ದಾವಣಗೆರೆ: ಪಾಲಿಕೆಯ ಈ ಬಾರಿಯ ಬಜೆಟ್ ಉತ್ತಮವಾಗಿದೆ. ಜನಸಾಮಾನ್ಯರಿಗೆ ಹೊರೆಯಾಗದಂತಹ ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ತಯಾರಿಸಿರುವ ಈ ಬಜೆಟ್ ನಗರವನ್ನು ಇನ್ನಷ್ಟು ಅಭಿವೃದ್ಧಿಯತ್ತ ಒಯ್ಯಲು ಸಹಕಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬಜೆಟ್ ಅನುಮೋದನೆಗೊಂಡ ನಂತರ ಮಾತನಾಡಿದ ಅವರು, ನಾವು ಉತ್ತಮ ಆಡಳಿತ ನೀಡುತ್ತೇವೆ ಎಂಬ ಕಾರಣಕ್ಕೆ ನಮ್ಮ ಪಕ್ಷದ 39 ಜನರನ್ನು ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ನಾವು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಇಂದಿನ ಬಜೆಟ್ ಉತ್ತಮವಾಗಿದೆ. ರಾಜ್ಯ ಸರ್ಕಾರದ ಅನುದಾನದಲ್ಲಿ 130 ಕಿಮೀ ರಸ್ತೆ ಸಿಮೆಂಟೀಕರಣಗೊಂಡಿದೆ.
ಇನ್ನೂ 100 ಕಿಮೀ ರಸ್ತೆ ಸಿಮೆಂಟ್ ಆಗಲಿದೆ. ಜೊತೆಗೆ ಸೌಂದಯೀìಕರಣ ಸಹ ಮಾಡಬೇಕಿದೆ. ಇದೆಲ್ಲಕ್ಕೂ ನಾನು ಅನುದಾನ ಕೊಡಿಸಿ ಕೊಡುವೆ ಎಂದರು. ಈಜುಕೊಳ, ಸೈಕ್ಲಿಂಗ್ ದಾರಿ, ಸ್ಕೇಟಿಂಗ್ ಕೋರ್ಟ್ ನಿರ್ಮಾಣದಂತಹ ಕೆಲಸಗಳನ್ನು ಖಾಸಗಿಗೆ ವಹಿಸುವುದು ಸೂಕ್ತ. ಇಂತಹ ಸಣ್ಣ ವಿಷಯಗಳನ್ನು ಪಾಲಿಕೆಯಿಂದ ಮಾಡುವುದು ಸರಿಯಲ್ಲ. ಆದರೂ ಬಜೆಟ್‌ನಲ್ಲಿ ಸೇರಿಸಿದ್ದಾರೆ ಎಂದು ಅವರು ಹೇಳಿದರು.
ಇವುಗಳ ಜೊತೆಗೆ ರಾಜ್ಯ ಸರ್ಕಾರದಿಂದ ದೂಡಾ ಕಚೇರಿ ಮುಂದಿನ ರೈಲ್ವೆ ಸೇತುವೆ ನಿರ್ಮಾಣಕ್ಕೆ 21 ಕೋಟಿ ರೂ., ಪಾಲಿಕೆ ಕಚೇರಿ ಮುಂಭಾಗದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಲು 15 ಕೋಟಿ ರೂ.ಗಳ ಅನುದಾನ ಒದಗಿಸಲಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 700 ಕೋಟಿ ಪ್ರದೇಶ ಅಭಿವೃದ್ಧಿಗೊಳ್ಳಲಿದೆ.
ಮಹಾರಾಜರ ಕಾಲದಲ್ಲಿ ಕಟ್ಟಿದ ಕೆ.ಆರ್. ಮಾರುಕಟ್ಟೆಯಲ್ಲಿ ಸಂಪೂರ್ಣ ಹೈಟೆಕ್ ಮಾಡಲಾಗುವುದು. ಹಳೆ ಬಸ್ ನಿಲ್ದಾಣವನ್ನು ಆಧುನೀಕರಣಗೊಳಿಸಲಾಗುವುದು ಎಂದು ಅವರು ಹೇಳಿದರು. ದಾವಣಗೆರೆಯನ್ನ ಮಾದರಿ ನಗರವನ್ನಾಗಿಸಲು ಎಲ್ಲರೂ ಕೈ ಜೋಡಿಸಬೇಕಿದೆ. ಆದರೆ, ಪಾಲಿಕೆಯ ಅಧಿಕಾರಿಗಳು ಚುರುಕಾಗಬೇಕು.
ಹಣ ಬರುತ್ತಲೇ ಟೆಂಡರ್ ಪ್ರಕ್ರಿಯೆ ಕೈಗೊಂಡು ಕಾಮಗಾರಿ ಆರಂಭಿಸಬೇಕು. ಆದರೆ, ನಮ್ಮ ಆಯುಕ್ತರು ವರ್ಷಕ್ಕೆ 100 ಕೋಟಿ ಖರ್ಚುಮಾಡಲು ಸಾಧ್ಯವಿಲ್ಲ ಎಂಬಂತಿದ್ದಾರೆ ಎಂದು ಅವರು ಟಾಂಗ್ ನೀಡಿದರು. ಬಜೆಟ್ ಅನುಮೋದಿಸಿದ ಹಿರಿಯ ಪಾಲಿಕೆ ಸದಸ್ಯರಾದ ಕೊಟ್ಟ ದಿನೇಶ್ ಶೆಟ್ಟಿ, ಶಿವನಹಳ್ಳಿ ರಮೇಶ್ ಸಹ ಮೆಚ್ಚುಗೆ ವ್ಯಕ್ತಪಡಿಸಿದರು.