ಕೋಲ್ಕತಾ: ಅಕ್ರಮ ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶನಿವಾರ(ನವೆಂಬರ್ 28, 2020) ಪಶ್ಚಿಮಬಂಗಾಳದ ಅಸಾನ್ಸೋಲ್ ನಲ್ಲಿ ದಾಳಿ ನಡೆಸಿದ ವೇಳೆ ಧನಂಜಯ್ ರಾಯ್ ಎಂಬ ಆರೋಪಿ ಹೃದಯ ಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣದಲ್ಲಿ ರಾಯ್ ಕೂಡಾ ಆರೋಪಿಯಾಗಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ. ಪಶ್ಚಿಮಬಂಗಾಳ ಮತ್ತು ಜಾರ್ಖಂಡ್ ಸೇರಿದಂತೆ ನಾಲ್ಕು ರಾಜ್ಯಗಳ 45 ಪ್ರದೇಶಗಳಲ್ಲಿ ಸಿಬಿಐ ಇಂದು ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿತ್ತು.
ಪಶ್ಚಿಮಬಂಗಾಳದ ಅಸಾನ್ಸೋಲ್ ಪ್ರದೇಶದಲ್ಲಿರುವ ರಾಯ್ ಮನೆಗೆ ಸಿಬಿಐ ಅಧಿಕಾರಿಗಳು ತಲುಪಿದ ಸಂದರ್ಭದಲ್ಲಿ ಏಕಾಏಕಿ ಹೃದಯ ಬೇನೆ ಕಾಣಿಸಿಕೊಂಡಿತ್ತು. ಕೂಡಲೇ ಧನಂಜಯ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.
ಇದನ್ನೂ ಓದಿ:ವಾಹನ ಸವಾರರ ಗಮನಕ್ಕೆ: ಹೆಲ್ಮೆಟ್ ನಿಯಮದಲ್ಲಿ ಬದಲಾವಣೆ, BISಗೆ ಮಾತ್ರ ಮಾನ್ಯತೆ, ಏನಿದು?
ಈಸ್ಟ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ಹಾಗೂ ಕೆಲವು ಖಾಸಗಿ ವ್ಯಕ್ತಿಗಳ ವಿರುದ್ಧ ದಾಖಲಾದ ದೂರಿನ ಆಧಾರದ ಮೇಲೆ ಸಿಬಿಐ ಪಶ್ಚಿಮಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಉತ್ತರಪ್ರದೇಶದಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿತ್ತು.