ಮುಂಬೈ:ಉತ್ತರಪ್ರದೇಶದಲ್ಲಿನ ಪ್ರಸ್ತಾವಿತ ಫಿಲ್ಮ್ ಸಿಟಿ ಕಾರ್ಯಕ್ಕೆ ಚಾಲನೆ ನೀಡಲು ಶೀಘ್ರವೇ ಮುಂದಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಾಲಿವುಡ್ ನಟರು ಮತ್ತು ಹೂಡಿಕೆದಾರರ ಜತೆ ಸರಣಿ ಮಾತುಕತೆ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾತ್ರಿ 7.30ಕ್ಕೆ ಮುಂಬೈಗೆ ಆಗಮಿಸುವ ನಿರೀಕ್ಷೆ ಇದೆ. ವಿಮಾನ ನಿಲ್ದಾಣದಿಂದ ನೇರವಾಗಿ ಒಬೆರಾಯ್ ಹೋಟೆಲ್ ಗೆ ಆಗಮಿಸಲಿದ್ದು, ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಜತೆ ಊಟೋಪಚಾರ(ಡಿನ್ನರ್)ದ ಜತೆಗೆ ಮಾತುಕತೆ ನಡೆಸಲಿದ್ದಾರೆ ಎಂದು ವರದಿ ವಿವರಿಸಿದೆ.
ಎರಡನೇ ದಿನ (ಬುಧವಾರ ಡಿ.2, 2020) ಯೋಗಿ ಆದಿತ್ಯನಾಥ್ ಅವರು, ಲಕ್ನೋ ಮುನ್ಸಿಪಲ್ ಕಾರ್ಪೋರೇಶನ್ ಬಾಂಡ್ಸ್ ಗಳ ಪಟ್ಟಿಗಾಗಿ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಗೆ ಭೇಟಿ ನೀಡಲಿದ್ದಾರೆ. ನಂತರ ರಕ್ಷಣಾ ಕಾರಿಡಾರ್, ಫಿಲ್ಮ್ ಸಿಟಿ ನಿರ್ಮಾಣದ ಹಿನ್ನೆಲೆಯಲ್ಲಿ ಹಲವು ಪ್ರತಿಷ್ಠಿತ ಹೂಡಿಕೆದಾರರನ್ನು ಭೇಟಿಯಾಗಲಿದ್ದಾರೆ.
ಹೂಡಿಕೆದಾರರ ಜತೆಗಿನ ಮಾತುಕತೆ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ. ಬುಧವಾರ ಸಂಜೆ ಯೋಗಿ ಅವರು ಮುಂಬೈನಿಂದ ಲಕ್ನೋಗೆ ತೆರಳಲಿದ್ದಾರೆ.
ಹಸ್ತಿನಾಪುರ್ ಪ್ರದೇಶ ಸಮೀಪದ ಯಮುನಾ ಎಕ್ಸ್ ಪ್ರೆಸ್ ವೇ ಬಳಿ ಭಾರತದ ಅತ್ಯಂತ ದೊಡ್ಡ ಫಿಲ್ಮ್ ಸಿಟಿಯನ್ನು ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಳೆದ ಸೆಪ್ಟೆಂಬರ್ ನಲ್ಲಿ ಘೋಷಿಸಿದ್ದರು.
ನೂತನ ಫಿಲ್ಮ್ ಸಿಟಿ ಕುರಿತಂತೆ ಯೋಗಿ ಅವರು ಈಗಾಗಲೇ ಸಿನಿಮಾ ಇಂಡಸ್ಟ್ರೀಯ ಹಲವಾರು ಪ್ರಮುಖ ವ್ಯಕ್ತಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದರು.