್ತಿ ಮೂಲದಿಂದ 3,000 ಮೆಗಾವ್ಯಾಟ್‌ನಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದ್ದು ಮೇವರೆಗೆ ಇದೇ ಪ್ರಮಾಣದಲ್ಲಿ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಉಷ್ಣ ವಿದ್ಯುತ್, ಜಲವಿದ್ಯುತ್ ಮೂಲದಿಂದ 73 ದಶಲಕ್ಷ ಯೂನಿಟ್, ನವೀಕರಿಸಬಹುದಾದ ಇಂಧನ ಮೂಲದಿಂದ 59 ದಶಲಕ್ಷ ಯೂನಿಟ್, ಕೇಂದ್ರ ಸರ್ಕಾರದ ಹಂಚಿಕೆಯಡಿ 67 ದಶಲಕ್ಷ ಯೂನಿಟ್, ಉಡುಪಿಯ ಯುಪಿಸಿಎಲ್ ಘಟಕದಿಂದ 9 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ಅಕ್ಟೋಬರ್ ಅಂತ್ಯಕ್ಕೆ ಹೋಲಿಸಿದರೆ ಸದ್ಯ ಕಲ್ಲಿದ್ದಲು ಪೂರೈಕೆ ಪ್ರಮಾಣ ತುಸು ಸುಧಾರಿಸಿದೆ. ಹಾಗೆಂದು ಕಲ್ಲಿದ್ದಲು ಗಣಿ ಸಂಸ್ಥೆಗಳು ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸುತ್ತಿಲ್ಲ. ತಾಂತ್ರಿಕ ದೋಷ ಕಾರಣಕ್ಕೆ ವೈಟಿಪಿಎಸ್‌ನ ಒಂದು ಘಟಕ ಸ್ಥಗಿತಗೊಂಡಿದ್ದು, ಬಿಟಿಪಿಎಸ್, ಆರ್‌ಟಿಪಿಎಸ್‌ನಲ್ಲಿ ಗರಿಷ್ಠ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಬೇಡಿಕೆಗೆ ಪೂರಕವಾಗಿ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿ ಪೂರೈಸಲು ಪ್ರಯತ್ನ ಮುಂದುವರಿಸಲಾಗಿದೆ ಎಂದು ಕೆಪಿಸಿಎಲ್ ಉನ್ನತ ಮೂಲಗಳು ತಿಳಿಸಿವೆ. ಕಲ್ಲಿದ್ದಲು ದಾಸ್ತಾನು ವಿವರ
ಘಟಕ ಅ.25 ನ.30
ಆರ್‌ಟಿಪಿಎಸ್ 00 60,000 ಟನ್
ಬಿಟಿಪಿಎಸ್ 36,000 ಟನ್ 1.35 ಲಕ್ಷ ಟನ್
ವೈಟಿಪಿಎಸ್ 40,000 ಟನ್ 45,000 ಟನ್
ಒಟ್ಟು 76,000 ಟನ್ 2,40,000 ಟನ್ – ಎಂ. ಕೀರ್ತಿಪ್ರಸಾದ್