Advertisement

ಕೊಚ್ಚಿ ಹೋದವರ ಕುಟುಂಬಕ್ಕೆ ಸಿಎಂ ಸಾಂತ್ವಾನ;ಜನರ ಆಕ್ರೋಶ 

02:20 PM Oct 14, 2017 | Team Udayavani |

ಬೆಂಗಳೂರು: ಭಾರಿ ಮಳೆಗೆ ನಗರದ ಕುರುಬರಹಳ್ಳಿಯಲ್ಲಿ ಶುಕ್ರವಾರ ಸಂಜೆ ರಾಜ ಕಾಲುವೆಯಲ್ಲಿ  ಕೊಚ್ಚಿ ಹೋದ ಅರ್ಚಕ ಮತ್ತು ತಾಯಿ, ಮಗಳ ಮನಗೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ  ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ್ದಾರೆ. 

Advertisement

ನಿನ್ನೆ ಸುರಿದ ಭಾರೀ ಮಳೆಗೆ ಕುರುಬರಹಳ್ಳಿಯ ವೆಂಕಟರಮಣ ಸ್ವಾಮಿ ದೇವಾಲಯದ ಗೋಡೆ ಕುಸಿದಿದ್ದುದನ್ನು  ನೋಡಲು ಹೋಗಿದ್ದ  ಅರ್ಚಕ ವಾಸುದೇವ ನೀರು ಪಾಲಾಗಿದ್ದರು. ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್), ಅಗ್ನಿ ಶಾಮಕ ಸಿಬ್ಬಂದಿ,ಬಿಬಿಎಂಪಿ ಸಿಬ್ಬಂದಿ  ಇಂದು ಬೆಳಗ್ಗೆ 10 ಗಂಟೆಯ ವರಗೆ  ಶೋಧ ಕಾರ್ಯ ನಡೆಸಿ ಶವವನ್ನು ಸುಮನಹಳ್ಳಿ ಸೇತುವೆ ಬಳಿ ಪತ್ತೆ ಹಚ್ಚಿದ್ದಾರೆ. 

ಕುರುಬರಹಳ್ಳಿಯ ಜೆ.ಸಿ. ನಗರದಲ್ಲಿ ತಾಯಿ ನಿಂಗಮ್ಮ (57) ಮತ್ತು ಅವರ ಮಗಳು
ಪುಷ್ಪಾ (22) ರಾಜ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರು. ಶವಗಳಿಗಿಗಾಗಿ ಸತತ 17 ಗಂಟೆಗಳಿಂದ ಶೋಧ ಕಾರ್ಯ ಮುಂದುವರಿದಿದೆ. 

ಸಾಂತ್ವಾನ ಹೇಳಲು ಬಂದ ಸಿದ್ದರಾಮಯ್ಯ ಬಳಿ ಸಂಬಂಧಿಕರು ಸ್ಥಳದಲ್ಲೇ ಪರಿಹಾರ ನೀಡಬೇಕು, ಬಂದು ಹೋದರೆ ಸಾಲದು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಇನ್ನೂ 4 ದಿನ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿರುವ ಕಾರಣ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳು ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. 

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಆರ್‌.ಅಶೋಕ್‌ ಮತ್ತಿತರ ನಾಯಕರು ಮೃತರ ನಿವಾಸಗಳಿಗೆ ಭೇಟಿ ನೀಡಿ ಸ್ಥಳದಲ್ಲೇ 1 ಲಕ್ಷ ರೂಪಾಯಿ ಪರಿಹಾರ ಧನವನ್ನು ಪಕ್ಷದ ವತಿಯಿಂದ ನೀಡಿದರು. 

 ಜೆಡಿಎಸ್‌ ವರಿಷ್ಠ,ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸೇರಿದಂತೆ ಹಲವು ಮುಖಂಡರುಗಳು  ಮೃತರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಎಚ್‌ಡಿಡಿ ಬಿಜೆಪಿ ವಿರುದ್ಧ ಕಿಡಿ ಕಾರಿದರು.’ಇದು ಕಳಪೆ ಕಾಮಗಾರಿ ಅಲ್ಲ, ದೇವರ ಆಟ’ ಎಂದರು. ನಿನ್ನೆ ಭಾರಿ ಮಳೆ ಸುರಿದ್ದಿದ್ದು, ಸಾವು ನೋವು ಸಂಭವಿಸಿದೆ. ಸಾವಿನಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ’ ಎಂದರು. 

ಮುಂದುವರಿದ ಮಳೆ, ಜನತೆಯಲ್ಲಿ ಆತಂಕ
ಬೆಂಗಳೂರು ಉತ್ತರ ಭಾಗದಲ್ಲಿ ಮಳೆ ಮುಂದುವರಿದಿದ್ದು, ಶನಿವಾರ ಮಧ್ಯಾಹ್ನದ ವೇಳೆ ವಿಮಾನ ನಿಲ್ದಾಣ ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದೆ. ಯಲಹಂಕ ಸುತ್ತಮುತ್ತ ಭಾರಿ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು ಜನರು ಪರದಾಡುತ್ತಿದ್ದಾರೆ. ರಸ್ತೆಯೇ ಕಾಣದಷ್ಟು ಮಳೆ ಬರುತ್ತಿದೆ. ದಟ್ಟ ಮೋಡದ ಕತ್ತಲು ಆವರಿಸಿದ್ದು, ಭಾರಿ ಮಳೆ ಸುರಿಯುವ ಸಾಧ್ಯತೆಗಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next