Advertisement

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮತ್ತೇ ಗೋವಾಕ್ಕೆ ಹೊರಟ ಮುಖ್ಯಮಂತ್ರಿ ಏಕನಾಥ ಶಿಂಧೆ

12:02 PM Jul 01, 2022 | Team Udayavani |

ಪಣಜಿ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಖ್ಯಮಂತ್ರಿ ಏಕನಾಥ ಶಿಂಧೆ ವಿಶೇಷ ವಿಮಾನದ ಮೂಲಕ ಗುರುವಾರ ಮಧ್ಯರಾತ್ರಿ ಗೋವಾಕ್ಕೆ ಆಗಮಿಸಿದ್ದಾರೆ.

Advertisement

ಗೋವಾದಲ್ಲಿ ತಮ್ಮ ರೆಬೆಲ್ ಶಾಸಕರಿದ್ದ ತಾಜ್ ಹೊಟೇಲ್‍ಗೆ ಆಗಮಿಸಿದ  ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಹೋಟೆಲ್‍ನಲ್ಲಿದ್ದ ರೆಬೆಲ್ ಶಾಸಕರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ರವರು ಶಿಂಧೆಗೆ ಶುಭಾಷಯ ಕೋರಿದರು.

ಶಿಂಧೆ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದಾಗ ಗುರುವಾರ ಸಂಜೆಯಿಂದಲೇ ಗೋವಾದ ತಾಜ್ ಹೋಟೆಲ್‍ನಲ್ಲಿದ್ದ ರೆಬೆಲ್ ಶಾಸಕರು ಸಂಭ್ರಮದಲ್ಲಿದ್ದರು. ಹೋಟೆಲ್‍ನಲ್ಲಿ ಹಾಕಲಾಗಿದ್ದ ಬೃಹತ್ ಪರದೆಯಲ್ಲಿ ಪ್ರಮಾಣ ವಚನ ಸಮಾರಂಭದ ನೇರಪ್ರಸಾರ ವೀಕ್ಷಿಸಿದರು.

ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದಲ್ಲಿ ಗೋವಾದ ತಾಜ್ ಹೋಟೆಲ್‍ನಲ್ಲಿ ಇತರ ರೆಬೆಲ್ ಶಾಸಕರ ಉಪಸ್ಥಿತಿಯಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಭೆಯಲ್ಲಿ ಸಮ್ಮಿಶ್ರ ಸರ್ಕಾರ ರಚನೆಯ ಹಾಗೂ ಮಂತ್ರಿಮಂಡಲ ರಚನೆಯ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಖ್ಯಮಂತ್ರಿ ಏಕನಾಥ ಶಿಂಧೆ ರವರು ಗೋವಾಕ್ಕೆ ಆಗಮಿಸಿದ್ದು, ಗೋವಾದ ತಾಜ್ ಹೋಟೆಲ್‍ನಲ್ಲಿರುವ ಬಂಡಾಯ ಶಾಸಕರನ್ನು ಭೇಟಿ ಮಾಡಿ ಶಾಸಕರನ್ನು ಶನಿವಾರ ಮುಂಬಯಿಗೆ ಕರೆದೊಯ್ಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಜುಲೈ 2 ಅಥವಾ 3 ರಂದು ಮಹಾರಾಷ್ಟ್ರ ವಿಧಾನಸಭಾ ಅಧಿವೇಶನ ನಡೆಯುವ ಸಾಧ್ಯತೆಯಿದ್ದು, ಈ ಅಧಿವೇಶನದಲ್ಲಿ ಬಹುಮತ ಯಾಚನೆ ಹಾಗೂ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂಬ ಮಾಹಿತಿ ಇದೆ.

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಗೋವಾಕ್ಕೆ ಆಗಮಿಸಿದ ಅವರು ಶುಕ್ರವಾರ ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರ ರಾಜ್ಯದ ಜನರು ನಿರೀಕ್ಷಿಸಿದ ಎಲ್ಲ ಕೆಲಸಗಳನ್ನು ನಮ್ಮ ಸರ್ಕಾರ ಮಾಡಲಿದೆ. ಸಮಾಜದ ಎಲ್ಲ ವರ್ಗದ ಜನರಿಗೆ ನ್ಯಾಯ ದೊರಕಿಸಿ ಕೊಡಲು ನಮ್ಮ ಸರ್ಕಾರ ಶ್ರಮಿಸಲಿದೆ. ನಾವು ಬಾಳಾಸಾಹೇಬ್ ಠಾಕ್ರೆ ರವರ ಅಭಿವೃದ್ಧಿಯ ದೂರದೃಷ್ಠಿಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಬಾಳಾಸಾಹೇಬ್ ಠಾಕ್ರೆ ರವರ ಶಿವಸೈನಿಕರು ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಯಾಗಿರುವುದಕ್ಕೆ ಕೇವಲ ವಿಧಾನಸಭೆಯ ಸಹೋದ್ಯೋಗಿಗಳು ಮಾತ್ರವಲ್ಲದೆಯೇ ಮಹಾರಾಷ್ಟ್ರ ರಾಜ್ಯದ ಜನತೆಗೂ ಕೂಡ ಸಂತೋಷವಾಗಿದೆ ಎಂದು ಹೇಳಿದರು.

ಸಚಿವ ಸಂಪುಟ ಪುನರ್ರಚನೆಯ ಕುರಿತು ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ಕಾರ್ಯತಂತ್ರದ ಕುರಿತು ಸಹೋದ್ಯೋಗಿಗಳ ಜೊತೆ ಸಭೆ ನಡೆಸಿ ಚರ್ಚಿಸಲಾಗುವುದು. ನಮ್ಮ ಬಳಿ 40 ಮತ್ತು 10 ಒಟ್ಟೂ 50 ಜನ ಶಾಸಕರಿರುವುದನ್ನು ಕಾಣಬಹುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next