ಬೆಂಗಳೂರು: ಇಟಲಿಯ ವಿಮಾನ ನಿಲ್ದಾಣದಲ್ಲಿನ ಕನ್ನಡಿಗರ ಸಹಿತ ಭಾರತೀಯರ ರಕ್ಷಣೆಗೆ ಈಗಾಗಲೇ ಕೇಂದ್ರ ವಿದೇಶಾಂಗ ವ್ಯವಹಾರ ಇಲಾಖೆ ಪರಿಶೀಲನೆ ನಡೆಸುತ್ತಿದ್ದು, ಆರೋಗ್ಯ ಸ್ಥಿತಿ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ|ಸಿ.ಎನ್.ಅಶ್ವತ್ಥ ನಾರಾಯಣ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ವೇಳೆ ಉತ್ತರಿಸಿದ ಅವರು, ಈಗಾಗಲೇ ಕೇಂದ್ರ ಸರಕಾರ ಭಾರತೀಯರ ರಕ್ಷಣೆಗೆ ಕಾರ್ಯಪ್ರವೃತ್ತವಾಗಿದೆ. ಮಿಲಾನ್ ವಿಮಾನ ನಿಲ್ದಾಣದಲ್ಲಿನ ಕನ್ನಡಿಗರ ಸಹಿತ ಭಾರತೀಯರ ಆರೋಗ್ಯ ತಪಾಸಣೆ ನಡೆದಿದೆ. ರಕ್ತ ಪರೀಕ್ಷೆ ಸಹಿತ ನಾನಾ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವರದಿ ಆಧರಿಸಿ ಅವರನ್ನು ಭಾರತಕ್ಕೆ ಕಳುಹಿಸುವ ಇಲ್ಲವೇ ಅಲ್ಲಿಯೇ ಪ್ರತ್ಯೇಕವಾಗಿ ಚಿಕಿತ್ಸೆ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಂತೆ ಕೇಂದ್ರ ಸರಕಾರ ಕಳೆದ ಮಾ. 14ರಂದು 220 ಮಂದಿ ವಿಮಾನದ ಮೂಲಕ ರಕ್ಷಿಸಿ ಕರೆತಂದಿದೆ. ಆದರೆ ಇನ್ನೂ 1,000 ಮಂದಿ ಇಟಲಿಯಲ್ಲೇ ಉಳಿದಿದ್ದು, ಅವರು ಯಾವುದೇ ವ್ಯವಸ್ಥೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. 1,000 ಮಂದಿ ಭಾರತೀಯರ ಪೈಕಿ 400 ಮಂದಿ ಕನ್ನಡಿಗರಾಗಿದ್ದು, ಇದರಲ್ಲಿ 150 ಮಂದಿ ವಿದ್ಯಾರ್ಥಿಗಳಾಗಿದ್ದಾರೆ ಎಂದು ಸದನದ ಗಮನಕ್ಕೆ ತಂದರು.
ಅಲ್ಲಿನ ಕನ್ನಡಿಗರು ತಮಗೆ ಕೊರೊನಾ ಸೋಂಕು ತಗಲಿಲ್ಲ ಎಂಬ ಪ್ರಮಾಣ ಪತ್ರ ನೀಡಿದರಷ್ಟೇ ಅವರು ಭಾರತಕ್ಕೆ ವಾಪಸಾಗಲು ಅವಕಾಶ ನೀಡಲಾಗುತ್ತಿದೆ. ಇಲ್ಲದಿದ್ದರೆ ಅವರಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತಿಲ್ಲ. ಬುಧವಾರದೊಳಗೆ ಅಲ್ಲಿನ ಕನ್ನಡಿಗರು ಪ್ರಮಾಣ ಪತ್ರ ಸಲ್ಲಿಸಬೇಕಿದೆ. ಅಷ್ಟರೊಳಗೆ ಸಲ್ಲಿಸದಿದ್ದರೆ ಅನಂತರ ವಿಮಾನ ಯಾನ ರದ್ದಾಗುವ ಆತಂಕವಿದೆ. ಆಹಾರ, ಹಣವಿಲ್ಲದೆ ಅಲ್ಲಿ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಕನ್ನಡಿಗರು, ಭಾರತೀಯರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಕೊರೊನಾ ವಿಚಾರವಾಗಿ ಕಾಂಗ್ರೆಸ್‌ನ ಆರ್.ವಿ.ದೇಶಪಾಂಡೆ, ಅಜಯ್ ಸಿಂಗ್, ಈಶ್ವರ ಖಂಡ್ರೆ, ಡಾ| ರಂಗನಾಥ್, ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ಇತರರು ಚರ್ಚೆಗೆ ಅವಕಾಶ ನೀಡುವಂತೆ ಕೋರಿದರು. ಬಳಿಕ ಸಚಿವ ಜೆ.ಸಿ. ಮಾಧುಸ್ವಾಮಿ, ಈಗಾಗಲೇ ಕೊರೊನಾ ಸೋಂಕು ಕುರಿತು ಎರಡು ಬಾರಿ ಚರ್ಚೆಯಾಗಿದ್ದು, ಬುಧವಾರ ಕೆಲವು ಹೊತ್ತು ಚರ್ಚೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅದರಂತೆ ಬುಧವಾರ ಚರ್ಚೆಗೆ ಅವಕಾಶ ನೀಡುವುದಾಗಿ ವಿಧಾನಸಭಾಧ್ಯಕ್ಷರು ಹೇಳುವ ಮೂಲಕ ಈ ವಿಷಯದ ಕುರಿತಾಗಿನ ಚರ್ಚೆ ಅಂತ್ಯಗೊಂಡಿತು.