ದಾವಣಗೆರೆ: ಗ್ರಾಹಕ ಸಂರಕ್ಷಣಾ ಕಾಯ್ದೆ ಎಲ್ಲರಿಗೂ ಎಲ್ಲಾ ಕಾಲಕ್ಕೂ ಉಪಯೋಗವಾಗಲಿದೆ ಎಂದು ಹರಪನಹಳ್ಳಿ ಅಪರ ಸರ್ಕಾರಿ ವಕೀಲ ಹಾಗೂ ಗ್ರಾಹಕ ವೇದಿಕೆ ಮಾಜಿ ಸದಸ್ಯ ಮಂಜುನಾಥ ಕಣಿವೆಹಳ್ಳಿ ತಿಳಿಸಿದ್ದಾರೆ. ಚಾಣುಕ್ಯ ಪ್ರಥಮ ದರ್ಜೆ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ರಾಷ್ಟ್ರೀಯ ಸೇವಾ ಯೋಜನಾ ಘಟಕ ಏರ್ಪಡಿಸಿದ್ದ ಗ್ರಾಹಕ ಸಂರಕ್ಷಣಾ ಕಾಯ್ದೆ ಮತ್ತು ಗ್ರಾಹಕರ ಹಕ್ಕುಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಣ ಕೊಟ್ಟು ಸರಕು ಖರೀದಿಸುವ ಮತ್ತು ಸೇವೆ ಪಡೆಯುವ ಗ್ರಾಹಕರಿಗೆ ಅನ್ಯಾಯವಾದಲ್ಲಿ ಸುಲಭ ಹಾಗೂ ಶೀಘ್ರವಾಗಿ ನ್ಯಾಯ ಒದಗಿಸಿಕೊಡಲಾಗುವುದು ಎಂದರು. ಗ್ರಾಹಕರ ಅನುಕೂಲ ಮತ್ತು ರಕ್ಷಣೆಗಾಗಿ ಅಮೆರಿಕಾದಲ್ಲಿ ಮೊಟ್ಟಮೊದಲ ಬಾರಿಗೆ ಗ್ರಾಹಕ ಚಳವಳಿ ಪ್ರಾರಂಭವಾಯಿತು. ಇಂದಿನ ವಾತಾವರಣದಲ್ಲಿ ಗ್ರಾಹಕರ ಕೊಳ್ಳುಬಾಕ ಸಂಸ್ಕೃತಿಯಿಂದ ಅನಾನುಕೂಲಗಳೇ ಹೆಚ್ಚಾಗುತ್ತಿವೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ ಎಲ್. ಎಚ್. ಅರುಣ್‌ಕುಮಾರ್, ಮಾನವ ಘನತೆ, ಯೋಗ್ಯತೆ, ಗಂಡು ಹೆಣ್ಣಿನ ಸಮಾನತೆಯಲ್ಲಿ ಮೂಲಭೂತ ಹಕ್ಕುಗಳ ನಂಬಿಕೆಯನ್ನು ಮರು ದೃಢಿಕರಿಸುವ ಆಶಯದೊಂದಿಗೆ ವಿಶ್ವ ಮಾನವ ಹಕ್ಕುಗಳ ಘೋಷಣೆಯಾಗಿವೆ.
ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಪ್ರಪಂಚದ ಎಲ್ಲರೂ ಸಮಾನವಾಗಿ ಅನುಭವಿಸುವ ಮತ್ತು ದೃಢಿಕರೀಸುವ ನಿಟ್ಟಿನಲ್ಲಿ ಮಾನವ ಹಕ್ಕುಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು. ಅಂತಾರಾಷ್ಟ್ರೀಯ ಸಂಸ್ಥೆಗಳು ರಾಷ್ಟ್ರೀಯ ಸರ್ಕಾರಗಳಿಗೆ ನೀಡುವ ಆರ್ಥಿಕ ನೆರವುಗಳಿಗೆ ಮಾನವ ಹಕ್ಕುಗಳು ಮಾನದಂಡವಾಗಿವೆ.
ರಾಷ್ಟ್ರಗಳ ನಡುವೆ ಶಾಂತಿ, ಸೌಹಾರ್ದತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದರು. ಕಾಲೇಜು ಪ್ರಾಚಾರ್ಯ ಕೆ.ವಿ. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಚಾಣುಕ್ಯ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ವೈ.ಟಿ. ಪ್ರೇಮಾ ಉದ್ಘಾಟಿಸಿದರು. ರತ್ನ ಮತ್ತು ಚೈತ್ರಾ ಪ್ರಾರ್ಥಿಸಿದರು. ರಜಿಯಾ ಬಾನು ಸ್ವಾಗತಿಸಿದರು. ವೈ.ಎಂ. ಉಷಾ ನಿರೂಪಿಸಿದರು. ಸೌಮ್ಯ ಎನ್. ರಾಯ್ಕರ್ ವಂದಿಸಿದರು.