Advertisement

ಕೂಡಗಿ ವಿದ್ಯುತ್‌ ಸ್ಥಾವರಕ್ಕೆ ಕಲ್ಲಿದ್ದಲು ಕೊರತೆ

12:20 PM Sep 03, 2017 | |

ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಎನ್‌ಟಿಪಿಸಿ ಯೋಜನೆಯ ಮೊದಲ ಹಂತದ ಮೂರು ಘಟಕಗಳು
ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆಗೆ ಸಿದಟಛಿಗೊಂಡಿದ್ದರೂ ಕಲ್ಲಿದ್ದಲು ಕೊರತೆ ಅಡ್ಡಿಯಾಗಿದೆ. ಹೀಗಾಗಿ, ಈಗ ಒಂದು ಘಟಕ ಮಾತ್ರ ಕಾರ್ಯಾರಂಭಿಸಿದ್ದು, ಅದರಲ್ಲೂ ಶೇ.60ರಷ್ಟು ವಿದ್ಯುತ್‌ ಮಾತ್ರ ಉತ್ಪಾದನೆಯಾಗುತ್ತಿದೆ.

Advertisement

ಬಸವನಬಾಗೇವಾಡಿ ತಾಲೂಕಿನ ಕೂಡಗಿ ಬಳಿ ಸ್ಥಾಪನೆಗೊಂಡಿರುವ ಸುಪರ್‌ ಸ್ಪೆಶಾಲಿಟಿ ತಂತ್ರಜ್ಞಾನದ ಈ ಶಾಖೋತ್ಪನ್ನ ಕೇಂದ್ರದ ಐದು ಘಟಕಗಳಿಂದ ತಲಾ 800 ಮೆಗಾವ್ಯಾಟ್‌ನಂತೆ ಒಟ್ಟಾರೆ ನಾಲ್ಕು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ.

ಮೊದಲ ಹಂತದ ಮೂರು ಘಟಕಗಳ ಬಾಯ್ಲರ್‌, ಟಬೈìನ್‌ ಸೇರಿ ವಿದ್ಯುತ್‌ ಉತ್ಪಾದನೆಯ ಪ್ರಾಯೋಗಿಕ ಪರೀಕ್ಷೆಗಳು
ಯಶಸ್ವಿಯಾಗಿವೆ. ಮೂಲ ಯೋಜನೆ ಪ್ರಕಾರ ಕಳೆದ ಜುಲೈ ಅಂತ್ಯದೊಳಗೆ ಎರಡು ಘಟಕಗಳು ಪೂರ್ಣ ಪ್ರಮಾಣದಲ್ಲಿ ತಲಾ 800 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಆರಂಭಿಸಬೇಕಿತ್ತು. ಮೂರನೇ ಘಟಕವೂ ಉತ್ಪಾದನೆ ಆರಂಭಿಸಬೇಕಿತ್ತು. ಆದರೆ ಈಗ ಒಂದನೇ ಘಟಕದಲ್ಲಿ ಮಾತ್ರ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು, ಇನ್ನೆರಡು ಘಟಕಗಳು ಕಲ್ಲಿದ್ದಲಿನ ಕೊರತೆ ಕಾರಣ ಕಾರ್ಯಾರಂಭ ಮಾಡಿಲ್ಲ.

ಎನ್‌ಟಿಪಿಸಿ ಕೂಡಗಿ ಕೇಂದ್ರ ರಾಜ್ಯದ ಎಸ್ಕಾಂ ಸಂಸ್ಥೆಗಳು ಸೇರಿ ದೇಶದ ವಿದ್ಯುತ್‌ ಪೂರೈಕೆ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಈಗಾಗಲೇ ವಿದ್ಯುತ್‌ ಪೂರೈಸಬೇಕಿತ್ತು. ಇನ್ನೂ ವಿಳಂಬ ಮಾಡಿದರೆ (ಒಪ್ಪಂದ) ಷರತ್ತಿನ ಪ್ರಕಾರ ಎಸ್ಕಾಂಗಳಿಗೆ ಎನ್‌ಟಿಪಿಸಿ ದಂಡ ತೆರಬೇಕು. ಇದರಿಂದ ತಪ್ಪಿಸಿಕೊಳ್ಳಲು ಸಿಂಗರೇಣಿ ಗಣಿಯಿಂದ ಕಲ್ಲಿದ್ದಲು ತರಿಸಿಕೊಂಡು ಮೊದಲ ಘಟಕದಿಂದ ತರಾತುರಿಯಲ್ಲಿ ಅರೆ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಆರಂಭಿಸಿದೆ.
ಕೂಡಗಿ ಯೋಜನೆಗೆ ಕಲ್ಲಿದ್ದಲು ಪೂರೈಕೆ ಮಾಡಲು ಒಪ್ಪಂದ ಮಾಡಿಕೊಂಡ ಜಾರ್ಖಂಡ್‌ನ‌ ಪಾಕರಿ ಬರವಾಡಿ ಗಣಿಯಿಂದ ಕಲ್ಲಿದ್ದಲು ಪೂರೈಕೆ ಆಗುತ್ತಿಲ್ಲ. ಹುಟಗಿ-ಗದಗ ಮಧ್ಯೆ ಜೋಡಿ ಮಾರ್ಗದ ರೈಲು ಹಳಿ ನಿರ್ಮಾಣ ಆಗದಿರುವುದೇ ಸಮಸ್ಯೆಗೆ ಪ್ರಮುಖ ಕಾರಣ. ಇದರಿಂದಾಗಿ ಇದೀಗ ತೆಲಂಗಾಣದ ರಾಮಗುಂಡಂ ಘಟಕಕ್ಕೆ ಕಲ್ಲಿದ್ದಲು ಪೂರೈಸುವ ಸಿಂಗರೇಣಿ ಗಣಿಯಿಂದ ಕಲ್ಲಿದ್ದಲು ತರಿಸಲಾಗುತ್ತಿದೆ. ಎಲ್ಲ ಮೂರು ಘಟಕಗಳು ನಿರಂತರ ಉತ್ಪಾದನೆ ಆರಂಭಿಸಲು ನಿತ್ಯವೂ ಎಂಟು ರೇಕ್‌ ಕಲ್ಲಿದ್ದಲು ಬೇಕಿದೆ.

ಆದರೆ, ಸದ್ಯ ದೊರೆಯುತ್ತಿರುವುದು ಎರಡು ರೇಕ್‌ ಮಾತ್ರ. ಒಂದು ರೇಕ್‌ ಎಂದರೆ 40 ಸಾವಿರ ಮೆಟ್ರಿಕ್‌ ಟನ್‌. ಅಂದರೆ 2.40 ಲಕ್ಷ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಕೊರತೆಯ ಕಾರಣ ಇನ್ನೆರಡು ಘಟಕಗಳು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ
ಮಾಡುತ್ತಿಲ್ಲ.

Advertisement

ಶೇ.50ರಷ್ಟು ವಿದ್ಯುತ್‌ ರಾಜ್ಯಕ್ಕೆ: ಸದ್ಯ ಉತ್ಪಾದಿಸುತ್ತಿರುವ ಒಟ್ಟು ವಿದ್ಯುತ್‌ನಲ್ಲಿ ಶೇ.50ರಷ್ಟು ಕರ್ನಾಟಕಕ್ಕೆ ದೊರೆಯುತ್ತಿದ್ದು, ರಾಜ್ಯದಲ್ಲಿ ತೀವ್ರಗೊಂಡ ವಿದ್ಯುತ್‌ ಬರ ನೀಗುವಲ್ಲಿ ಸಹಕಾರಿ ಆಗಿದೆ. ಇತರ ಶೇ.50ರಷ್ಟು ವಿದ್ಯುತ್‌ ರಾಷ್ಟ್ರೀಯ ಗ್ರಿಡ್‌ ಮೂಲಕ ತೆಲಂಗಾಣ, ಸೀಮಾಂಧ್ರ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಪೂರೈಕೆ ಆಗುತ್ತಿದೆ.

ಜೋಡಿ ರೈಲು ಮಾರ್ಗ ನಿರ್ಮಾಣಗೊಂಡರೆ ಕೂಡಗಿ ಯೋಜನೆಗೆ ಅಗತ್ಯ ಪ್ರಮಾಣದ ಕಲ್ಲಿದ್ದಲು ಪೂರೈಸಲು ಸಾಧ್ಯವಾಗುತ್ತದೆ. ಇದರಿಂದ ಮೊದಲ ಹಂತದ ಮೂರು ಘಟಕಗಳು ತಲಾ 800 ಮೆಗಾವ್ಯಾಟ್‌ನಂತೆ ಪೂರ್ಣ ಪ್ರಮಾಣದಲ್ಲಿ 2,400 ಮೆ.ವ್ಯಾ.ವಿದ್ಯುತ್‌ ಉತ್ಪಾದಿಸಲು ಸಾಧ್ಯ ಎಂದು ಎನ್‌ಟಿಪಿಸಿ ಮೂಲಗಳು ಸ್ಪಷ್ಟಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next