ಭಟ್ಕಳ: ಮುಖ್ಯ ಮಂತ್ರಿಗಳ ಆಗಮನಕ್ಕಾಗಿ ಕಾಯುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಸ್ಯೆಗಳದ್ದೇ ಆಗರ, ಇನ್ನಾದರೂ ಪರಿಹಾರವಾಗುವ ಕುರಿತು ಜನ ಸಾಮಾನ್ಯರು ಯೋಚಿಸಿದರೆ, ರಾಜಕಾರಣಿಗಳಲ್ಲಿ ಮುಖ್ಯ ಮಂತ್ರಿಗಳನ್ನು ಮೆಚ್ಚಿಸಿ ಉನ್ನತ ಹುದ್ದೆ ಗಳಿಸುವ ಹುಮ್ಮಸ್ಸು, ಅಧಿಕಾರಿಗಳಿಗೆ ಮುಖ್ಯ ಮಂತ್ರಿಗಳ ಕಾರ್ಯಕ್ರಮ ಯಶಸ್ವೀಯಾದರೆ ಸಾಕು ಎನ್ನುವ ಮನೋಭಾವ ಹೀಗೆ ಜಿಲ್ಲೆಯಲ್ಲಿ ನಾನಾ ರೀತಿಯಲ್ಲಿ ಮುಖ್ಯ ಮಂತ್ರಿಗಳ ಭೇಟಿಗೆ ಮಹತ್ವವಿದೆ.
ಉತ್ತರ ಕನ್ನಡ ಜಿಲ್ಲೆಯ ಮಳೆಯಿಂದ ಆಗಿರುವ ಹಾನಿಯ ಸಮೀಕ್ಷೆಗೆ ಬರುತ್ತಿರುವ ಮುಖ್ಯ ಮಂತ್ರಿಗಳ ಬಳಿಯಲ್ಲಿ ಜಿಲ್ಲೆಯ ಜನರು ಬಹು ರೀತಿಯ ನೀರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಸ್ವಾಂತತ್ರ್ಯಾ ನಂತರದಲ್ಲಿ 3 ಲಕ್ಷ ಇದ್ದ ಜನ ಇಂದು 16 ಲಕ್ಷ ದಾಟಿದೆ. ಮಾಲ್ಕಿ ಜಮೀನು ಇಲ್ಲದೇ ಅರಣ್ಯ ಭೂಮಿ ಅತಿಕ್ರಮಣ ಮಾಡಿದವರು ಇಂದು ಬೀದಿಗೆ ಬರುವಂತಾಗಿದೆ. ಮುಖ್ಯ ಮಂತ್ರಿಗಳು ಅತಿಕ್ರಮಣದಾರರಿಗೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ದೌರ್ಜನ್ಯವನ್ನು ತಪ್ಪಿಸುವುದರ ಜೊತೆಗೆ, ವಕ್ಕಲೆಬ್ಬಿಸುವುದಿಲ್ಲ ಎನ್ನುವ ಭರವಸೆ ನೀಡಬೇಕಾಗಿದೆ.
ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲ ಅಪಘಾತಗಳು, ಮಾರಣಾಂತಿಕ ಕಾಯಿಲೆಗಳು ಬಂದಾಗ ಬೇರೆ ಜಿಲ್ಲೆಯನ್ನು ಆಶ್ರಯಿಸಿದ್ದೆವು. ಆದರೆ ಕರೋನಾ ಬಂದಾಗ ನಮ್ಮ ಸಂಕಷ್ಟ ಕೇಳುವವರೇ ಇಲ್ಲವಾಗಿತ್ತು. ಜಿಲ್ಲೆಯಲ್ಲೊಂದು ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಕೂಗು ಎದ್ದಿದೆ. ಜಿಲ್ಲೆಯು ಪ್ರವಾಸೋಧ್ಯಮಕ್ಕೆ ಉತ್ತೇಜನ ನೀಡಿದರೆ ಜಿಲ್ಲೆಯಲ್ಲಿ ಸಾವಿರಾರು ಯುವಕರಿಗೆ ಉದ್ಯೋಗಾವಕಾಶವಾದರೆ, ಇನ್ನೂ ಹಲವರಿಗೆ ವ್ಯಾಪಾರಕ್ಕೆ ಅನುಕೂಲವಾಗಲಿದೆ.
ಇದನ್ನೂ ಓದಿ : ಪ್ರಕೃತಿ ವಿಕೋಪ: ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸಚಿವ ಬೈರತಿ ಬಸವರಾಜ
ಮುರ್ಡೇಶ್ವರದಲ್ಲಿ ಡಾ. ಆರ್.ಎನ್.ಶೆಟ್ಟಿಯವರು ತಮ್ಮ ಸ್ವಂತ ಪರಿಶ್ರಮದಿಂದ ಅಭಿವೃದ್ಧಿ ಮಾಡಿದ್ದಾರೆ. ಪ್ರತಿ ವರ್ಷ ನಾಲ್ಕಾರು ಜೀವ ಬಲಿಯಾಗುತ್ತಿದೆ. ಜನರಿಗೆ ಜಾಕೆಟ್ ವ್ಯವಸ್ಥೆ ಮಾಡಿ ಕಠಿಣ ಕ್ರಮಕ್ಕೆ ಮುಂದಾಗಬೇಕಾಗಿದೆ. ಇನ್ನಾದರೂ ಸರಕಾರ ಪ್ರವಾಸಿಗರ ಹಿತ ಕಾಪಾಡುವಲ್ಲಿ ಮುಂದಾಗಬೇಕಾಗಿದೆ.
ಜಿಲ್ಲೆ ಬುದ್ದಿವಂತರ ಜಿಲ್ಲೆ, ಇಲ್ಲಿ ಪ್ರತಿಭಾ ಪಲಾಯನವಾಗುತ್ತಿದೆ. ಅದನ್ನು ತಡೆಯಲು ಐ.ಟಿ. ಬಿ.ಟಿ. ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವುದನ್ನು ಉತ್ತರ ಕನ್ನಡ ಜಿಲ್ಲೆಗೆ ಅಗತ್ಯ ಮೂಲ ಸೌಕರ್ಯದೊಂದಿಗೆ ವರ್ಗಾಯಿಸಲು ಅವಕಾಶವಿದೆ. ಪರಿಸರ ಪೂರಕ ಉಧ್ಯಮಗಳನ್ನು ಸ್ಥಾಪಿಸಲು ಉಧ್ಯಮಪತಿಗಳನ್ನು ಆಹ್ವಾನಿಸಲೂ ಕೂಡಾ ಅವಕಾಶವಿದೆ. ಕೈಗಾರಿಕಾ ವಸಾಹತು ಸ್ಥಾಪಿಸುವ ಮೂಲಕ ಬೃಹತ್ ಉಧ್ಯಮಿಗಳನ್ನು ಜಿಲ್ಲೆಗೆ ಆಹ್ವಾನಿಸಬೇಕಾಗಿದೆ.
ಮುಖ್ಯಮಂತ್ರಿಗೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ಕುರಿತು ಅವೈಜ್ಞಾನಿಕ ಕಾಮಗಾರಿಯ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಭಟ್ಕಳದಲ್ಲಿ ಪಿಲ್ಲಾರ್ ಹಾಕಿಯೇ ಫ್ಲೈ ಓವರ್ ಮಾಡಬೇಕು ಇಲ್ಲವಾದಲ್ಲಿ ಈಗಿರುವಂತೆಯೇ ವಿಸ್ತರಿಸಬೇಕು ಎನ್ನುವ ಬೇಡಿಕೆಯಿದೆ. ಅನೇಕ ಕಡೆಗಳಲ್ಲಿ ಅವೈಜ್ಞಾನಿಕ ತಿರುವುಗಳಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು ಅವುಗಳ ಕುರಿತೂ ಸೂಕ್ತ ನಿರ್ದೇಶನ ನೀಡಬೇಕಾಗಿದೆ.
ಜಿಲ್ಲೆಯಲ್ಲಿ ಬಹುತೇಕ ಜನರು ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಭಟ್ಕಳದ ಮಾವಿನಕುರ್ವೆ ಬಂದರ ಹೂಳೆತ್ತುವ ಕಾರ್ಯ ಆಗಲೇ ಇಲ್ಲ, ತೆಂಗಿನಗುಂಡಿಯಲ್ಲಿ ನಡೆಸಲಾದ ಕೋಟ್ಯಂತರ ರೂಪಾಯಿ ಕಾಮಗಾರಿ ಆರಂಭದಲ್ಲಿಯೇ ಎಡವಿದೆ. ಕಳೆದ ಮೂರುವರೆ ತಿಂಗಳಿನಿಂದ ಮೋಗೇರ ಜಾತಿಯವರು ತಮ್ಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಧರಣಿ ಸತ್ಯಾಗ್ರಹದಲ್ಲಿ ತೊಡಗಿದ್ದರೂ ಸರಕಾರ ನಿರ್ಲಕ್ಷ ಮಾಡಿದೆ. ಜಿಲ್ಲೆಗೆ ಬಂದ ಮುಖ್ಯ ಮಂತ್ರಿಗಳಿಂದಲಾದರೂ ತಮ್ಮ ಸಮಸ್ಯೆಗೆ ಪರಿಹಾರ ದೊರೆಯಬಹುದು ಎನ್ನುವ ಭರವಸೆಯಲ್ಲಿ ಜಿಲ್ಲೆಯ 15 ರಿಂದ 20 ಸಾವಿರ ಮೀನುಗಾರು ಹೊಂದಿದ್ದಾರೆ.
ಭಟ್ಕಳ ಬಸ್ ನಿಲ್ದಾಣದ ಎದುರು ಕಾಂಕ್ರೀಟೀಕರಣ, ತಾಲೂಕಾ ಆಡಳಿತ ಸೌಧ ಉದ್ಘಾಟನೆಯಾಗಿ ವರ್ಷವೇ ಕಳೆದರೂ ಕೂಡಾ ವಿವಿಧ ಕಚೇರಿಗಳಿಗೆ ಬರಬೇಕಾಗಿದ್ದ 3.5 ಕೋಟಿ ರೂಪಾಯಿ ಪೀಠೋಪಕರಣ, ಮಂಜೂರಿಯಾಗಿದ್ದ 110 ಕೆ.ವಿ. ವಿದ್ಯುತ್ ಸ್ಟೇಶನ್ ಕಾಮಗಾರಿಗೆ ಚುರುಕು, ಬೈಂದೂರು ತಾಲೂಕಿನ ನಾವುಂದದಿಂದ 110 ಕೆ.ವಿ. ಲೈನ್ ಸಂಪರ್ಕಕ್ಕೆ ವೇಗ ದೊರೆಯಬೇಕಾಗಿದೆ. ಅಗ್ನಿಶಾಮಕ ಠಾಣೆ ಕಟ್ಟಡವೇನೂ ಕಟ್ಟಲಾಗಿದೆಯಾದರೂ ಅವರಿಗೆ ಅರಣ್ಯ ಇಲಾಖೆಯ ಜಾಗಾ ಹಸ್ತಾಂತರದ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ವಸತಿ ಸಂಕೀರ್ಣ ಕಟ್ಟಲು ಹಣವಿದೆಯಾದರೂ ತಾಂತ್ರಿಕ ತೊಂದರೆಗೆ ಪರಿಹಾರ ದೊರೆಯಬೇಕಾಗಿದೆ. ಭಟ್ಕಳ ತಾಲೂಕಾ ಆಸ್ಪತ್ರೆ ಜಿಲ್ಲೆಯಲ್ಲಿಯೇ ಮಾದರಿ ಆಸ್ಪತ್ರೆಯಾಗಿದೆ. ಇಲ್ಲಿನ ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ. ಗುತ್ತಿಗೆ ಆಧಾರದ ಮೇಲೆ ಕೇವಲ 14-15 ಸಾವಿರ ಸಂಬಳಕ್ಕೆ ಕೆಲಸ ಮಾಡುವ ಸಿಬ್ಬಂದಿಗಳಿಗೆ ವಸತಿ ಸಂಕೀರ್ಣ ನಿರ್ಮಿಸಬೇಕಾಗಿದ್ದರೂ ಅಂದಾಜು ಪತ್ರ ಇನ್ನೂ ಧೂಳು ತಿನ್ನುತ್ತಿದೆ. ಒಟ್ಟಾರೆ ಗಂಟೆಯ ಲೆಕ್ಕದಲ್ಲಿ ಜಿಲ್ಲೆಯಲ್ಲಿರುವ ಮುಖ್ಯ ಮಂತ್ರಿಗಳು ಯಾವೆಲ್ಲ ಸಮಸ್ಯೆಗಳ ಕುರಿತು ಗಮನ ಹರಿಸುತ್ತಾರೆನ್ನುವುದನ್ನು ಕಾದು ನೋಡಬೇಕಾಗಿದೆ. ಜನ ಪ್ರತಿನಿಧಿಗಳು ಮುಖ್ಯ ಮಂತ್ರಿಗಳ ಗಮನ ಸೆಳೆಯಲು ಎಷ್ಟು ಯಶಸ್ವೀಯಾಗುತ್ತಾರೆನ್ನುವುದರ ಮೇಲೆ ಜಿಲ್ಲೆಯ ಜನತೆಗೆ ಸಹಕಾರಿಯಾಗಲಿದೆ.