ಪಾಟ್ನಾ: ಈ ಬಾರಿ ಬಿಹಾರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಲೋಕ ಜನಶಕ್ತಿ ಪಕ್ಷದ ಮುಖಂಡ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಬಿಹಾರದ ಬಕ್ಸರ್ ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಚಿರಾಗ್ ಪಾಸ್ವಾನ್ ಪ್ರಸಕ್ತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಹಾರದಲ್ಲಿ ಮದ್ಯನಿಷೇಧ ವಿಫಲವಾಗಿದೆ. ಅಕ್ರಮ ಮದ್ಯವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ನಿತೀಶ್ ಕುಮಾರ್ ಕಿಕ್‌ಬ್ಯಾಕ್ ಪಡೆಯುತ್ತಿದ್ದಾರೆ” ಎಂದು ದಿ. ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಆರೋಪಿಸಿದ್ದಾರೆ.
ಎನ್‌ಡಿಎಯ ಮಾಜಿ ಮಿತ್ರ ಎಲ್‌ಜೆಪಿಯ ಮುಖ್ಯಸ್ಥ ಪಾಸ್ವಾನ್ ಅವರು ಎನ್‌ಡಿಎಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ನಿತೀಶ್ ಕುಮಾರ್ ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಆದಾಗ್ಯೂ ಪ್ರಧಾನಿ ನರೇಂದ್ರ ಮೋದಿಯವರನ್ನು “ಹನುಮಾನ್” ಎಂದು ಕರೆದಿರುವ ಚಿರಾಗ್ ಈ ಮೂಲಕ ಬಿಜೆಪಿಗೆ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ:ದೇಶದ ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ : ಕೇಂದ್ರ ಸಚಿವ ಪ್ರತಾಪ್ ಸಾರಂಗಿ
ಬಿಹಾರದಲ್ಲಿ ಅ.28ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಒಟ್ಟು ಮೂರು ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 10ರಂದು ಮತಎಣಿಕೆ ನಡೆಯಲಿದೆ.