Advertisement

ಸಿಎಂಸಿಗೆ ಶುಲ್ಕ ಕಟ್ಟದ ಬಿಟ್ಟಿ ಪ್ರಚಾರ ಪ್ರಿಯರು!

03:51 PM May 10, 2022 | Team Udayavani |

ರಾಯಚೂರು: ಪ್ರಚಾರ ಪಡೆಯುವಲ್ಲಿ ನಾ ಮುಂದು ತಾ ಮುಂದು ಎಂದು ನಗರದ ಮೂಲೆ ಮೂಲೆಗಳಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸುವ ನಾಯಕರು, ನಗರಸಭೆಗೆ ಶುಲ್ಕ ಕಟ್ಟಲು ಮಾತ್ರ ದೂರ ಉಳಿಯುತ್ತಾರೆ. ಜಾಹೀರಾತು ಫ್ಲೆಕ್ಸ್‌ಗಳಿಂದ ನಗರಸಭೆಗೆ ಬರಬೇಕಾದ ಆದಾಯ ಸಂಪೂರ್ಣ ಕಡಿಮೆಯಾಗಿದೆ.

Advertisement

ನಗರದ ಯಾವುದೇ ವೃತ್ತಗಳಿರಲಿ ಅಲ್ಲಿ ಒಂದಲ್ಲ ಒಂದು ಕಾರಣಕ್ಕೆ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿರುತ್ತದೆ. ಹಬ್ಬಗಳು, ಮಹಾನ್‌ ನಾಯಕರ ಜಯಂತಿಗಳು, ಜನಪ್ರತಿನಿಧಿಗಳ ಸ್ವಾಗತ, ಜನ್ಮದಿನಾಚರಣೆಗಳಿಗೆ ಶುಭ ಕೋರಿದ ಬ್ಯಾನರ್‌ಗಳನ್ನು ಅಳವಡಿಸಲಾಗಿರುತ್ತದೆ. ರಸ್ತೆ ಇಕ್ಕೆಲಗಳಲ್ಲಿ ಬ್ಯಾನರ್‌ ಹಾವಳಿ ಮಿತಿಮೀರಿದೆ.

ರಸ್ತೆ ಮಧ್ಯೆ ಇರುವಂಥ ವಿದ್ಯುತ್‌ ಕಂಬಗಳಿಗೂ ಫ್ಲೆಕ್ಸ್‌ಗಳನ್ನು ಅಳವಡಿಸುತ್ತಿದ್ದು, ಪ್ರಯಾಣಿಕರಿಗೆ ಕುತ್ತುಂಟು ಮಾಡುವಂತಿರುತ್ತದೆ. ಆದರೆ, ಇಷ್ಟೆಲ್ಲ ಬ್ಯಾನರ್‌ಗಳು, ಬಂಟ್ಸೆಂಗ್‌ ಗಳನ್ನು ಹಾಕಿದರೂ ನಗರಸಭೆಗೆ ಬರಬೇಕಾದ ಆದಾಯ ಮಾತ್ರ ಬರುತ್ತಿಲ್ಲ. ನಗರಸಭೆಗೆ ಪಾವತಿಸಬೇಕಾದ ಶುಲ್ಕವನ್ನು ಶೇ.80ರಷ್ಟು ಜನ ಕಟ್ಟುತ್ತಿಲ್ಲ ಎನ್ನುವುದು ವಾಸ್ತವ.

ಈ ಫ್ಲೆಕ್‌ ಗಳಲ್ಲಿ ರಾರಾಜಿಸುವವರು ಒಂದಲ್ಲ ಒಂದು ಪಕ್ಷಗಳಲ್ಲೋ, ಸಂಘಟನೆಗಳಲ್ಲೋ ಗುರುತಿಸಿಕೊಂಡವರೇ ಆಗಿರುತ್ತಾರೆ. ಶುಲ್ಕ ಕಟ್ಟುವಂತೆ ಕೇಳಿದರೆ ಸಾಕು ಪ್ರಭಾವಿಗಳಿಂದಲೇ ಕರೆ ಮಾಡಿಸಿ ಮನ್ನಾ ಮಾಡುವಂತೆ ಒತ್ತಾಯಿಸುತ್ತಾರಂತೆ. ಎಲ್ಲಕ್ಕಿಂತ ಮುಖ್ಯವಾಗಿ ನಗರಸಭೆ ಸದಸ್ಯರು, ಅಧಿಕಾರಿಗಳ ಸಂಬಂಧಿಕರು ಕೂಡ ಈ ರೀತಿ ಫ್ಲೆಕ್ಸ್‌ಗಳಲ್ಲಿ ಕಂಡು ಬರುತ್ತಾರೆ. ಅವರಿಂದ ಶುಲ್ಕ ವಸೂಲಿ ಮಾಡುವವರಾದರೂ ಯಾರು ಎನ್ನುವಂತಾಗಿದೆ.

ಶೇ.20 ಮಾತ್ರ ವಸೂಲಿ

Advertisement

ನಗರಸಭೆ ಮೂಲಗಳ ಪ್ರಕಾರ ಜಾಹೀರಾತಿನಿಂದ ಬರುವ ಆದಾಯದಲ್ಲಿ ಈಗ ಪ್ರತಿ ವರ್ಷ ಶೇ.20ರಷ್ಟು ಮಾತ್ರ ಹಣ ವಸೂಲಿ ಮಾಡಲಾಗುತ್ತಿದೆ. ಪ್ರತಿ ಚದರಡಿಗೆ 6 ರೂ.ನಂತೆ ಶುಲ್ಕ ನಿಗದಿಪಡಿಸಲಾಗಿದೆ. ಇದರಿಂದ ನಗರಸಭೆಗೆ ಪ್ರತಿ ವರ್ಷ ಸುಮಾರು 10 ಲಕ್ಷ ರೂ. ಗಿಂತ ಹೆಚ್ಚು ಆದಾಯ ಬರಬೇಕು. ಆದರೆ, ಕನಿಷ್ಠ ಎರಡು ಲಕ್ಷವೂ ಸಂಗ್ರಹಿಸುತ್ತಿಲ್ಲ. ಅಭಿವೃದ್ಧಿ ಕೆಲಸಗಳಿಗೆ ನಗರಸಭೆಯಲ್ಲಿ ಹಣದ ಕೊರತೆ ಹೇಳುವ ಅಧಿಕಾರಿಗಳು ಈ ರೀತಿ ಸೋರಿಕೆಯಾಗುತ್ತಿರುವ ಹಣವನ್ನು ಸಂಗ್ರಹಿಸುವಲ್ಲಿ ಮುಂದಾಗದಿರುವುದು ವಿಪರ್ಯಾಸ.

ಏಜೆನ್ಸಿಗಳಿಗೂ ನಷ್ಟ: ಕೆಲವೊಂದು ಕಂಪನಿಗಳು, ಏಜೆನ್ಸಿಗಳು ಸ್ವಂತ ಜಾಹೀರಾತು ಫಲಕಗಳನ್ನು ಅಳವಡಿಸಿಕೊಂಡಿವೆ. ಆದರೆ, ಕಂಪನಿಗಳು ಪ್ರಚಾರಕ್ಕಾಗಿ ಜಾಹೀರಾತು ಹಾಕಿಕೊಂಡಿದ್ದರೂ ಅದನ್ನು ಕಿತ್ತು ಹಾಕಿ ಕೆಲ ನಾಯಕರು ತಮ್ಮ ಬ್ಯಾನರ್‌ ಗಳನ್ನು ಅಳವಡಿಸುತ್ತಾರೆ. ಇದರಿಂದ ಏಜೆನ್ಸಿಗಳಿಗೆ ನಷ್ಟವಾಗುತ್ತಿದೆ. ಈ ಕುರಿತು ನಗರಸಭೆಗೆ ಅನೇಕ ಬಾರಿ ದೂರಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೆಲವೊಂದು ಕಂಪನಿಗಳು ನಗರಸಭೆ ಜತೆ ಒಡಂಬಡಿಕೆಗೆ ಹಿಂದೇಟಾಕುತ್ತಿರುವ ಮಾಹಿತಿ ಲಭ್ಯವಾಗಿದೆ.

ನಗರಸಭೆ ವ್ಯಾಪ್ತಿಗೆ ಬರುವ ಸ್ಥಳಗಳಲ್ಲಿ ಜಾಹೀರಾತು ಅಳವಡಿಸಲು ಶುಲ್ಕ ಪಾವತಿಸಬೇಕು. ಅನುಮತಿ ಪಡೆದು ರಶೀದಿ ಪಡೆಯಬೇಕು. ಆದರೆ, ನಗರದಲ್ಲಿ ಬೇಕಾಬಿಟ್ಟಿ ಬ್ಯಾನರ್‌ ಅಳವಡಿಸುತ್ತಿರುವುದು ನಿಜ. ಕನಿಷ್ಠ ಪಕ್ಷ ಶುಲ್ಕ ಕಟ್ಟಿ ಎಂದರೂ ಅವರಿವರಿಂದ ಕರೆ ಮಾಡಿಸುತ್ತಾರೆ. -ಹೆಸರು ಹೇಳಲಿಚ್ಛಿಸದ ಸಿಎಂಸಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next