ಬೆಂಗಳೂರು: 2014 ರಿಂದ 2018ರ ಸಾಲಿನವರೆಗೆ ರಾಜ್ಯದ 131 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕೃಷಿ ಹೊಂಡಗಳ ನಿರ್ಮಾಣದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅವ್ಯವಹಾರಗಳ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶಿಸಿದ್ದಾರೆ.
ರಾಜ್ಯದ ಶೇಖಡಾ 66ರಷ್ಟು ಭೂಪ್ರದೇಶ ಮಳೆಯಾಧಾರಿತ ಕೃಷಿ ಪ್ರದೇಶವಾಗಿರುವುದರಿಂದ ಮಳೆ ಅವಲಂಬಿತ ರೈತರು ತಮ್ಮ ಕೃಷಿ ಭೂಮಿಯಲ್ಲಿ ಮಳೆ ನೀರನ್ನು ಸಂಗ್ರಹ ಮಾಡಿಕೊಳ್ಳಲು ಅನುಕೂಲವಾಗುವಂತೆ ಕೃಷಿ ಹೊಂಡಗಳ ನಿರ್ಮಾಣಕ್ಕೆ 2014-15ರ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು.
ಈ ಯೋಜನೆಯಡಿಯಲ್ಲಿ ರೈತರಿಗೆ ಕೃಷಿ ಹೊಂಡ ನಿರ್ಮಾಣ, ಪಾಲಿಥೀನ್ ಹೊದಿಕೆ, ನೆರಳು ಪರದೆ, ಡೀಸಲ್ ಪಂಪ್ ಗಳ ಅಳವಡಿಕೆ ಮೊದಲಾದ ಸವಲತ್ತುಗಳನ್ನು ಒದಗಿಸುವ ಸಲುವಾಗಿ ಈ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ಹಣಕಾಸು ನೆರವು ಒದಗಿಸಲಾಗುತ್ತಿದೆ.
ಈ ಯೋಜನೆಯ ಅಡಿಯಲ್ಲಿ 2014 ರಿಂದ 2018ರ ಅವಧಿಯಲ್ಲಿ ರಾಜ್ಯದ 131 ತಾಲ್ಲೂಕುಗಳ ವ್ಯಾಪ್ತಿಯಲ್ಲಿ 2,15,130 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಮತ್ತು ಇದಕ್ಕಾಗಿ ಒಟ್ಟು ಒಂಭೈನೂರಾ ಇಪ್ಪತ್ತೊಂದು ಕೋಟಿ ಹದಿನಾರು ಲಕ್ಷದ ಇಪ್ಪತ್ತಮೂರು ಸಾವಿರ ರೂಪಾಯಿಗಳ ವೆಚ್ಚ ಸಂಭವಿಸಿದೆ ಎಂಬ ಮಾಹಿತಿಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ನೀಡಿದ್ದರು.
ಈ ಮಾಹಿತಿ ಮೇಲ್ನೋಟಕ್ಕೆ ಸರಿಯಲ್ಲ ಎಂದು ಕಂಡುಬಂದಿರುವ ಹಿನ್ನಲೆಯಲ್ಲಿ ಹಾಗೂ ಮೇಲ್ಕಾಣಿಸಿದಷ್ಟು ಕೃಷಿ ಹೊಂಡಗಳೇ ನಿರ್ಮಾಣವಾಗಿಲ್ಲ ಎಂದು ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.