ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜನರನ್ನು ಕೇಳಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಜನರ ಸಹಕಾರವಿಲ್ಲದೆ ಇದು ಯಶಸ್ವಿಯಾಗುವುದಿಲ್ಲ.
ಮಾಸ್ಕ್ ಹಾಕದೆ ಓಡಾಡುವುದು, ಪರಸ್ಪರ ಅಂತರ ಕಾಯ್ದುಕೊಳ್ಳದೇ ಇರುವುದು, ಸ್ವಚ್ಛತೆ ಕಾಯ್ದುಕೊಳ್ಳದೆ ಇರುವುದು ಒಳ್ಳೆಯ ಕ್ರಮ ಅಲ್ಲ. ಇವುಗಳನ್ನು ನಿಲ್ಲಿಸಿ ಕೊರೊನಾ ತಡೆಯುವತ್ತ ಸಾಗಬೇಕು ಎಂದಿದ್ದಾರೆ.
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು.
ಜೀವ-ಜೀವನೋಪಾಯಗಳ ಸಮತೋಲನವನ್ನು ಕಾಪಾಡಿಕೊಂಡು, ಮುನ್ನೆಚ್ಚರಿಕೆಯಿಂಬ ಮುನ್ನಡೆಯೋಣ ಎಂದಿದ್ದಾರೆ.