Advertisement

ಕಾಂಗ್ರೆಸ್‌ಗೆ ಸಿಎಂ ಚಿಂತೆ; ಹೆಚ್ಚುತ್ತಿದೆ ಆಕಾಂಕ್ಷಿಗಳ ಪಟ್ಟಿ

11:10 PM Feb 18, 2023 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಪಟ್ಟಿ ದಿನೇ ದಿನೇ ಬೆಳೆಯುತ್ತಿದೆ. ಸಿಎಂ ಹುದ್ದೆ ಕುರಿತು ಇದುವರೆಗಿನ ಮುಸುಕಿನ ಗುದ್ದಾಟ ಈಗ ನಿಧಾನವಾಗಿ ಬೀದಿಗೆ ಬರುತ್ತಿದೆ. ಈ ಬೆಳವಣಿಗೆಗಳೇ ಕಾಂಗ್ರೆಸ್‌ಗೆ ಭವಿಷ್ಯದಲ್ಲಿ ಮಗ್ಗಲು ಮುಳ್ಳಾಗುವ ಲಕ್ಷಣಗಳಿವೆ.

Advertisement

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಈ ವಿಷಯದಲ್ಲಿ ನಡೆಯುತ್ತಿದ್ದ ಜಟಾಪಟಿ ಈಗ ಇವರಿಗಷ್ಟೇ ಸೀಮಿತವಾಗದೆ, ವಿಸ್ತಾರ ದೊಡ್ಡದಾಗುತ್ತಿದೆ. ಸದ್ಯಕ್ಕೆ ಅರ್ಧ ಡಜನ್‌ಗೂ ಹೆಚ್ಚು ಮಂದಿ ಸಿಎಂ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ಜತೆಗೆ ಪಕ್ಷದಲ್ಲಿ ಜಾತಿವಾರು ಬೇಡಿಕೆಗಳೂ ಕೇಳಿ ಬರುತ್ತಿರುವುದು ಹಲವು ಮಂದಿಗೆ ನುಂಗಲಾರದ ತುತ್ತಾಗಿದೆ. ಅಷ್ಟೇ ಅಲ್ಲ ಉಳಿದವರು ತಮಗೆ ತೊಡರುಗಾಲು ಆಗುವರೆಂಬ ಕಾರಣದಿಂದ “ಒಳ ಏಟು’ ಕೊಡುವ ಲೆಕ್ಕಾಚಾರದಲ್ಲಿದ್ದಾರೆ.

ಡಿಕೆಶಿ, ಸಿದ್ದರಾಮಯ್ಯ ಅವರಲ್ಲದೆ ಹಿಂದೆ ಅವಕಾಶ ವಂಚಿತರಾಗಿದ್ದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಮೇಲ್ಮನೆ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಅವರ ಹೆಸರು ಮುಂಚೂಣಿಗೆ ಬಂದಿವೆ. ಈ ಪೈಕಿ ಹಲವರು ತಾವು ಕೂಡ ಸಿಎಂ ಹುದ್ದೆಯ ರೇಸ್‌ನಲ್ಲಿ ಇರುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿರುವುದು ಉಳಿದವರ ಕಣ್ಣು ಕೆಂಪಾಗಿಸಿದೆ. ಇದು ಕಾಂಗ್ರೆಸ್‌ನ ಚುನಾವಣಾ ತಂತ್ರಗಾರಿಕೆ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ ಎಂಬುದು ಪಕ್ಷದ ಆತಂಕ. ಈ ಬಗ್ಗೆ ಪಕ್ಷದಲ್ಲಿ ಭಿನ್ನರಾಗಕ್ಕೆ ಅವಕಾಶ ಕೊಡಬಾರದೆಂದು ಹೈಕಮಾಂಡ್‌ ಎಚ್ಚರಿಕೆವಹಿಸಿದೆ. ಹೀಗಾಗಿ ಸಾಮೂಹಿಕ ನಾಯಕತ್ವದ ಮಂತ್ರ ಜಪಿಸುತ್ತಿದೆ.

ಒಕ್ಕಲಿಗರಲ್ಲಿ ಡಿಕೆಶಿ
ಎಸ್‌.ಎಂ.ಕೃಷ್ಣ ನಂತರ ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್‌ನಲ್ಲಿ ಸಿಎಂ ಅವಕಾಶ ದೊರೆತಿಲ್ಲ, ಈ ಸಲ ಅವಕಾಶ ಒದಗಿಬಂದಿದ್ದು ಅದನ್ನು ಕಳೆದುಕೊಳ್ಳಬೇಡಿ ಎಂದು ಮೈಸೂರು ಹಾಗೂ ಮಂಡ್ಯ ಸಭೆಗಳಲ್ಲಿ ಡಿ.ಕೆ.ಶಿವಕುಮಾರ್‌ ನೇರವಾಗಿ ಹೇಳಿ ಒಕ್ಕಲಿಗರು ನನ್ನನ್ನು ಕೈಹಿಡಿಯಬೇಕೆಂದು ಕರೆ ನೀಡಿದ್ದಾರೆ. ಜತೆಗೆ ತಾನು ಪ್ರಬಲ ಆಕಾಂಕ್ಷಿ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಸಿಎಲ್‌ಪಿ ನಾಯಕ
ಇನ್ನು ಸಿಎಲ್‌ಪಿ ನಾಯಕನಾಗಿರುವುದರಿಂದ ಸಹಜವಾಗಿಯೇ ತಮಗೆ ಅವಕಾಶ ಕೊಡಬೇಕು ಎಂಬುದು ಸಿದ್ದರಾಮಯ್ಯ ಅವರ ಡಿಮ್ಯಾಂಡ್‌, ಜತೆಗೆ ಕುರುಬ ಸಮುದಾಯ ಕೂಡ ಈ ಸಲವೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಿದೆ. ಜಮೀರ್‌ ಅಹ್ಮದ್‌, ಬೈರತಿ ಸುರೇಶ್‌ ಸೇರಿದಂತೆ ಹಲವು ಆಪ್ತ ಶಾಸಕರು ಬಹಿರಂಗವಾಗಿಯೇ ಸಿದ್ದರಾಮಯ್ಯ ಪರ ಧ್ವನಿ ಎತ್ತಿದ್ದಾರೆ.

Advertisement

ದಲಿತರ ನಿರೀಕ್ಷೆ:
ರಾಜ್ಯದಲ್ಲಿ ದಲಿತ ಸಮುದಾಯ ಹಲವು ಸಲ ಅವಕಾಶಗಳನ್ನು ಕಳೆದುಕೊಂಡಿದ್ದು ಈ ಸಲ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಪರಮೇಶ್ವರ್‌, ಮುನಿಯಪ್ಪ ಅವರದು. ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ವಲ್ಪದರಲ್ಲಿ ಅವಕಾಶ ತಪ್ಪಿಸಿ ಅವರನ್ನು ದಿಲ್ಲಿಗೆ ಕಳುಹಿಸಲಾಯಿತು. ಕಾಂಗ್ರೆಸ್‌ನಿಂದ ಬ್ರಾಹ್ಮಣರು, ಒಕ್ಕಲಿಗರು, ಲಿಂಗಾಯತರು, ಹಿಂದುಳಿದ ವರ್ಗದವರು ಸಿಎಂ ಆಗಿದ್ದಾರೆ. ನಮಗೂ ಅವಕಾಶ ಕೊಡಿ ಎಂಬುದು ದಲಿತರ ಬೇಡಿಕೆ. ಈ ವಿಷಯದಲ್ಲಿ ಪರಮೇಶ್ವರ್‌ ಅವರು ತುಸು ಒಂದು ಹೆಜ್ಜೆ ಮುಂದೆಯೇ ಹೋಗಿ ಈ ಸಲ ನಾನು ಸಿಎಂ ಹುದ್ದೆಯ ಆಕಾಂಕ್ಷಿ ಎಂದು ಹೇಳುವ ಮೂಲಕ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ. ಜತೆಗೆ ದಲಿತ ಸಮುದಾಯದ ಗಮನ ಕೂಡ ಸೆಳೆದಿದ್ದಾರೆ.

ಲಿಂಗಾಯತರ ಬೇಡಿಕೆ
ವೀರೇಂದ್ರ ಪಾಟೀಲರ ನಂತರ ಲಿಂಗಾಯಿತರಿಗೆ ಪಕ್ಷದಲ್ಲಿ ಅವಕಾಶ ದೊರೆತಿಲ್ಲ. ಹಲವು ಕಾರಣಗಳಿಂದ ಲಿಂಗಾಯಿತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಈ ಸಲ ವೀರಶೈವ-ಲಿಂಗಾಯಿತರಿಗೆ ಸಿಎಂ ಹುದ್ದೆ ಕೊಡಬೇಕು, ಜತೆಗೆ ಲಿಂಗಾಯಿತರಿಗೆ ಹೆಚ್ಚಿನ ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಬೇಕೆಂದು ಈ ಸಮುದಾಯ ವರಿಷ್ಠರ ಮುಂದೆ ಬೇಡಿಕೆ ಮಂಡಿಸಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹಲವು ಸಲ ತಮ್ಮ ಮನದಾಳವನ್ನು ಹೊರ ಹಾಕಿದ್ದಾರೆ. ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಕೂಡ ಲಿಂಗಾಯಿತರಿಗೆ ಅವಕಾಶ ಕೊಡಬೇಕೆಂದು ಹೇಳಿದ್ದಿದೆ. ಇತ್ತೀಚಿಗೆ ಪಕ್ಷದ ಮತ್ತೂಬ್ಬ ಹಿರಿಯ ನಾಯಕ ಎಸ್‌.ಆರ್‌ .ಪಾಟೀಲ್‌ ಅವರು ಈ ಸಲ ವೀರಶೈವ-ಲಿಂಗಾಯಿತರಿಗೆ ಸಿಎಂ ಸ್ಥಾನ ನೀಡಬೇಕೆಂದು ಗಟ್ಟಿಯಾಗಿಯೇ ಹೇಳಿ ಪಕ್ಷದಲ್ಲಿ ಸಂಚಲನ ಮೂಡಿಸಿದ್ದಾರೆ.

ನಾವೂ ಇದ್ದೇವೆ:
ಇವೆಲ್ಲದರ ನಡುವೆ ಹಿಂದುಳಿದ ವರ್ಗಗಳಿಗೆ ಸೇರಿದ ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ನಾವೂ ಇದ್ದೇವೆ, ಇತರೆ ಹಿಂದುಳಿದ ವರ್ಗಗಳಿಗೂ ಅವಕಾಶ ಕಲ್ಪಿಸಬೇಕು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಕುರುಬ ಸಮಾಜಕ್ಕೆ ಈಗಾಗಲೇ ಅವಕಾಶ ದೊರೆತಿದೆ. ಹಿಂದುಳಿದ ವರ್ಗಗಳ ಪೈಕಿ 2ನೇ ದೊಡ್ಡ ಸಮುದಾಯವಾಗಿರುವ ಈಡಿಗ ಸಮಾಜಕ್ಕೆ ಅವಕಾಶ ಕೊಡಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ.

ಕಾಲೆಳೆದುಕೊಂಡು ಸೋಲುವ ಭೀತಿ
ಕಾಂಗ್ರೆಸ್‌ನಲ್ಲಿ ಸಿಎಂ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದಂತೆ ಪರಸ್ಪರ ಕಾಲೆಳೆದುಕೊಂಡು ಸೋಲುವ ಭೀತಿ ಇದೆ. ಭವಿಷ್ಯದಲ್ಲಿ ತಮಗೆ ಅಡ್ಡಗಾಲು ಆಗಬಾರದೆಂಬ ಕಾರಣಕ್ಕೆ ಚುನಾವಣೆಯಲ್ಲಿ ಸೋಲಿಸಲು “ಒಳೇಟು’ ಕೊಡುವ ಸಾಧ್ಯತೆಗಳಿವೆ. ಈ ಹಿಂದೆ ಡಾ.ಜಿ.ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಗೆಲುವಿನ ದಡ ಸೇರಿದರೂ ತಾವು ಚುನಾವಣೆಯಲ್ಲಿ ಸೋತರು. ಇದಕ್ಕೆ ಸ್ವಪಕ್ಷೀಯರೇ ಕಾರಣ ಎಂಬುದು ಎಲ್ಲರಿಗೂ ಗೊತ್ತು. ಈ ಸಲವೂ ಅದು ಪುನರಾವರ್ತನೆಯಾದರೂ ಅಚ್ಚರಿ ಇಲ್ಲ.

ಕಾಂಗ್ರೆಸ್‌ನ ಹಿರಿಯ ನಾಯಕರಾಗಿರುವ ಪರಮೇಶ್ವರ್‌ ಸಿಎಂ ಹುದ್ದೆ ಆಕಾಂಕ್ಷಿ ಎಂದು ಹೇಳಿರುವುದು ತಪ್ಪೇನಲ್ಲ. ರಾಜಕೀಯದಲ್ಲಿ ಅಧಿಕಾರದ ಮಹತ್ವಾಕಾಂಕ್ಷೆ ತಪ್ಪಲ್ಲ.
-ರಣದೀಪ್‌ ಸಿಂಗ್‌ ಸುರ್ಜೆವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ

ಸಿದ್ದು ಸಿಎಂ: ಯಲಬುರ್ಗಾ ಕಾರ್ಯಕ್ರಮದಲ್ಲಿ ಗದ್ದಲ
ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿದ್ದಾರೆ ಎಂದು ಶಾಸಕರಾದ ಭೈರತಿ ಸುರೇಶ  ಹಾಗೂ ರಾಘ ವೇಂದ್ರ ಹಿಟ್ನಾಳ್‌ ಹಾಗೂ ಮಾಜಿ ಸಚಿವ ಬಸ ವ ರಾಜ ರಾಯ ರಡ್ಡಿ ಘೋಷಿಸಿದ್ದಾರೆ. ಅದಕ್ಕೆ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಭೈರತಿ ಸುರೇಶ, ಅಭಿವೃದ್ಧಿಯ ಹರಿಕಾರ, ಭಾಗ್ಯಗಳ ದಾತ ಸಿದ್ದರಾಮಯ್ಯ ಅವರು ಬಡವರ ಧ್ವನಿಯಾಗಿ ನಾಡಿನ ಜನನಾಯಕರಾಗಿದ್ದಾರೆ.

ಸರ್ವಜನಾಂಗದ ನಾಯಕರಾಗಿದ್ದಾರೆ. ಅವರೇ ಮುಂದಿನ ಮುಖ್ಯಮಂತ್ರಿ. ಯಲಬುರ್ಗಾದಲ್ಲಿ ಬಸವರಾಜ ರಾಯರಡ್ಡಿ ಅವರೇ ಶಾಸಕರಾಗಲಿದ್ದಾರೆ ಎಂದು ಹೇಳಿದರು.

ಆದರೆ, ಹಾಲು ಮತದ ಸಮಾರಂಭದಲ್ಲಿ ರಾಜ ಕೀಯ ಮಾಡಬೇಡಿ ಎಂದು ಬಿಜೆಪಿಯ ಕಳ ಕಪ್ಪ ಕಂಬಳಿತಗಾದೆ ಎತ್ತಿದರು. ಅಲ್ಲೇ ವಾದ-ವಿವಾದವೂ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next