ಪುಣೆ, ಜು. 31: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಗುರುವಾರ ಪುಣೆ ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಿದರು. ಪುಣೆ ಜಿಲ್ಲೆಯಲ್ಲಿ ಈವರೆಗೆ 78 ಸಾವಿರಕ್ಕೂ ಅಧಿಕ ಪ್ರಕರಣಗಳು ಕಂಡುಬಂದಿದ್ದು, ಈವರೆಗೆ ಸೋಂಕಿನಿಂದ 1,800ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಸಂಸದರು, ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ಕೋವಿಡ್ ಪರಿಸ್ಥಿತಿ ಮತ್ತು ಮಳೆಗಾಲದ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತದಿಂದ ಪ್ರತಿಕ್ರಿಯೆ ಸ್ವೀಕರಿಸಿದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್, ನಗರ ಆಸ್ಪತ್ರೆಗಳಲ್ಲಿ ಆಮ್ಲಜನಕ ಮತ್ತು ಐಸಿಯು ಹಾಸಿಗೆಗಳನ್ನು ಹೆಚ್ಚಿಸುವ ಅಗತ್ಯವನ್ನು ಚುನಾಯಿತ ಪ್ರತಿನಿಧಿಗಳು ಹೇಳಿದ್ದಾರೆ ಎಂದರು. ಸೋಂಕು ಚಿಕಿತ್ಸೆಗೆ ಪುಣೆಯಲ್ಲಿ 3 ಜಂಬೊ ಆಸ್ಪತ್ರೆಗಳನ್ನು ಸ್ಥಾಪಿಸಲು ಸ್ಥಳೀಯ ಆಡಳಿತ ಚಿಂತನೆ ನಡೆಸುತ್ತಿದೆ ಎಂದವರು ತಿಳಿಸಿದ್ದಾರೆ. ಈ ಸೌಲಭ್ಯಗಳ ಸ್ಥಾಪನೆಯು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. ಪ್ರತಿದಿನ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಅಸ್ತಿತ್ವದಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವ ಆವಶ್ಯಕತೆಯಿದೆ ಮತ್ತು ಈ ಬೇಡಿಕೆಯನ್ನು ಎಲ್ಲರೂ ಮುಖ್ಯಮಂತ್ರಿ ಮುಂದೆ ಮಂಡಿಸಿದರು ಎಂದು ಪಾಟೀಲ್ ಹೇಳಿದ್ದಾರೆ.
4 ತಿಂಗಳಲ್ಲಿ 300 ಕೋಟಿ ಖರ್ಚು : ಕಳೆದ ನಾಲ್ಕೂವರೆ ತಿಂಗಳಲ್ಲಿ ಪುಣೆ ಮಹಾನಗರ ಪಾಲಿಕೆ (ಪಿಎಎಂಸಿ) ನಗರದಲ್ಲಿ ಕೋವಿಡ್ ನಿರ್ವಹಣೆಗೆ ಸುಮಾರು 300 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಮತ್ತು ರಾಜ್ಯ ಸರಕಾರದಿಂದ ಹೆಚ್ಚುವರಿ ಆರ್ಥಿಕ ನೆರವು ಕೋರಿದೆ ಎಂದು ಮೇಯರ್ ಮೊಹೋಲ್ ತಿಳಿಸಿದ್ದಾರೆ. ನಗರದಲ್ಲಿ ಜಂಬೋ ಸೌಲಭ್ಯಗಳನ್ನು ಸ್ಥಾಪಿಸಲು ಪಿಎಂಸಿ ಕೊಡುಗೆ ನೀಡಲು ಸಿದ್ಧವಾಗಿದೆ ಎಂದು ನಾವು ಸಿಎಂ ಅವರಿಗೆ ತಿಳಿಸಿದ್ದೇವೆ, ಆದರೆ ಪಿಎಂಸಿಯ ಒಟ್ಟಾರೆ ಆರ್ಥಿಕ ಸಾಮರ್ಥ್ಯ ಮತ್ತು ಸ್ಥಿತಿಯನ್ನು ಪರಿಗಣಿಸಿ ರಾಜ್ಯ ಸರಕಾರ ನಾಗರಿಕ ಸಂಸ್ಥೆಗೆ ಆರ್ಥಿಕ ಸಹಾಯವನ್ನು ನೀಡಬೇಕು ಎಂದು ಮೊಹೋಲ್ ಹೇಳಿದ್ದಾರೆ.
ಸರಕಾರಿ ಸಸೂನ್ ಜನರಲ್ ಆಸ್ಪತ್ರೆಯಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಗಳಿವೆ, ಆದರೆ ರಾಜ್ಯ ಸರಕಾರವು ಈ ನಿಟ್ಟಿನಲ್ಲಿ ಯಾವುದೇ ದೃಢವಾದ ಕ್ರಮಗಳನ್ನು ಕೈಗೊಂಡಿಲ್ಲ ಎಂದವರು ತಿಳಿಸಿದ್ದಾರೆ.
ಸಭೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್, ಪರಿಸರ ಸಚಿವ ಆದಿತ್ಯ ಠಾಕ್ರೆ, ಸಚಿವರುಗಳಾದ ದಿಲೀಪ್ ವಾಲ್ಸೆ-ಪಾಟೀಲ್, ದತ್ತಾತ್ರೇಯ ಭರ್ಣೆ, ಪುಣೆ ಮೇಯರ್ ಮುರಳೀಧರ್ ಮೊಹೋಲ್, ಕೋಥ್ರೋಡ್ ಶಾಸಕ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹಾಗೂ ಪುಣೆ ಮತ್ತು ನೆರೆಯ ಪಿಂಪ್ರಿ-ಚಿಂಚಾÌಡ್ನ ಇತರ ಚುನಾಯಿತ ಸದಸ್ಯರು ಉಪಸ್ಥಿತರಿದ್ದರು.