Advertisement
2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಗ್ರಾಮ ವಾಸ್ತವ್ಯ ಮಾಡುವ ಮೂಲಕ ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಿದ್ದರು. ಆ ಸಂದರ್ಭದಲ್ಲಿ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಅನೇಕ ಭರವಸೆ ನೀಡಿದ್ದರು. ಆದರೆ ಸಿಎಂ ವಾಸ್ತವ್ಯದ ಬಳಿಕ ಮಣ್ಣೂರ ಗ್ರಾಮದಲ್ಲಿ ಹೇಳಿಕೊಳ್ಳುವ ಬದಲಾವಣೆಗಳೇನು ಆಗಿಲ್ಲ.
Related Articles
Advertisement
•13 ವರ್ಷಗಳ ಹಿಂದೆ ಮಣ್ಣೂರಿನಲ್ಲಿ ವಾಸ್ತವ್ಯ ಮಾಡಿದ್ದ ಸಿಎಂ
•ಕೊಟ್ಟ ಭರವಸೆಯಲ್ಲಿ ಒಂದನ್ನೂ ಈಡೇರಿಸಿಲ್ಲ
ಅಫಜಲಪುರ ತಾಲೂಕಿನಲ್ಲಿ ವಾಸ್ತವ್ಯ ನಡೆಸುವ ಬಗ್ಗೆ ಸಿಎಂ ಕುಮಾರಸ್ವಾಮಿ ಮಂಗಳವಾರ ಬೆಂಗಳೂರಿನಲ್ಲಿ ಅಫಜಲಪುರ ಶಾಸಕ ಎಂ.ವೈ. ಪಾಟೀಲ ಅವರೊಂದಿಗೆ ಚರ್ಚಿಸಿದ್ದರು. ಈ ಸಂದರ್ಭದಲ್ಲಿ ಸಿಎಂ ತಮ್ಮ ವಾಸ್ತವ್ಯಕ್ಕೆ ಸಮಸ್ಯಾತ್ಮಕ ಸರ್ಕಾರಿ ಶಾಲೆ ಆಯ್ಕೆ ಮಾಡುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಸಲಹೆಯಂತೆ ಬೆಂಗಳೂರಿನಿಂದ ಕ್ಷೇತ್ರಕ್ಕೆ ಆಗಮಿಸಿದ ಬಳಿಕ ವಾಸ್ತವ್ಯ ಹೂಡಬೇಕಾದ ಶಾಲೆಯನ್ನು ಪರಿಶೀಲಿಸಿ ಅಂತಿಮಗೊಳಿಸಲಾಗುವು ಎಂದು ಶಾಸಕ ಎಂ.ವೈ. ಪಾಟೀಲ ‘ಉದಯವಾಣಿ’ಗೆ ತಿಳಿಸಿದ್ದಾರೆ.
ನೀರಿನ ಸೌಲಭ್ಯ ಕಲ್ಪಿಸಿಲ್ಲ:
ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿಲ್ಲ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಮಣ್ಣೂರ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಸಲುವಾಗಿ ವಿಶೇಷ ಅನುದಾನ ಕಲ್ಪಿಸುವುದಾಗಿ ಸಿಎಂ ಹೇಳಿದ್ದರು. ಆದರೆ ಇಲ್ಲಿಯವರೆಗೂ ಗ್ರಾಮದಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆ ಸಾಧ್ಯವಾಗಿಲ್ಲ. ಮಣ್ಣೂರ ಗಡಿ ಗ್ರಾಮವಾಗಿದ್ದು, ಪಕ್ಕದಲ್ಲಿ ಮಹಾರಾಷ್ಟ್ರ ರಾಜ್ಯವಿದೆ. ತಾಲೂಕು ಕೇಂದ್ರದಿಂದ ದೂರವಿರುವ ಈ ಗ್ರಾಮದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಇವರಿಗೆಲ್ಲ ಮಣ್ಣೂರ ಗ್ರಾಮದಲ್ಲಿಯೇ ಸರ್ಕಾರಿ ಐಟಿಐ, ಪಾಲಿಟೆಕ್ನಿಕ್ ಕಾಲೇಜು ಬೇಕಾಗಿತ್ತು. ಸಿಎಂ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಭರವಸೆಗಳನ್ನು ನೀಡಿದ್ದರು. ಈಗ ಗ್ರಾಮವನ್ನೇ ಮರೆತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಗ್ರಾಮಸ್ಥರಿಗೆ ಅನೇಕ ಭರವಸೆಗಳನ್ನು ಕೊಟ್ಟಿದ್ದರು. ಆದರೆ ಅವರು ಕೊಟ್ಟ ಭರವಸೆಯ ಅರ್ಧದಷ್ಟು ಈಡೇರಿಲ್ಲ. ವಸತಿ ಯೋಜನೆಗಳಲ್ಲಿ ಮನೆಗಳನ್ನು ನೀಡುವ ಭರವಸೆ ಕೂಡ ನೀಡಿ ಈಗ ಮರೆತಿದ್ದಾರೆ. ಮುಖ್ಯಮಂತ್ರಿಗಳಾಗಿ ಕೊಟ್ಟ ಭರವಸೆಗಳನ್ನು ಮರೆತಿರುವ ಕುಮಾರಸ್ವಾಮಿ ಅವರು ಈಗ ಮತ್ತೂಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. 2006ರಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಅವರು ಈಗ ಮತ್ತೂಮ್ಮೆ ಗ್ರಾಮ ವಾಸ್ತವ್ಯದ ಹೆಸರಲ್ಲಿ ತಾಲೂಕಿಗೆ ಬರುತ್ತಿದ್ದಾರೆ. ಜತೆಗೆ ಮೊದಲು ಕೊಟ್ಟ ಭರವಸೆಗಳನ್ನು ಈಡೇರಿಸುವ ಕಡೆ ಗಮನ ಹರಿಸಬೇಕೆಂದು ಮಣ್ಣೂರ ಗ್ರಾಮದ ಮಾಜಿ ಗ್ರಾಪಂ ಅಧ್ಯಕ್ಷ ಸಿದ್ರಾಮಪ್ಪ ಹಿರೇಕೂರುಬರ್, ಮಾಜಿ ಸದಸ್ಯ ಶ್ರೀಕಾಂತ ನೀವರಗಿ, ಗ್ರಾಮಸ್ಥ ರಾಚಪ್ಪ ಕೊಪ್ಪ ಮತ್ತಿತರರು ಒತ್ತಾಯಿಸಿದ್ದಾರೆ.
•ಹಣಮಂತ ಬೈರಾಮಡಗಿ