Advertisement
ಹಾವೇರಿ ಜಿಲ್ಲೆಯ ಮೂಲಕ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ದಿ|ಸಿ.ಎಂ. ಉದಾಸಿ. ಹಾವೇರಿ ಪ್ರತ್ಯೇಕ ಜಿಲ್ಲೆ ರಚನೆಗೆ ಅತ್ಯಂತ ಬುದ್ಧಿವಂತಿಕೆಯಿಂದ ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲರ ಮನವೊಲಿಸಿ ವಾಸ್ತವ ಅರುಹಿ, ಹಾವೇರಿ ಜಿಲ್ಲೆ ನಿರ್ಮಾಣ ಮಾಡುವಲ್ಲಿ ತಮ್ಮ ಇಚ್ಛಾಶಕ್ತಿ ಮೆರೆದ ಅಪರೂಪದ ರಾಜಕಾರಣಿ ದಿ|ಸಿ.ಎಂ.ಉದಾಸಿ ಇಂದಿಗೂ ಮನೆ ಮಾತಾಗಿದ್ದಾರೆ.
Related Articles
Advertisement
ಪಕ್ಷಕ್ಕೇ ಸೆಡ್ಡು ಹೊಡೆದ ಪಕ್ಷೇತರ: ಹಾನಗಲ್ಲ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಆಕಸ್ಮಿಕವಾಗಿ 1972 ರಲ್ಲಿ ನಗರ ಸುಧಾರಣಾ ಸಮಿತಿ ಹೆಸರಿನಲ್ಲಿ ಪುರಸಭೆಯ 15 ಸ್ಥಾನಗಳಲ್ಲಿ ಸಿ.ಎಂ. ಉದಾಸಿ ನೇತೃತ್ವದಲ್ಲಿ 9 ಸ್ಥಾನಗಳನ್ನು ಗೆಲ್ಲಿಸಿ ಸದಸ್ಯನಾಗಿ ಎಲ್ಲರ ಸಹಮತದೊಂದಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು ಉದಾಸಿ. ಅದಾವುದೋ ಘಳಿಗೆಯಲ್ಲಿ ವಿಧಾನಸಭೆಗೆ ಮುಖ ಮಾಡಿದಾಗ ಅಂದಿನ ರಾಷ್ಟ್ರ ನಾಯಕಿ ದಿ|ಇಂದಿರಾಗಾಂಧಿಯವರ ಪಕ್ಷದ ಅಲೆಯ ನಡುವೆಯೂ ತಮ್ಮ ಜನಬಲ ತೋರಿದವರು. ಅಂದಿನ ಕಾಂಗ್ರೆಸ್ ರಾಷ್ಟ್ರ ನಾಯಕಿ ಇಂದಿರಾಗಾಂಧಿಯವರೇ ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಉದಾಸಿ ವಿರುದ್ಧ ತಮ್ಮ ಅಭ್ಯರ್ಥಿ ಗೆಲ್ಲಲು ಪ್ರಚಾರ ಮಾಡಿದರೂ “ಆನೆ’ ಗುರುತಿನಿಂದ ಪಕ್ಷೇತರರಾಗಿ ಸ್ಪರ್ಧಿಸಿ ಯಾರೂ ನಿರೀಕ್ಷಿಸಲಾರದ ಗೆಲುವು ಸಾಧಿಸಿ ಹೊಸ ಇತಿಹಾಸ ಬರೆದವರು. ಬಳಿಕ ಅರ್ಧ ಶತಕಗಳ ಕಾಲ ಸಿ.ಎಂ.ಉದಾಸಿಯವರು ಐದು ಚಿನ್ಹೆಗಳಲ್ಲಿ 9 ಚುನಾವಣೆ ಎದುರಿಸಿ 6 ಬಾರಿ ವಿಧಾನಸಭೆ ಪ್ರವೇಶಿಸಿ ಮಂತ್ರಿಯಾಗಿ, ನಿಗಮಗಳ ಅಧ್ಯಕ್ಷರಾಗಿ ಇಡೀ ಕರ್ನಾಟಕದ ಅಚ್ಚುಮೆಚ್ಚಿನ ರಾಜಕಾರಣಿಯಾಗಿ ಹೆಸರು ಮಾಡಿದ ಮಾದರಿ ರಾಜಕಾರಣಿ.
ಅಭಿವೃದ್ಧಿಯಲ್ಲೂ ಮೈಲಿಗಲ್ಲು: ಹಾನಗಲ್ಲ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಸಿ.ಎಂ. ಉದಾಸಿ ಹಗಲಿರುಳು ಶ್ರಮಿಸಿ ಸರಕಾರದಲ್ಲಿ ಪ್ರಭಾವ ಬೀರಿ ತಾಲೂಕಿನ ಅಭಿವೃದ್ಧಿಗೆ ಶಕ್ತಿ ಮೀರಿ ಸೇವೆ ಸಲ್ಲಿಸಿದವರು. ಲೋಕೋಪಯೋಗಿ ಖಾತೆ ಮಂತ್ರಿಯಾದ ಸಂದರ್ಭದಲ್ಲಿ ಕೇವಲ ಕೃಷಿಗೆ ಸೀಮಿತವಾದ ನಬಾರ್ಡ್ ಯೋಜನೆಯನ್ನು ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಅನ್ವಯಿಸುವಂತೆ ಮಾಡಿ ಇಡೀ ರಾಜ್ಯದಲ್ಲಿ ರಸ್ತೆಗಳ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದರು. ಹಾನಗಲ್ಲ ತಾಲೂಕಿನ ರಸ್ತೆಗಳಂತೂ ಸದಾ ಕಾಲಕ್ಕೂ ಸಿ.ಎಂ.ಉದಾಸಿಯವರ ಹೆಸರು ಹೇಳುವಂತೆ ಅಭಿವೃದ್ಧಿಗೊಂಡಿದ್ದು, ಇಡೀ ತಾಲೂಕಿನ ಜನ ಪûಾತೀತವಾಗಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚುವಂತೆ ಈಗಲೂ ನೆನಪಿಸುತ್ತಾರೆ.
ಛಲದಂಕಮಲ್ಲ : ಸಿ.ಎಂ. ಉದಾಸಿ ಎಂದರೆ ಹಠ ಬಿಡದ ಛಲದಂಕಮಲ್ಲ. ಹಿಡಿದ ಕೆಲಸವನ್ನು ಪಟ್ಟು ಬಿಡದೆ ಪೂರ್ಣಗೊಳಿಸಿ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಹುಬ್ಬೇರಿಸುವಂತೆ ಮಾಡುವ ತಾಕತ್ತಿರುವ ವ್ಯಕ್ತಿತ್ವ. ತನ್ನ ಬೆನ್ನ ಹಿಂದೆ ಇರುವ ಕಾರ್ಯಕರ್ತರ ಹಿತಕ್ಕೆ ಯಾವುದೇ ಧಕ್ಕೆಯಾಗದಂತೆ ಕಾಪಾಡಿಕೊಳ್ಳುವ ನಿಷ್ಠೆ ಉದಾಸಿಯವರದಾಗಿತ್ತು. ಕಾರ್ಯಕರ್ತರೆಂದರೆ ತನ್ನ ಶಕ್ತಿ ಎಂದು ತಿಳಿದ ಸಿ.ಎಂ. ಉದಾಸಿ ಎಂತಹುದೇ ಕಠಿಣ ಪ್ರಸಂಗದಲ್ಲಿಯೂ ಹೋರಾಟದಿಂದ ಹಿಂದೆ ಸರಿಯದೆ ನ್ಯಾಯಕ್ಕಾಗಿ ಊಟ ನಿದ್ದೆಯ ಪರಿವಿಲ್ಲದೆ ಕೆಲಸ ಮಾಡುವ ನಿಜವಾದ ರಾಜಕೀಯ ಮುತ್ಸದ್ಧಿಯಾಗಿದ್ದರು.
ಬಹುಭಾಷಾ ಪ್ರವೀಣ: ಕೇವಲ 8 ನೇ ತರಗತಿ ವರೆಗೆ ಓದಿದ್ದ ಸಿ.ಎಂ. ಉದಾಸಿ 8-10 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಛಾತಿ ಉಳ್ಳವರು. ತೀರಾ ಇತ್ತೀಚಿನ ವರ್ಷಗಳಲ್ಲಿ ಉರ್ದು ಮಾತನಾಡುವುದರ ಜೊತೆಗೆ ಇಲ್ಲಿನ ನಿವೃತ್ತ ಉರ್ದು ಶಿಕ್ಷಕ ಉಪ್ಪಿನ ಎಂಬುವವರಲ್ಲಿ ಉರ್ದು ಬರವಣಿಗೆಯನ್ನು ಅಭ್ಯಾಸ ಮಾಡಿ ಭಾಷೆ ಅಧ್ಯಯನಕ್ಕೆ ವಯಸ್ಸು, ಜಾತಿ ಧರ್ಮದ ಕಟ್ಟಳೆ ಇಲ್ಲ ಜ್ಞಾನಕ್ಕಾಗಿ ಜಗತ್ತಿನ ಎಲ್ಲ ಭಾಷೆಗಳನ್ನು ಅರಿಯಬೇಕು ಎಂಬ ಸಂದೇಶ ಸಾರಿದ್ದರು.
ಅದ್ಭುತ ನೆನಪಿನ ಶಕ್ತಿ : ಸಿ.ಎಂ.ಉದಾಸಿ ಅವರಿಗೆ ಅಗಾಧ ನೆನಪಿನ ಶಕ್ತಿ ಇತ್ತೆಂಬುದು ಇಡೀ ತಾಲೂಕಿನ ಜನತೆಗೆ ಗೊತ್ತಿರುವ ಸಂಗತಿ. ಹತ್ತಾರು ವರ್ಷಗಳ ಹಿಂದೆ ಭೇಟಿಯಾದ ವ್ಯಕ್ತಿಗಳ ಹೆಸರನ್ನು ಹಿಡಿದು ಮಾತನಾಡುವ, ಎಂದೋ ಕೇಳಿದ ದೂರವಾಣಿ ಸಂಖ್ಯೆ, ಮೊಬೈಲ್ ನಂಬರ್‌ಗಳನ್ನು ನೆನಪಿಟ್ಟುಕೊಂಡು ಡಯಲ್ ಮಾಡುತ್ತಿದ್ದರು. ಕಾರ್ಯಕರ್ತರನ್ನು ಹೆಸರು ಹೇಳಿ ಕರೆಯುವ ಹಾಗೂ ತಮ್ಮ ಕಾರ್ಯಕರ್ತರು ಪಂಚಾಯತಿ ಸದಸ್ಯರು ಸೇರಿದಂತೆ ಯಾವುದೇ ಸೇವೆಯಲ್ಲಿದ್ದರೂ ಅವರ ಅಧಿಕಾರಾವಧಿಯನ್ನು ದಿನಾಂಕ ಸಹಿತ ಹೇಳುವ ನೆನಪಿನ ಶಕ್ತಿ ಅವರದ್ದು.
ಬೆಳೆವಿಮಾ ಹರಿಕಾರ : ಇಡೀ ರಾಜ್ಯದಲ್ಲಿ ಬೆಳೆವಿಮೆಯನ್ನು ಕೆಲವೇ ಕೆಲವು ರೈತರು ಕಾನೂನು ರೀತ್ಯಾ ಬಳಸಿಕೊಳ್ಳುತ್ತಿದ್ದರು. ಹಾನಗಲ್ಲ ತಾಲೂಕು ಅತಿ ಹೆಚ್ಚು ಅತಿವೃಷ್ಟಿ ಅನಾವೃಷ್ಟಿಗಳಿಗೆ ಈಡಾಗಿ ರೈತ ಸಂಕಷ್ಟಕ್ಕೆ ಈಡಾದ ಸಂದರ್ಭದಲ್ಲಿ ಹಾನಗಲ್ಲ ತಾಲೂಕು ಹಾಗೂ ಹಾವೇರಿ ಜಿಲ್ಲೆಯಾದ್ಯಂತ ರೈತರು ಬೆಳೆವಿಮೆ ಕಂತು ತುಂಬುವಂತೆ ಜಾಗೃತಿಯ ಹೋರಾಟವನ್ನೇ ಮಾಡಿ ಇಡೀ ರಾಜ್ಯದಲ್ಲಿ ಹಾನಗಲ್ಲ ತಾಲೂಕು ಅತಿ ಹೆಚ್ಚು ಬೆಳೆವಿಮಾ ಸೌಲಭ್ಯವನ್ನು ಪಡೆಯುವಂತೆ ಮಾಡಿದ ಶ್ರೇಯಸ್ಸು ಸಿ.ಎಂ.ಉದಾಸಿಯವರಿಗೆ ಸಲ್ಲುತ್ತದೆ. ಅಲ್ಲದೆ ಸಕಾಲಿಕವಾಗಿ ಬೆಳೆವಿಮೆ ರೈತರ ಖಾತೆಗಳಿಗೆ ಜಮಾ ಆಗುವಂತೆ ಅಧಿಕಾರ ಇದ್ದಾಗಲೂ ಇಲ್ಲದಿದ್ದಾಗಲೂ ಕಾನೂನು ಹೋರಾಟ ನಡೆಸಿ ರೈತರ ಪರ ನಿಂತು ರೈತ ನಾಯಕ ಎನಿಸಿಕೊಂಡವರು.
ಶಿಕ್ಷಣ ಪ್ರೇಮಿ : ಕೇವಲ 8 ನೇ ತರಗತಿ ಓದಿದ ಸಿ.ಎಂ. ಉದಾಸಿಯವರಿಗೆ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಸುಲಭವಾಗಿ ಉನ್ನತ ಶಿಕ್ಷಣ ಲಭ್ಯವಾಗಬೇಕೆಂಬ ಕಳಕಳಿ ಇತ್ತು. ಹಾವೇರಿ ಜಿಲ್ಲೆಯ ನವೋದಯ ವಿದ್ಯಾಲಯವನ್ನು ಹಾನಗಲ್ಲ ತಾಲೂಕಿನ ಮಹರಾಜಪೇಟೆಯಲ್ಲಿ ಸ್ಥಾಪಿಸಿ ಎಲ್ಲ ಸೌಲಭ್ಯಗಳನ್ನು ಒದಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜಿಲ್ಲೆಯಾದ್ಯಂತ ಮೋರಾರ್ಜಿ ವಸತಿ ಶಾಲೆಗಳು, ಪಾಲಿಟೆಕ್ನಿಕ್, ಸರಕಾರಿ ಪ್ರೌಢಶಾಲೆಗಳನ್ನು, ತೆರೆದಿರುವುದು ಮಾತ್ರವಲ್ಲ ಮೂರು ಪದವಿ ಕಾಲೇಜುಗಳನ್ನು ಆರಂಭಿಸುವಲ್ಲಿ ಅಗ್ರಣೀಯ ಸೇವೆ ಸಲ್ಲಿಸಿದರು. ಇವರದೇ ಆಡಳಿತದ ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟನ ಶಿಕ್ಷಣ ಮಹಾವಿದ್ಯಾಲಯ ಇಡೀ ರಾಜ್ಯದಲ್ಲಿಯೇ ಹೆಸರು ಮಾಡಿದೆ. ಇದೇ ಆವರಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಬಸವೇಶ್ವರರ ಪುತ್ಥಳಿಗಳನ್ನು ಸ್ಥಾಪಿಸಿರುವುದು ವಿಶೇಷ ಸಂಗತಿ.
ನೀರು ಹರಿಸಿದ ಭಗೀರಥ : ನೀರಾವರಿ ಎಂದರೆ ಸಿ.ಎಂ.ಉದಾಸಿಯವರಿಗೆ ನರನಾಡಿಗಳೆಲ್ಲ ಒಮ್ಮೆಲೆ ಜಾಗೃತವಾಗುತ್ತಿದ್ದವು. ರೈತನ ಕೃಷಿ ಭೂಮಿಗೆ ನೀರೊದಗಿಸಿದರೆ ರೈತ ಆರ್ಥಿಕವಾಗಿ ಬಲಗೊಳ್ಳಬಲ್ಲ. ಆಗ ಸರಕಾರದ ಕಡೆಗೆ ಅನುದಾನಗಳಿಗಾಗಿ ಆಸೆ ಪಡಲಾರ ಎಂಬುದು ಇವರ ಅರಿವಿಗೆ ಬಂದಿತ್ತು. ಹೀಗಾಗಿ ಹಾನಗಲ್ಲ ತಾಲೂಕಿನ ನೂರಾರು ಕೆರೆಗಳ ಹೂಳೆತ್ತುವ, ಧರ್ಮಾ ಜಲಾಶಯದ ಕಾಲುವೆಯನ್ನು ಕಾಂಕ್ರೀಟ್ ಕಾಲುವೆ ಮಾಡುವ, ಇದೆಲ್ಲದಕ್ಕಿಂತ ಮುಖ್ಯವಾಗಿ 500 ಕೋಟಿಗೂ ಅಧಿಕ ಹಣದಲ್ಲಿ ಬಾಳಂಬೀಡ ಹಾಗೂ ಹಿರೇಕಾಂಶಿ ಏತ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸಲು ಮುಂದಾಗಿ ಹಾನಗಲ್ಲ ತಾಲೂಕಿನ ಅರ್ಧಕ್ಕೂ ಹೆಚ್ಚು ಕೃಷಿ ಪ್ರದೇಶ ನೀರಾವರಿಗೆ ಒಳಪಡುವಂತೆ ಮಾಡಿ ನೀರು ಹರಿಸಿದ ಭಗೀರಥ ಎಂದು ಕರೆಸಿಕೊಂಡರು. ತಿಳವಳ್ಳಿ, ಬಸಾಪೂರ ಏತ ನೀರಾವರಿ ಯೋಜನೆಗಳು ದಶಕಗಳ ಹಿಂದೆಯೇ ನಿರ್ಮಾಣಗೊಂಡು ತಾಲೂಕಿನ ದಕ್ಷಿಣ ಭಾಗದ ರೈತರ ಕೃಷಿ ಭೂಮಿಯನ್ನು ತಣಿಸಿ ರೈತರು ನೆಮ್ಮದಿಯಾಗಿರಲು ಅವಕಾಶ ಮಾಡಿಕೊಟ್ಟಿದೆ.
ಉದಾಸಿ ನಡೆದದ್ದೇ ಮಾರ್ಗ : ರಾಜಕಾರಣದಲ್ಲಿ ಎಂದೂ ತನ್ನ ಗುರಿಯನ್ನು ತಪ್ಪದೆ ಹೆಜ್ಜೆ ಹಾಕಿದ ಸಿ.ಎಂ. ಉದಾಸಿ ರಾಜಕೀಯ ಇತಿಹಾಸದಲ್ಲಿ ಅವರು ನಡೆದದ್ದು ಮಾದರಿ ಮಾರ್ಗ ಎಂಬ ಹೆಗ್ಗುರುತನ್ನು ಮೂಡಿಸಿದ್ದಾರೆ. ಹಾನಗಲ್ಲ ತಾಲೂಕಿನ ಚುನಾವಣೆ ವಿಷಯದಲ್ಲಿ ಕಾಂಗ್ರೇಸ್ ಸೇರಿದಂತೆ ವಿವಿಧ ಪಕ್ಷಗಳು ಒಂದೆಡೆಯಾದರೆ ಇಲ್ಲಿ ಉದಾಸಿಯವರೇ ಒಂದು ಪಕ್ಷ ಎನ್ನುವಷ್ಟರ ಮಟ್ಟಿಗೆ ಶಸಕ್ತ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದರು. ಜನಹಿತದ ರಾಜಕಾರಣದ ಮೂಲಕ ಉದಾಸಿಯವರು ಇಂದಿಗೂ ಇಡೀ ಜಿಲ್ಲೆಯಲ್ಲಿ ಮನೆಮಾತಾಗಿ ಉಳಿದಿದ್ದಾರೆ.