ಬೆಂಗಳೂರು: ಅನರ್ಹಗೊಂಡಿರುವ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಕಾರ್ಯ ನಿರಂತರವಾಗಿದ್ದು, ಭಾನುವಾರ ಎಚ್.ವಿಶ್ವನಾಥ್ ಹಾಗೂ ಪ್ರತಾಪ್‌ಗೌಡ ಪಾಟೀಲ್ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು.
ಇದಾದ ನಂತರ ಅನರ್ಹಗೊಂಡಿರುವ ಶಾಸಕರಲ್ಲಿ ಇಬ್ಬರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ತಮ್ಮ ರಾಜಕೀಯ ಭವಿಷ್ಯ ಸೇರಿ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ, ಸಚಿವ ಸಂಪುಟ ರಚನೆ ಸಹಿತವಾಗಿ ಹಲವು ವಿಷಯಗಳ ಬಗ್ಗೆ ಎಚ್.ವಿಶ್ವನಾಥ್ ಹಾಗೂ ಪ್ರತಾಪ್‌ಗೌಡ ಪಾಟೀಲ್ ಅವರು ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದಾರೆಂದು ತಿಳಿದು ಬಂದಿದೆ.
ಈ ಹಿಂದೆ ರೋಷನ್ ಬೇಗ್, ಡಾ.ಸುಧಾಕರ್, ಬಿ.ಸಿ.ಪಾಟೀಲ್, ಎಂ.ಟಿ.ಬಿ.ನಾಗರಾಜ್ ಸಹಿತವಾಗಿ ಅನರ್ಹಗೊಂಡಿರುವ ಹಲವು ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್, ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸ್ವಾಗತಾರ್ಹ.
ಕೇಂದ್ರದಲ್ಲಿ ಯಾವ ಸರ್ಕಾರ ಇದೆ ಎಂಬುದು ಮುಖ್ಯವಲ್ಲ. ತನಿಖೆಯಿಂದ ಸತ್ಯಾಂಶ ಹೊರ ಬರಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಾಗಲೇಬೇಕು. ಮಾಜಿ ಸಿಎಂ ಕುಮಾರಸ್ವಾಮಿಯವರು ಟೆಲಿಫೋನ್ ಕದ್ದಾಲಿಕೆಯಂತಹ ಕೆಲಸ ಮಾಡಿದ್ದಾರೆ. ಫೋನ್ ಟ್ಯಾಪಿಂಗ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದರು. ಭಯೋತ್ಪಾದಕರಿಗೂ ಇಂತಹವರಿಗೂ ಏನು ವ್ಯತ್ಯಾಸವಿದೆ ಎಂದು ಪ್ರಶ್ನಿಸಿದರು.
ನಮ್ಮ ಫೋನ್‌ಗಳೂ ಸಹ ಟ್ಯಾಪಿಂಗ್ ಆಗಿರಬಹುದು. ತುಂಬಾ ಜನರ ಫೋನ್‌ಗಳೂ ಕದ್ದಾಲಿಕೆ ಆಗಿದೆ. ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸ್ವಾಗತಾರ್ಹ. ತನಿಖೆ ನಂತರ ತಪ್ಪಿಸ್ಥರ ವಿರುದ್ಧ ಕ್ರಮ ಆಗಲಿದೆ.
-ಪ್ರತಾಪ್‌ಗೌಡ ಪಾಟೀಲ್,ಅನರ್ಹ ಶಾಸಕ