ಶ್ರೀರಂಗಪಟ್ಟಣ: ಹುಟ್ಟಿನಿಂದಲೇ ಅಂಗವೈಕಲ್ಯದಿಂದ ಬಳಲುತಿದ್ದ ಐದು ವರ್ಷದ ಕಂದಮ್ಮನಿಗೆ ಆಸರೆಯಾದ ನಾಡ ದೊರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿದರೂ, ಚುನಾವಣೆ ಪ್ರಚಾರ ವೇಳೆ ಬಡ ದಂಪತಿಗಳಿಗೆ ಕೊಟ್ಟ ಮಾತಿನಂತೆ ಮಗುವಿನ ಶಸ್ತ್ರ ಚಿಕಿತ್ಸೆ ವೆಚ್ಚ ಭರಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾನವೀಯತೆ ಮೆರೆದಿದ್ದಾರೆ.
ಮುಖ್ಯಮಂತ್ರಿಗಳಿಂದ ಭರವಸೆ ಸಿಕ್ಕ ನಂತರ ಸಂತೋಷದಿಂದ ಎಲ್ಲಾ ಸಿದ್ಧತೆಯೊಂದಿಗೆ ದಂಪತಿ ಬೆಂಗಳೂರಿಗೆ ಪ್ರಯಾಣ ಬೆಳಸಿದರು. ಮುಖ್ಯಮಂತ್ರಿ ಅವರ ಜೆ.ಪಿ.ನಗರದ ನಿವಾಸ ತಲುಪಿದರು. ಇವರನ್ನು ನೋಡಿ ಕೂಡಲೇ ಅಲ್ಲಿರುವ ಸಿಬ್ಬಂದಿ ಒಳಗೆ ಕರೆದುಕೊಂಡು ಹೊಗಿ ಟೀ ಹಾಗೂ ತಿಂಡಿ ನೀಡಿ ಸಿಎಂ ಕುಮಾರಸ್ವಾಮಿ ಅವರಿಗೆ ವಿಷಯ ತಿಳಿಸಿದರು.
Advertisement
ಇತ್ತೀಚೆಗೆ ಲೋಕಸಭಾ ಚುನಾವಣೆ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೆಆರ್‌ಎಸ್‌ನಲ್ಲಿ ವಾಸ್ತವ್ಯ ಹೂಡಿ ಬೆಂಗಳೂರಿಗೆ ಪ್ರಯಾಣ ಬೆಳಸುವ ವೇಳೆ ತಾಲೂಕಿನ ಹೊಸ ಆನಂದೂರು ಗ್ರಾಮದ ಬಡ ಕುಟುಂಬದ ಲಕ್ಷ್ಮೀ ಹಾಗೂ ಕುಮಾರ್ ದಂಪತಿ ಕುಮಾರಸ್ವಾಮಿ ಅವರ ಬರುವಿಕೆಗಾಗಿ ಕಾದು ನಿಂತಿದ್ದರು. ಬಲಗೈ ಸ್ವಾಧೀನ ಕಳೆದುಕೊಂಡಿರುವ ತಮ್ಮ ಮಗಳು ರಿಯಾಂಜಲಿ ಶಸ್ತ್ರ ಚಿಕಿತ್ಸೆ ನಡೆಸಲು ನೆರವಾಗುವಂತೆ ಮನವಿ ಮಾಡಿದ್ದರು. ಆ ಕುಟುಂಬದ ಸಂಕಷ್ಟಕ್ಕೆ ಮರುಗಿದ ಕುಮಾರಸ್ವಾಮಿ ಚುನಾವಣೆ ಮುಗಿದ ಬಳಿಕ ನಿಮಗೆ ಸಹಾಯ ಮಾಡುತ್ತೇನೆ ಬೆಂಗಳೂರಿಗೆ ಬಂದು ನನ್ನನ್ನು ಭೇಟಿ ಮಾಡಿ ಎಂದು ಭರವಸೆ ನೀಡಿ ಹೋಗಿದ್ದರು.
Related Articles
Advertisement
ಯಶಸ್ವಿ ಶಸ್ತ್ರಚಿಕಿತ್ಸೆ: ಆಸ್ಪತ್ರೆಗೆ ಹೋಗುತಿದ್ದಂತೆಯೇ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿ ಆಪರೇಷನ್‌ಗೆ ಒಂದು ದಿನಾಂಕ ನಿಗದಿಪಡಿಸಿದರು. ನಂತರ ಚುನಾವಣೆ ಮುಗಿದ ಮೇಲೆ ಮೇ 18 ರಂದು ವೈದ್ಯರ ತಂಡ ರಿಯಾಂಜಲಿ ಅವರಿಗೆ ಆಪರೇಷನ್ ಮಾಡಿತು. ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಯಾವುದೇ ವೆಚ್ಚವಿಲ್ಲದೆ ಅಲ್ಲಿಂದ ಕಳುಹಿಸಿಕೊಟ್ಟಿದ್ದಾರೆ.
ಮಗುವಿಗೆ ನಡೆಸಲಾದ ಆಪರೇಷನ್ ಯಶಸ್ವಿಯಾಗಿದ್ದು, ಸಂಪೂರ್ಣವಾಗಿ ಗುಣಮುಖವಾಗಲು ಇನ್ನೂ ಒಂದು ಶಸ್ತ್ರಚಿಕಿತ್ಸೆ ಬಾಕಿ ಇದೆ. ಎರಡು ತಿಂಗಳ ನಂತರ ಬರಲು ವೈದ್ಯರು ತಿಳಿಸಿದ್ದಾರೆ ಎಂದು ರಿಯಾಂಜಲಿ ತಂದೆ ಕುಮಾರ್ ತಿಳಿಸಿದ್ದಾರೆ.
ಚುನಾವಣೆ ಮುಗಿಯುತ್ತಿದ್ದಂತೆ ನಮ್ಮನ್ನು ಬೆಂಗಳೂರಿಗೆ ಕರೆಸಿಕೊಂಡ ಕುಮಾರಣ್ಣ ತಮ್ಮ ಮನೆಯಲ್ಲಿಯೇ ನಮ್ಮನ್ನು ಉಪಚರಿಸಿ ನಮ್ಮ ಮಗಳು ರಿಯಾಂಜಲಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ತಾವು ನುಡಿದಂತೆ ನಡೆದುಕೊಂಡರು. ನಾಡಿನ ದೊರೆ ಕುಮಾರಣ್ಣ ನವರ ಮಾನವೀಯತೆಗೆ ನಮ್ಮ ಕುಟುಂಬ ಆಭಾರಿಯಾಗಿದೆ.
ಮಗುವಿಗೆ ಏನಾಗಿತ್ತು?:
ಹೊಸ ಆನಂದೂರು ಗ್ರಾಮದ ಬಡ ಕುಟುಂಬದ ದಂಪತಿಗಳಾದ ಲಕ್ಷ್ಮೀಹಾಗೂ ಕುಮಾರ್ ಮಗಳು ರಿಯಾಂಜಲಿ. ಈಕೆಗೆ ಹುಟ್ಟಿನಿಂದಲೇ ಬಲತೋಳಿನ ನರ ದೌರ್ಬಲ್ಯ ಬಳಲುತ್ತಿದ್ದಳು. ಪೋಷಕರು ತಮ್ಮ ಅಲ್ಪ ಸ್ವಲ್ಪ ದುಡಿಮೆ ಹಣವನ್ನು ಅವಳ ಚಿಕಿತ್ಸೆಗೆ ವ್ಯಯಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಮಗಳ ಚಿಕಿತ್ಸೆಗಾಗಿ ಸಾಕಷ್ಟು ಆಸ್ಪತ್ರೆಗಳನ್ನು ಅಲೆದಾಡಿದರೂ ಗುಣವಾಗಲಿಲ್ಲ. ಈ ವೇಳೆ ಅನೇಕ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಲು ಲಕ್ಷಾಂತರ ರೂ. ಖರ್ಚಾಗುತ್ತದೆ ಎಂದು ಹೇಳಿದ್ದರು. ಅಷ್ಟು ಹಣ ಬಡವರಾಗಿದ್ದ ದಂಪತಿ ಬಳಿ ಇರಲಿಲ್ಲ. ಅವಳ ಪರಿಸ್ಥಿತಿ ನೋಡಿ ಪ್ರತಿದಿನ ನೋವಿನಲ್ಲೇ ಸಂಸಾರ ದೂಡುತ್ತಿದ್ದರು. ಲಕ್ಷ್ಮೀ ಹಾಗೂ ಕುಮಾರ್ ದಂಪತಿಗೆ ಮೂರು ಜನ ಹೆಣ್ಣುಮಕ್ಕಳಿದ್ದು ಜೀವನ ನಡೆಸುವುದೇ ಕಷ್ಟಕರವಾಗಿತ್ತು. ಇಂತಹ ಸ್ಥಿತಿಯಲ್ಲಿ ಮಗಳ ಅಂಗವೈಕಲ್ಯ ಹೆತ್ತವರಿಗೆ ನುಂಗಲಾರದ ತುತ್ತಾಗಿತ್ತು.