ಬೆಂಗಳೂರು: ತಮ್ಮದೇ ಪಕ್ಷದ ನಾಯಕ ಎಂ.ಬಿ.ಪಾಟೀಲ್ ಮತ್ತು ನನ್ನ ಹೆಸರು ಹೇಳಿಕೊಂಡು ಡಿ.ಕೆ.ಶಿವಕುಮಾರ್ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದರು. ಆದರೆ ರಮ್ಯಾ ಅವರ ಟ್ವೀಟ್ ಇವರ ಬಣ್ಣವನ್ನು ಬಯಲು ಮಾಡಿತು. ರಾಂಗ್ ನಂಬರ್ ಡಯಲ್ ಮಾಡಿದ ಡಿ.ಕೆ. ಶಿವಕುಮಾರ್ ಪೆಚ್ಚು ಮೋರೆ ಹಾಕಿಕೊಂಡು ಓಡಾಡಬೇಕಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ಟ್ವೀಟ್ ಕಿತ್ತಾಟದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಆದರೂ ಅವರು ನನ್ನನ್ನು ನಿರ್ನಾಮ ಮಾಡಲು ಬಂದು ಅವರೇ ನಿರ್ನಾಮವಾಗುತ್ತಿದ್ದಾರೆ’ ಎಂದು ಹರಿಹಾಯ್ದರು.
ಈ ಟ್ವೀಟ್ ಕಿತ್ತಾಟ ಕಾಂಗ್ರೆಸ್ಸಿನ ಆಂತರಿಕ ವಿಚಾರ. ಆದರೆ, ನನ್ನ ಹೆಸರನ್ನು ಇಲ್ಲಿ ಎಳೆದು ತಂದಿದ್ದರಿಂದ ನಾನು ಪ್ರತಿಕ್ರಿಯೆ ನೀಡುತ್ತಿದ್ದೇನಷ್ಟೆ. ಡಿ.ಕೆ.ಶಿವಕುಮಾರ್ ಅವರ ಮಾತುಗಳನ್ನು ಅವರ ಪಕ್ಷದ ನಾಯಕರುಗಳೇ ಖಂಡಿಸಿರುವುದು ಸ್ವಾಗತಾರ್ಹ. ವೈಯಕ್ತಿಕ ಸಂಬಂಧ ಮತ್ತು ರಾಜಕಾರಣ ಎರಡನ್ನೂ ಬೆರೆಸುವುದು ನೀಚ ಮನಸ್ಥಿತಿ ಎಂದು ಅಶ್ವಥ ನಾರಾಯಣ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ದಿಕ್ಕು ತಪ್ಪಿದ ಪಿಎಸ್‌ಐ ಪರೀಕ್ಷಾ ಅಕ್ರಮ ತನಿಖೆ: ಪ್ರಿಯಾಂಕ್ ಖರ್ಗೆ ಆರೋಪ
ಡಿಕೆ ಶಿವಕುಮಾರ್ ಬಗ್ಗೆ ನನಗೆ ಯಾವುದೇ ಅನುಕಂಪವಿಲ್ಲ. ನಾವೇನಿದ್ದರೂ ಸಜ್ಜನರಿಗೆ ಮಾತ್ರ ಸಹಾನುಭೂತಿ ತೋರಿಸಬಹುದಷ್ಟೆ. ಆದರೆ ಕೆಪಿಸಿಸಿ ಅಧ್ಯಕ್ಷರ ಹಿನ್ನೆಲೆಯೇನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಡಿಕೆ ಶಿವಕುಮಾರ್ ಅವರು ಇನ್ನಾದರೂ ಪ್ರಬುದ್ಧವಾಗಿ ವರ್ತಿಸಬೇಕು. ಇಂತಹ ಒಬ್ಬ ವ್ಯಕ್ತಿಯನ್ನು ಅಧ್ಯಕ್ಷರಾಗಿ ಇಟ್ಟುಕೊಂಡಿರುವುದಕ್ಕೆ ಆ ಪಕ್ಷ ಮುಜುಗರ ಅನುಭವಿಸುತ್ತಿದೆ ಎಂದು ಸಚಿವರು ಟೀಕಿಸಿದರು.