Advertisement
ಈ ಬಗ್ಗೆ ಟ್ವಿಟರ್‌ನಲ್ಲಿ ಭಾನುವಾರ ಅಭಿಪ್ರಾಯ ಹಂಚಿಕೊಂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ಜನರೊಂದಿಗೆ ಬೆರೆಯಲು, ಅವರ ಸಮಸ್ಯೆಗಳನ್ನು ಅರಿಯಲು, ಸರ್ಕಾರದ ಕಾರ್ಯವೈಖರಿ ತಿಳಿಸಲು ನೆರವಾಗುವುದು ಗ್ರಾಮ ವಾಸ್ತವ್ಯ. ಶೀಘ್ರವೇ ನನ್ನ ಗ್ರಾಮ ವಾಸ್ತವ್ಯ ಪ್ರಾರಂಭವಾಗಲಿದೆ. ಸರ್ಕಾರಿ ಶಾಲೆಗಳಲ್ಲಿ,’ ಎಂದು ಹೇಳಿಕೊಂಡಿದ್ದಾರೆ.
Related Articles
Advertisement
ಮೆಚ್ಚುಗೆ: ಈ ಹಿಂದೆ ವಿಜಯಪುರದ ಎಚ್ಐವಿ ಸೋಂಕುಪೀಡಿತರೊಬ್ಬರ ಮನೆಯನ್ನು ಆಯ್ಕೆ ಮಾಡಿಕೊಂಡು ಎಚ್ಐವಿ ಪೀಡಿತರ ಬಗ್ಗೆ ಸಮಾಜದಲ್ಲಿನ ತಪ್ಪು ನಂಬಿಕೆಯನ್ನು ದೂರ ಮಾಡುವ ಪ್ರಯತ್ನ ಮಾಡಿದ್ದರು. ಈ ವಿಷಯ ತಿಳಿದ ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗ್ರಾಮ ವಾಸ್ತವ್ಯದಿಂದಾಗಿ ಸುಮಾರು ಸಾವಿರ ಪ್ರೌಢಶಾಲೆಗಳು, ಸುಮಾರು 500 ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಸ್ಥಾಪನೆಗೆ ಅನುಕೂಲವಾಯಿತು. ಹಾಗೆಯೇ ಸಾಲ ಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ ಜತೆಗೆ ವಿಕಲಚೇತನರಿಗೆ ಮಾಸಾಶನ ನೀಡುವ ಸೌಲಭ್ಯ ಕಲ್ಪಿಸಿದ್ದು ಸಹ ಗ್ರಾಮ ವಾಸ್ತವ್ಯದ ಕೊಡುಗೆ ಎಂಬುದು ಮುಖ್ಯಮಂತ್ರಿಗಳ ನಂಬಿಕೆ ಎಂದು ಕಚೇರಿ ಅಧಿಕಾರಿಗಳು ಹೇಳಿದ್ದಾರೆ.
ಮೊದಲು ಜಾರಿಯಾದದ್ದು
– 2006-2007ರಲ್ಲಿ ಬಿಜೆಪಿ ಜತೆಗಿನ ಮೈತ್ರಿ ಅವಧಿಯಲ್ಲಿ ಜಾರಿಯಾಗಿದ್ದ ಪರಿಕಲ್ಪನೆ
– ಮೊದಲ ವಾಸ್ತವ್ಯ: ಅಥಣಿ ತಾಲೂಕಿನ ಪಿ.ಕೆ.ನಾಗನೂರ ಗ್ರಾಮದಲ್ಲಿ
– 20 ತಿಂಗಳಲ್ಲಿ 47 ಗ್ರಾಮ ವಾಸ್ತವ್ಯ
– ಮೊದಲ ಅವಧಿಯ ಗ್ರಾಮ ವಾಸ್ತವ್ಯಕ್ಕೆ ರಾಜ್ಯದ ಹಲವು ಕಡೆಗಳಿಂದ ವ್ಯಕ್ತವಾಗಿತ್ತು ಭಾರಿ ಶ್ಲಾಘನೆ.
ಅಧಿಕಾರಿಗಳ ಪರಿಶೀಲನೆ
ಮುಖ್ಯಮಂತ್ರಿಗಳು ಒಂದು ಗ್ರಾಮ ಇಲ್ಲವೇ ಸರ್ಕಾರಿ ಶಾಲೆಗೆ ಭೇಟಿ ನೀಡಿ ವಾಸ್ತವ್ಯ ಹೂಡುತ್ತಾರೆಂದರೆ ಹಿರಿಯ ಅಧಿಕಾರಿಗಳ ತಂಡ ಪೂರ್ವಭಾವಿಯಾಗಿ ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಆ ಗ್ರಾಮ, ಶಾಲೆ ಹಾಗೂ ಸುತ್ತಮುತ್ತಲ ಪ್ರದೇಶದ ಜನರ ಸಮಸ್ಯೆಗಳು, ನಿರೀಕ್ಷೆಗಳು, ಅವುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪೂರಕವಾದ ಸಮಗ್ರ ವರದಿಯನ್ನು ಸಿದ್ಧಪಡಿಸಲಿದ್ದಾರೆ. ವಾಸ್ತವ್ಯ ಸಂದರ್ಭದಲ್ಲಿ ಬಹಳಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇರುತ್ತದೆ. ತಾವು ವಾಸ್ತವ್ಯ ಹೂಡುವ ಗ್ರಾಮ, ಜಿಲ್ಲೆಗೆ ಅಗತ್ಯವಿರುವ ಸೌಲಭ್ಯಗಳು, ಯಾವೆಲ್ಲಾ ಇಲಾಖೆ ಕಾರ್ಯಗಳು ಬಾಕಿ ಉಳಿದಿವೆ ಎಂಬುದನ್ನು ಮನಗಂಡು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳ ಆಶಯ.
ಏನೇನು ಅನುಕೂಲವಾಗಿತ್ತು?
– ಸಾವಿರ ಪ್ರೌಢಶಾಲೆಗಳ ನಿರ್ಮಾಣ
– 500 ಪ.ಪೂ, ಪದವಿ ಕಾಲೇಜು ನಿರ್ಮಾಣ
– ಸಾರಾಯಿ, ಲಾಟರಿ ನಿಷೇಧ
– ವಿಕಲ ಚೇತನರಿಗೆ ಮಾಸಾಶನ
ರೈತರೇ ಆದ್ಯತಾ ವಲಯ
ಹಿಂದಿನ ಗ್ರಾಮ ವಾಸ್ತವ್ಯದಂತೆ ಈ ಬಾರಿಯೂ ರೈತರೇ ಆದ್ಯತಾ ವಲಯದಲ್ಲಿರುತ್ತಾರೆ. ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಈವರೆಗಿನ ರೈತಪರ ಕಾರ್ಯಕ್ರಮಗಳಿಂದ ಕಂಡುಕೊಂಡ ಅಂಶಗಳನ್ನು ರೈತರೊಂದಿಗೂ ಹಂಚಿಕೊಳ್ಳಲು ಮುಖ್ಯಮಂತ್ರಿಗಳು ಚಿಂತಿಸಿದ್ದಾರೆ. ಜತೆಗೆ ಆಧುನಿಕ ಕೃಷಿ ಪದ್ಧತಿಗೆ ಪೂರಕ ಸ್ಪಂದನೆ, ಯಾಂತ್ರೀಕೃತ ಕೃಷಿಗೆ ನೆರವು ಹಾಗೂ ರೈತರಿಗೆ ಮಾಹಿತಿ ನೀಡುವುದು ಈ ಬಾರಿಯ ಗ್ರಾಮ ವಾಸ್ತವ್ಯದ ಪ್ರಮುಖ ಆದ್ಯತೆಗಳಾಗಿರಲಿವೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.