ಬಾಗಲಕೋಟೆ: ರಾಜ್ಯದ ಬೃಹತ್ ನೀರಾವರಿ ಯೋಜನೆಯಡಿಯಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ 2ನೇ ಹಂತದ ಎಲ್ಲ ಕಾಮಗಾರಿಗಳನ್ನು ಸಾಲ ಮಾಡಿಯಾದರೂ ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಆಲಮಟ್ಟಿಯಲ್ಲಿ ಕೃಷ್ಣಾ ನದಿಯ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ 6.24 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಯುಕೆಪಿ ಯೋಜನೆ 2ನೇ ಹಂತಕ್ಕೆ 130 ಟಿಎಂಸಿ ನೀರು ಹಂಚಿಕೆಯಾಗಿದೆ. ಈ ನೀರು ಸದ್ಭಳಕೆ ಮಾಡಿಕೊಳ್ಳಲು ಬದ್ಧತೆಯಿಂದ ಕೆಲಸ ಮಾಡುತ್ತೇವೆ ಎಂದರು.
ಕೋವಿಡ್ ಹಿನ್ನೆಲೆ ರಾಜ್ಯದ ಆರ್ಥಿಕ ಸ್ಥಿತಿಗತಿ ಸರಿಯಾಗಿಲ್ಲ. ಆದರೂ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಲು ಬಿಡಲ್ಲ. ಪ್ರವಾಹದಿಂದ ಹಾನಿಯಾದ ಬೆಳೆ ಹಾಗೂ ಬಿದ್ದ ಮನೆಗಳಿಗೆ ತಕ್ಷಣ ಪರಿಹಾರ, ಹಾಳಾದ ರಸ್ತೆಗಳನ್ನು ತಕ್ಷಣ ದುರಸ್ಥಿಗೊಳಿಸಲು ಸೂಚಿಸಲಾಗಿದೆ ಎಂದರು.
ಪ್ರವಾಹ ಹಾನಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳ ಸಚಿವರು, ಸಂಸದರು, ಶಾಸಕರೊಂದಿಗೆ ಒಂದು ಗಂಟೆಗಳ ಕಾಲ ಚರ್ಚೆ ಮಾಡಿದ್ದೇನೆ. ಈ ಭಾಗದ ಜನಪ್ರತಿನಿಧಿಗಳು ಒಂದೇ ಮನವಿಯನ್ನು ಒಕ್ಕೋರಲಿನಿಂದ ಹೇಳಿದ್ದಾರೆ. ಆಲಮಟ್ಟಿ ಜಲಾಶಯವನ್ನು 524.256 ಮೀಟರ್ ಗೆ ಎತ್ತರಿಸಬೇಕು. ಯುಕೆಪಿ 2 ನೇ ಹಂತದ ಎಲ್ಲ ಕಾಮಗಾರಿ ಪೂರ್ಣಗೊಳಿಸಲು ಕೇಳಿಕೊಂಡಿದ್ದಾರೆ. ಇದಕ್ಕೆ ನಾನು ಸಂಪೂರ್ಣ ಭರವಸೆ ನೀಡಿದ್ದು, ಆರ್ಥಿಕ ಸಮಸ್ಯೆ ಇದ್ದರೂ ಸಾಲ ಮಾಡಿಯಾದ್ರೂ ಈ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ದೇನೆ ಎಂದು ಹೇಳಿದರು.\
ಇದನ್ನೂ ಓದಿ: ಡಿಕೆ ಶಿವಕುಮಾರ್ ಗೆ ಸೋನಿಯಾ, ರಾಹುಲ್ ಗಾಂಧಿ ದೂರವಾಣಿ ಕರೆ; ಶೀಘ್ರ ಗುಣಮುಖರಾಗುವಂತೆ ಹಾರೈಕೆ
ಮುಂದಿನ ತಿಂಗಳು ಪಿಎಂ ಭೇಟಿ:
ಆಲಮಟ್ಟಿಯ ಕೃಷ್ಣಾ ಮೇಲ್ದಂಡೆ ಯೋಜನೆಗೆ ಆರ್ಥಿಕ ನೆರವು ನೀಡುವಂತೆ ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುದ್ದಾಗಿ ಭೇಟಿಮಾಡಿ ಮನವಿ ಮಾಡುತ್ತೇನೆ. ರಾಜ್ಯದ ಪಾಲಿನ ಜಿ.ಎಸ್.ಟಿ ಹಣ ನೀಡುವಂತೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಪ್ರಲ್ಹಾದ ಜೋಶಿ ಅವರೊಂದಿಗೆ ಚರ್ಚೆ ಮಾಡಿರುವೆ. ಶೀಘ್ರವೇ ಆ ಹಣ ಕೇಂದ್ರದಿಂದ ರಾಜ್ಯಕ್ಕೆ ಬರಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.