Advertisement

ಮೂರು ಏತ ನೀರಾವರಿ ಯೋಜನೆಗೆ ಸಿಎಂ ಚಾಲನೆ

04:05 PM Apr 23, 2022 | Shwetha M |

ಬಾಗಲಕೋಟೆ: ಜಿಲ್ಲೆಯಲ್ಲಿ ಮೂರು ಪ್ರಮುಖ ನದಿಗಳು ಹರಿದರೂ ಕಾಲುವೆ ನಿರ್ಮಾಣಗೊಂಡರೂ ನೀರಿನ ಲಭ್ಯತೆ ಇಲ್ಲದೇ ನೀರಾವರಿಯಿಂದ ವಂಚಿತವಾಗಿದ್ದ ಭೂಮಿಗೆ ನೀರಾವರಿ ಕಲ್ಪಿಸುವ ಮೂರು ಪ್ರಮುಖ ಏತ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿಪೂಜೆ ನೆರವೇರಿಸಿದರು.

Advertisement

ಸುಮಾರು 528 ಕೋಟಿ ಮೊತ್ತದ, ಬಾದಾಮಿ ಹಾಗೂ ಬೀಳಗಿ ಮತಕ್ಷೇತ್ರಗಳ 39 ಹಳ್ಳಿಗಳ, 40 ಸಾವಿರ ಎಕರೆ ಭೂಮಿಗೆ ನೀರಾವರಿ ಕಲ್ಪಿಸುವ ಕೆರೂರ ಏತ ನೀರಾವರಿ ಯೋಜನೆಗೆ ಬಾದಾಮಿ ತಾಲೂಕಿನ ಉಗಲವಾಟದಲ್ಲಿ ಭೂಮಿಪೂಜೆ ನೆರವೇರಿಸಿದರೆ, ಘಟಪ್ರಭಾ ಯೋಜನೆಯಡಿ ನೀರಿನ ಹಂಚಿಕೆ ಇದ್ದರೂ ಕಾಲುವೆ ನಿರ್ಮಾಣಗೊಂಡರೂ ನೀರಿನ ಕೊರತೆ ಎದುರಿಸುತ್ತಿದ್ದ ಮುಧೋಳ, ಮಹಾಲಿಂಗಪುರ ಭಾಗದ 22198.57 ಹೆಕ್ಟೇರ್‌ ಭೂಮಿಗೆ ನೀರಾವರಿ ಕಲ್ಪಿಸುವ 266 ಕೋಟಿ ಮೊತ್ತದ ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ, ಘಟಪ್ರಭಾ ಎಡದಂಡೆ ಕಾಲುವೆ ಕೊನೆಯಂಚಿನ 103 ಕಿ.ಮೀ ಕೆಳ ಭಾಗದಲ್ಲಿ ಒಟ್ಟು 12007.14 ಹೆಕ್ಟೇರ್‌ ಭೂಮಿಗೆ ನೀರಾವರಿ ಕಲ್ಪಿಸುವ 228 ಕೋಟಿ ಮೊತ್ತದ ಮಂಟೂರ ಮಹಾಲಕ್ಷ್ಮೀ ಯೋಜನೆಗೆ ಮೂಧೋಳದಲ್ಲಿ ಭೂಮಿಪೂಜೆ ನೆರವೇರಿಸಿದರು.

ಮುಧೋಳ ಮತಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಏತ ನೀರಾವರಿ ಯೋಜನೆ, ವರ್ತುಲ ರಸ್ತೆ, ಘಟಪ್ರಭಾ ನದಿಗೆ ಬ್ಯಾರೇಜ್‌, ವಿವಿಧ ಸಮುದಾಯ ಭವನ ಸಹಿತ ಸುಮಾರು 1500ಕ್ಕೂ ಹೆಚ್ಚು ಕೋಟಿ ಅನುದಾನ 18 ಕಾಮಗಾರಿಗಳ ಉದ್ಘಾಟನೆ ಹಾಗೂ 36 ಹೊಸ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಭೂಮಿಪೂಜೆ ನೆರವೇರಿಸಿದರು.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನನ್ನ ಕ್ಷೇತ್ರದ ಸವಣೂರ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿ ಭೂಮಿಪೂಜೆಯೂ ನೆರವೇರಿಸಿದ್ದರು. ಆಗ ಶಾಸಕನಾಗಿ ನಾನು ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದೆ. ನಾನು ಕನಸು-ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಇಂದು ಅದೇ ಸಿದ್ದರಾಮಯ್ಯ ಅವರ ಕ್ಷೇತ್ರದ ಕೆರೂರ ಏತ ನೀರಾವರಿ ಯೋಜನೆಗೆ ನಾನು ಭೂಮಿಪೂಜೆ ನೆರವೇರಿಸುತ್ತಿದ್ದೇನೆ. ಅವರು ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ.

ಈ ಯೋಜನೆಗೆ 2019-20ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಅನುಮೋದನೆ ದೊರೆತಿದೆ. ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರ ಮೇಲೆ ಒತ್ತಾಯ ಮಾಡಿ ಯೋಜನೆ ಮಂಜೂರು ಮಾಡಿಸಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಲ್ಲ. ಯಡಿಯೂರಪ್ಪ-ಸಿದ್ದರಾಮಯ್ಯ ಇಬ್ಬರೂ ಅನ್ಯೋನ್ಯವಾಗಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ. ಸುಮ್ಮನೆ ನಾವು ಜಗಳಾಡ್ತಿವಿ. – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Advertisement

ಸ್ವಾತಂತ್ರ್ಯ ಬಂದು 75 ವರ್ಷ ಮುಗಿಯುತ್ತಿದ್ದರೂ ಅಖಂಡ ವಿಜಯಪುರ ಜಿಲ್ಲೆಯ ಹಲವು ಭಾಗದಲ್ಲಿ ನೀರಾವರಿ ಆಗಿರಲಿಲ್ಲ. ಕೆರೂರ ಭಾಗದಲ್ಲಿ ನೀರಾವರಿ ಅಷ್ಟೇ ಅಲ್ಲ, ಕುಡಿಯುವ ನೀರಿಗೂ ತೀವ್ರ ತೊಂದರೆ ಇತ್ತು. ನನ್ನ ಸೌಭಾಗ್ಯ ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಕೆರೂರ, ಸಸಾಲಟ್ಟಿ ಹಾಗೂ ಮಂಟೂರ ಏತ ನೀರಾವರಿ ಯೋಜನೆಗಳು ಚಾಲನೆಗೊಳ್ಳುತ್ತಿವೆ. -ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

ಯುಕೆಪಿ 3ನೇ ಹಂತದ ಯೋಜನೆ ಶೀಘ್ರ ಮುಗಿಯಬೇಕು. ಅದಕ್ಕಾಗಿ ಆಲಮಟ್ಟಿ ಜಲಾಶಯ 524.256 ಮೀಟರ್‌ಗೆ ಎತ್ತರಿಸಲು ಹಾಗೂ ಹಂಚಿಕೆಯಾದ ನೀರು ಬಳಕೆಗೆ ಕೇಂದ್ರ ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು. ಕೃಷ್ಣಾ, ಮಹದಾಯಿ ವಿಷಯದಲ್ಲಿ ಅಧಿಸೂಚನೆ ಹೊರಡಿಸಲು ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕಬೇಕು. -ಸಿದ್ದರಾಮಯ್ಯ, ವಿಧಾನಸಭೆ ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next