ಬೆಂಗಳೂರು: ನ್ಯೂಜೆರ್ಸಿಯಲ್ಲಿ ಆದಿಚುಂಚನಗಿರಿ ಮಠದ ಕಟ್ಟಡ ಹಾಗೂ ದೇವಾಲಯ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಅಮೆರಿಕಕ್ಕೆ ತೆರಳಲಿದ್ದಾರೆ.
ಜೂ.30ರಂದು ನ್ಯೂಜೆರ್ಸಿಯ ಮಠದ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮವಿದ್ದು ಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರು ನೀವೇ ಶಿಲಾನ್ಯಾಸ ನೆರವೇರಿಸಬೇಕೆಂದು ಖುದ್ದು ಮನವಿ ಮಾಡಿ, ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಒಪ್ಪಿಗೆ ನೀಡಿದ್ದಾರೆ.
Advertisement
ಸುಮಾರು 20 ಕೋಟಿ ರೂ.ವೆಚ್ಚದಲ್ಲಿ ಅಮೆರಿಕದಲ್ಲಿರುವ ಒಕ್ಕಲಿಗರ ನೆರವು ಹಾಗೂ ಸಹಾಯದಿಂದ ನ್ಯೂಜೆರ್ಸಿಯಲ್ಲಿ ಆದಿಚುಂಚನಗಿರಿ ಮಠದ ಕಚೇರಿ ಕಟ್ಟಡ ಹಾಗೂ ದೇವಾಲಯ ನಿರ್ಮಾಣವಾಗುತ್ತಿದೆ. ಇದೇ ಸಂದರ್ಭದಲ್ಲಿ ಜುಲೈ 4ರಂದು ಅಲ್ಲೇ ಒಕ್ಕಲಿಗರ ಪರಿಷತ್ ಕಾರ್ಯಕ್ರಮವೂ ಇದ್ದು, ಅಲ್ಲಿನ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಿ, ಒತ್ತಡ ಹಾಕುತ್ತಿರುವುದರಿಂದ ಆ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ಶುಕ್ರವಾರ ರಾತ್ರಿ ಅಮೆರಿಕಕ್ಕೆ ತೆರಳಲಿರುವ ಕುಮಾರಸ್ವಾಮಿ, ಜುಲೈ 5ರಂದು ಅಮೆರಿಕದಿಂದ ವಾಪಸ್ಸಾಗಲಿದ್ದಾರೆ. ಅಮೆರಿಕಕ್ಕೆ ತಮ್ಮ ಸ್ವಂತ ವೆಚ್ಚದಲ್ಲಿ ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.