ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹೋದರ ರಾಮೇಗೌಡ ಮತ್ತು ರುಕ್ಮಿಣಿಯವರ ಪುತ್ರ ಆರ್.ರಘು, ಬಡಗಲಹುಂಡಿಯ ಚಿಕ್ಕಮ್ಮ ಅಂಗಡಿ ತಮ್ಮಡಿಗೌಡರ ಪುತ್ರಿ ಟಿ.ಅಭಿನಯ ಅವರ ವಿವಾಹ ಮಹೋತ್ಸವ ಸಿದ್ದರಾಮನಹುಂಡಿಯಲ್ಲಿ ನಡೆಯಿತು.
ಸಹೋದರನ ಮಗನ ಮದುವೆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯೇ ಹುಟ್ಟೂರು ಸಿದ್ದರಾಮನಹುಂಡಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಪ್ಪರ ಶಾಸ್ತ್ರದಲ್ಲಿ ಪಾಲ್ಗೊಂಡು ವಧು-ವರರನ್ನು ಹರಸಿ, ಮೈಸೂರಿಗೆ ಬಂದು ವಾಸ್ತವ್ಯ ಹೂಡಿದ್ದರು.
ಬುಧವಾರ ಬೆಳಗ್ಗೆ ಮತ್ತೆ ಸಿದ್ದರಾಮನಹುಂಡಿಗೆ ಆಗಮಿಸಿ, ರೇಷ್ಮೆ ಪಂಚೆ-ಶರ್ಟ್, ಶಾಲು ಧರಿಸಿ ಪತ್ನಿ ಪಾರ್ವತಮ್ಮ ಅವರೊಂದಿಗೆ ಧಾರಾ ಮುಹೂರ್ತದಲ್ಲಿ ಪಾಲ್ಗೊಂಡಿದ್ದರು. ನಂತರ ಊರಿನಲ್ಲಿ ಹೊಸದಾಗಿ ನಿರ್ಮಿಸಿರುವ ತಮ್ಮ ಮನೆ ಜಗುಲಿಯಲ್ಲಿ ಕುಳಿತು ಗ್ರಾಮಸ್ಥರ ಯೋಗ ಕ್ಷೇಮ ಆಲಿಸಿದರಲ್ಲದೆ, ಸಮಸ್ಯೆಗಳನ್ನು ಹೇಳಿಕೊಂಡವರಿಗೆ ಸ್ಥಳದಲ್ಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಮದುವೆ ಊಟದ ಮನೆಗೆ ಆಗಮಿಸಿ ಊಟಕ್ಕೆ ಕುಳಿತವರನ್ನು ಮಾತನಾಡಿಸಿ, ತಾವೂ ಊಟ ಮಾಡಿ ಹೊರಟರು. ಈ ವೇಳೆ ಡಾ.ಯತೀಂದ್ರ ಸಿದ್ದರಾಮಯ್ಯ, ಸ್ಮಿತಾ ರಾಕೇಶ್‌ಸಿದ್ದರಾಮಯ್ಯ, ಸಚಿವೆ ಗೀತಾ ಮಹದೇವಪ್ರಸಾದ್, ಶಾಸಕರಾದ ಕೆ.ವೆಂಕಟೇಶ್, ಎಂ.ಕೆ.ಸೋಮಶೇಖರ್, ನರೇಂದ್ರ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ,
ಗೃಹ ಇಲಾಖೆಯ ಸಲಹೆಗಾರರಾದ ಕೆಂಪಯ್ಯ, ಜಿಪಂ ಮಾಜಿ ಅಧ್ಯಕ್ಷರಾದ ಕೆ.ಮರೀಗೌಡ, ಕೆ.ಸಿ.ಬಲರಾಮ್, ಎಸ್.ಸಿ. ಬಸವರಾಜು, ಧರ್ಮೇಂದ್ರರಾಜು, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್, ಭೋವಿ ನಿಗಮದ ಅಧ್ಯಕ್ಷ ಜಿ.ವಿ.ಸೀತಾರಾಮ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂದಕುಮಾರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮತ್ತಿತರರಿದ್ದರು.