Advertisement

ಲಾಕ್ ಡೌನ್ ವಿಸ್ತರಣೆ ಕುರಿತು ಸಚಿವರ ಸಭೆಯಲ್ಲಿ ಸಿಎಂ ಬಿಎಸ್ ವೈ ನಿರ್ಧಾರ: ಬೊಮ್ಮಾಯಿ

01:22 PM May 29, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂತ್ರಿಮಂಡಲದ ಸದಸ್ಯರೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

Advertisement

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಇಲಾಖೆಯ ಹೊಸ ಸೂಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಚಿವರ ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದರು.

ಸದ್ಯಕ್ಕೆ ಜೂನ್ 7ರವರೆಗೆ ರಾಜ್ಯದಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಯಲ್ಲಿ ಇರಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಜೂನ್ 30ರವರೆಗೆ ಬಿಗಿ ಕ್ರಮಗಳು ಇರಬೇಕು ಅಂತ ಹೇಳಿದೆ. ಇದನ್ನು ಯಾವ ರೀತಿ ಜಾರಿ ಮಾಡಬೇಕು ಎಂಬುದರ ಕುರಿತು ಮುಖ್ಯಮಂತ್ರಿಗಳು ಸಚಿವರ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬೊಮ್ಮಾಯಿ ವಿವರಿಸಿದರು.

ಇದನ್ನೂ ಓದಿ:ಪುಣೆ: ಲಾಕ್‌ಡೌನ್‌ ಸಂದರ್ಭ ಗ್ರಂಥಾಲಯ ತೆರೆಯಲು ಅನುಮತಿಗೆ ಆಗ್ರಹ

ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ. ಅದು ಶೇಕಡ 10 ಕ್ಕಿಂತ ಕಡಿಮೆ ಆಗಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಕೋವಿಡ್ ಪ್ರಮಾಣ ಮತ್ತು ಸಾವುಗಳ ಸಂಖ್ಯೆ ನಿಯಂತ್ರಣಕ್ಕೆ ಬರಬೇಕು. ಆಗ ಮಾತ್ರ ಕೋವಿಡ್ ಹತೋಟಿಗೆ ಬರಲು ಸಾಧ್ಯ. ಆಗ ನಮ್ಮ ರಾಜ್ಯದಲ್ಲಿರುವ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

Advertisement

ಲಾಕ್ ಡೌನ್ ನಷ್ಟಕ್ಕೆ ಪರಿಹಾರ ನೀಡಿ: ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿರುವ 11 ಸಾವಿರ ಕೋಟಿ ಜಿಎಸ್ ಟಿ ಪರಿಹಾರವನ್ನು ನೀಡುವಂತೆ ಕೇಂದ್ರಕ್ಕೆ ಒತ್ತಾಯ ಮಾಡಲಾಗಿದೆ. ಈ ವರ್ಷ ಮತ್ತೆ ಕೋವಿಡ್ ಬಂದಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ರಾಜ್ಯದ ಆರ್ಥಿಕತೆ ಚೇತರಿಸಿಕೊಂಡಿತ್ತು. ಆದರೆ ಈಗ ಮತ್ತೆ ಲಾಕ್ ಡೌನ್ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ 2 – 3 ತಿಂಗಳು ಜಿಎಸ್ ಟಿ ಸಂಗ್ರಹ ಕಡಿಮೆಯಾಗುತ್ತದೆ. ಹೀಗೆ ಲಾಕ್ ಡೌನ್ ನಲ್ಲಿ ಕಡಿಮೆಯಾಗುವ ಜಿಎಸ್ಟಿ ಪರಿಹಾರವನ್ನು ತುಂಬಿಕೊಡುವಂತೆ ಎಲ್ಲ ರಾಜ್ಯಗಳು ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಒತ್ತಾಯ ಮಾಡಿದವು‌. ಕರ್ನಾಟಕದಿಂದ ನಾನು ಕೂಡ ಇದೇ ಒತ್ತಾಯ ಮಾಡಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಜಿಎಸ್ ಟಿ ಇಂದ ಎಷ್ಟು ಪರಿಹಾರ ಕೊಡಬೇಕು? ಸಾಲ ಪಡೆಯಲು ಅನುಮತಿ ನೀಡಬೇಕಾ? ಇದನ್ನು ಹೊರತುಪಡಿಸಿ ಉಳಿದ ಪರಿಹಾರ ಹಣವನ್ನು ಯಾವ ರೂಪದಲ್ಲಿ ನೀಡಲು ಸಾಧ್ಯ ಎಂಬುದರ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next