ರಾಯಚೂರು: ರಾಜ್ಯಕ್ಕೆ ವಿದ್ಯುತ್ ಪೂರೈಸುವ ಪ್ರಮುಖ ಶಾಖೋತ್ಪನ್ನ ಕೇಂದ್ರಗಳಿಗೆ ಕಲ್ಲಿದ್ದಲು ಕೊರತೆ ಭೀತಿ ಶುರುವಾಗಿದ್ದು, ಉತ್ಪಾದನೆ, ಪೂರೈಕೆ ಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ. ರಾಯಚೂರಿನ ವೈಟಿಪಿಎಸ್‌ನ ಎರಡು ಹಾಗೂ ಬಳ್ಳಾರಿಯ ಬಿಟಿಪಿಎಸ್‌ನ ಒಂದು ಘಟಕಕ್ಕೆ “ಬ್ರಿಡ್ಜ್ ಲಿಂಕೇಜ್’ನಡಿ ಕಲ್ಲಿದ್ದಲು ಪೂರೈಕೆ ಒಡಂಬಡಿಕೆ ಮೇ 31ಕ್ಕೆ ಅಂತ್ಯವಾಗಲಿದೆ. ಹಾಗಾಗಿ ಸಿಂಗರೇಣಿ ಕೊಲಿರೀಸ್ ಕಂಪನಿ ಲಿಮಿಟೆಡ್ (ಎಸ್‌ಸಿಸಿಎಲ್) ಒಡಂಬಡಿಕೆ ಅಂತ್ಯವಾಗುತ್ತಿರುವುದರಿಂದ ಕಲ್ಲಿದ್ದಲು ಪೂರೈಕೆ ಸ್ಥಗಿತಗೊಳಿಸಲು ಮುಂದಾಗಿರುವುದರಿಂದ ಸಮಸ್ಯೆ ತಲೆದೋರುವ ಆತಂಕ ಶುರುವಾಗಿದೆ. ಆರ್‌ಟಿಪಿಎಸ್‌ಗೆ ಸದ್ಯ ಕಲ್ಲಿದ್ದಲಿನ ಅಭಾವವಿಲ್ಲ. ಹಾಗೆಂದು ಅಗತ್ಯ ಪ್ರಮಾಣದ ದಾಸ್ತಾನೂ ಇಲ್ಲ. ಅಗತ್ಯಕ್ಕನುಸಾರ ನಿತ್ಯ ಸರಬರಾಜಾಗುತ್ತಿದೆ. ಲಿಂಕೇಜ್ ವಿಧಾನಕ್ಕೆ ಬದಲಾಗಿ ಬ್ರಿಡ್ಜ್ ಲಿಂಕೇಜ್‌ನಡಿ ಪೂರೈಸಲು ಎಸ್‌ಸಿಸಿಎಲ್ ಕಂಪನಿ ಆಸಕ್ತಿ ತೋರಿದೆ. ಇದು ದುಬಾರಿಯಾಗುವುದರಿಂದ ಲಿಂಕೇಜ್ ವ್ಯವಸ್ಥೆಯಲ್ಲೇ ಕಲ್ಲಿದ್ದಲು ಪಡೆಯುವ ಪ್ರಯತ್ನ ನಡೆಸಿದೆ.
ಪ್ರತ್ಯೇಕ ಗಣಿಗೂ ಮೀನಮೇಷ: ರಾಜ್ಯದಲ್ಲಿ ವಿದ್ಯುತ್ ಶಾಖೋತ್ಪನ್ನ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿದ್ದು, ಕಲ್ಲಿದ್ದಲಿನ ಬೇಡಿಕೆಯೂ ಹೆಚ್ಚಿದೆ. ಹೀಗಾಗಿ ಘಟಕಗಳಿಗೆ ಪ್ರತ್ಯೇಕ ಕಲ್ಲಿದ್ದಲು ಗಣಿ ಹಂಚಿಕೆ ಮಾಡುವಂತೆ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ ಒಡಿಶಾದ ಗಣಿ ನೀಡಲು ಸಮ್ಮತಿಸಿತ್ತು. ಆರು ರಾಜ್ಯಗಳಿಗೆ ಆರು ಗಣಿ ಹಂಚಿಕೆ ಮಾಡಲು ಅಧಿಸೂಚನೆ ಕೂಡ ಹೊರಡಿಸಲಾಗಿತ್ತು. ರಾಜ್ಯದಿಂದ ಗೋಗರಪಲ್ಲಿ ಗಣಿ ನೀಡಲು ಬೇಡಿಕೆಯಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಲು ಮೀನಮೇಷ ಎಣಿಸುತ್ತಿದೆ ಎನ್ನಲಾಗುತ್ತಿದೆ.
2,500 ಮೆಗಾ ವ್ಯಾಟ್ ಉತ್ಪಾದನೆ: ವೈಟಿಪಿಎಸ್ ಮತ್ತು ಬಿಟಿಪಿಎಸ್ ಘಟಕಗಳಿಂದ ಗರಿಷ್ಠ 2,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಆರ್ ಟಿಪಿಎಸ್‌ನ ಎಂಟು ಘಟಕಗಳಿಂದ ಗರಿಷ್ಠ 1,720 ಮೆಗಾವ್ಯಾಟ್ ಉತ್ಪಾದನೆ ಸಾಮರ್ಥಯವಿದೆ. ವೈಟಿಪಿಎಸ್ ಎರಡು ಘಟಕಗಳ ಪೈಕಿ ಸದ್ಯ ಒಂದು ಘಟಕವನ್ನಷ್ಟೇ ಬಳಸಲಾಗುತ್ತಿದೆ. ಈ ಎರಡು ಘಟಕಗಳಿಂದ ಅಗತ್ಯಾನುಸಾರ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾದಲ್ಲಿ ಮಾತ್ರ ಸಮಸ್ಯೆ ಎದುರಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ರಾಜ್ಯದ ಶಾಖೋತ್ಪನ್ನ ಸ್ಥಾವರಗಳಿಗೆ ಮಹಾನದಿ, ಸಿಂಗರೇಣಿ ಮತ್ತು ಮಹಾರಾಷ್ಟ್ರದಿಂದ ಕಲ್ಲಿದ್ದಲು ಸರಬರಾಜಾಗುತ್ತಿದೆ. ವೈಟಿಪಿಎಸ್‌ನ ಎರಡು ಹಾಗೂ ಬಿಟಿಪಿಎಸ್‌ನ ಒಂದು ಘಟಕಕ್ಕೆ ಸಿಂಗರೇಣಿಯಿಂದ ಬ್ರಿಡ್ಜ್ ಲಿಂಕೇಜ್ ಪಡೆದಿದ್ದು, ಒಪ್ಪಂದದ ಅವಧಿ ಮೇ 31ಕ್ಕೆ ಮುಗಿಯಲಿದೆ. ಒಪ್ಪಂದ ಮುಂದುವರಿಕೆಗೆ ಕಂಪನಿ ಆಕ್ಷೇಪವೆತ್ತಿದ್ದು, ಮಾತುಕತೆ ನಡೆದಿದೆ.
● ಜಿ. ಕುಮಾರ್ ನಾಯಕ, ವ್ಯವಸ್ಥಾಪಕ ನಿರ್ದೇಶಕ, ಕೆಪಿಟಿಸಿಎಲ್
ಸಿದ್ಧಯ್ಯಸ್ವಾಮಿ ಕುಕನೂರು