Advertisement

ವಿಪಕ್ಷ ಕೈಗೆ ವೀಡಿಯೊ ಅಸ್ತ್ರ

10:07 AM Nov 04, 2019 | Team Udayavani |

ಬೆಂಗಳೂರು: ಹುಬ್ಬಳ್ಳಿಯ ಬಿಜೆಪಿ ಸಭೆಯಲ್ಲಿ ಯಡಿಯೂರಪ್ಪ ಅವರು ಅನರ್ಹ ಶಾಸಕರು ಮತ್ತು ಆಪರೇಷನ್‌ ಕಮಲದ ಕುರಿತು ಆಡಿದ ಮಾತುಗಳ ಕ್ಲಿಪಿಂಗ್‌ ಬಹಿರಂಗವಾದ ಬೆನ್ನಲ್ಲೇ ಇದನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಾಜಕೀಯ ಅಸ್ತ್ರವಾಗಿಸಿಕೊಂಡಿದ್ದು, ಬಿಜೆಪಿ ಮತ್ತು ಯಡಿಯೂರಪ್ಪ ವಿರುದ್ಧ ಮುಗಿಬಿದ್ದಿವೆ.

Advertisement

ಅನರ್ಹ ಪ್ರಕರಣದ ವಿಚಾರಣೆ ನಡೆಯು ತ್ತಿರುವ ಸುಪ್ರೀಂ ಕೋರ್ಟ್‌ನಲ್ಲಿ ವೀಡಿಯೊ ಕ್ಲಿಪಿಂಗ್‌ ದಾಖಲೆ ಸಲ್ಲಿಸುವುದಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹೇಳಿವೆ. ಮತ್ತೂಂದೆಡೆ, ಯಡಿಯೂರಪ್ಪ ಅವರು ಹುಬ್ಬಳ್ಳಿ ಸಭೆಯಲ್ಲಿ ಈ ಕೆಲವು ವಿಚಾರ ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಹುಬ್ಬಳ್ಳಿಯ ಬಿಜೆಪಿ ಸಭೆಯಲ್ಲಿ ಬಿಎಸ್‌ವೈ ಅವರೇ ಆಪರೇಷನ್‌ ಕಮಲ, ಮೈತ್ರಿ ಸರಕಾರ ಪತನಗೊಳಿಸಿದ್ದನ್ನು ಒಪ್ಪಿಕೊಂಡಿ ರುವುದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅನರ್ಹ ಶಾಸಕರನ್ನು ಎರಡೂವರೆ ತಿಂಗಳು ಮುಂಬಯಿಯ ಹೊಟೇಲ್‌ ನಲ್ಲಿ ಇರಿಸಿದ್ದರು ಎಂದು ಯಡಿಯೂರಪ್ಪ ಹೇಳಿರುವುದು ವೀಡಿಯೋದಲ್ಲಿದೆ ಎಂದಿರುವ ಕಾಂಗ್ರೆಸ್‌ ನಾಯಕರು, ಈ ಕ್ಲಿಪಿಂಗ್‌ ಅನ್ನೂ ರಾಜ್ಯಪಾಲರಿಗೆ ನೀಡಿದ್ದಾರೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್‌ಗೆ ಕ್ಲಿಪಿಂಗ್‌ ಸಹಿತ ದೂರು ನೀಡಲು ಕಾಂಗ್ರೆಸ್‌ ನಿರ್ಧರಿಸಿದೆ. ಅನರ್ಹತೆ ಪ್ರಕರಣದ ವಿಚಾರಣೆ ಮುಗಿದು ತೀರ್ಪು ಹೊರಬೀಳುವ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ವೀಡಿಯೊ ವೈರಲ್‌ ಆಗಿರುವುದು ಸಂಚಲನ ಮೂಡಿಸಿದೆ.

ರಾಜ್ಯಪಾಲರ ಭೇಟಿಯ ಅನಂತರ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೋರ್‌ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಮಾತನಾಡಿರುವ ವೀಡಿಯೊ ಬಿಡುಗಡೆಯಾಗಿದೆ. ಅಮಿತ್‌ ಶಾ ನಿರ್ದೇಶನದ ಮೇರೆಗೆ ಶಾಸಕರನ್ನು ಸೆಳೆಯಲಾಯಿತು ಎಂದು ಯಡಿಯೂರಪ್ಪ ಹೇಳಿದ್ದಾರೆ. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ ಎಂದಿದ್ದಾರೆ.

Advertisement

ಇದು ಸಂವಿಧಾನದ ವಿರೋಧಿ ಕೃತ್ಯ. ಪಕ್ಷಾಂತರ ಕಾಯ್ದೆಯ ಶೆಡ್ನೂಲ್‌ 10 ಸ್ಪಷ್ಟವಾಗಿ ಉಲ್ಲಂಘನೆಯಾಗಿದೆ. ಅಮಿತ್‌ ಶಾ ಮತ್ತು ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಸರಣಿ ಟ್ವೀಟ್‌ ಮೂಲಕ ಬಿಜೆಪಿಯ ಕಾಲೆಳೆದಿದ್ದಾರೆ.

ಮಾತನಾಡಿದ್ದು ನಿಜ ಎಂದ ಮುಖ್ಯಮಂತ್ರಿ ಯಡಿಯೂರಪ್ಪ
ಹುಬ್ಬಳ್ಳಿಯ ಪಕ್ಷದ ಸಭೆಯಲ್ಲಿ ಕೆಲವು ವಿಚಾರಗಳ ಬಗ್ಗೆ ನಾನು ಮಾತನಾಡಿದ್ದು ನಿಜ ಎಂದು ಸಿಎಂ ಯಡಿಯೂರಪ್ಪ ಒಪ್ಪಿ ಕೊಂಡಿದ್ದಾರೆ. ಆದರೆ ಈ ಬಗ್ಗೆ ತಪ್ಪು ಅಭಿಪ್ರಾಯ ಇದೆ. ಪಕ್ಷದ ಕೆಲವರು ಕೆಲವು ಕ್ಷೇತ್ರಗಳ ಬಗ್ಗೆ ಹುಚ್ಚುಹುಚ್ಚಾಗಿ ಮಾತನಾಡಿದ್ದರು. ಆದರೆ ಅನರ್ಹರು ರಾಜೀನಾಮೆ ನೀಡಿದ ಅನಂತರವೇ ಸರಕಾರ ರಚನೆಯಾಗಿದ್ದು, ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸ್ಪಷ್ಟವಾಗುವವರೆಗೂ ಹಗುರವಾಗಿ ಮಾತನಾಡಬೇಡಿ. ಚುನಾವಣೆಗೆ ಯಾರು ಸ್ಪರ್ಧಿಸಲಿದ್ದಾರೆ ಎಂಬುದನ್ನು ಆಮೇಲೆ ನೋಡೋಣ ಎಂದಷ್ಟೇ ನಾನು ಅಲ್ಲಿ ಹೇಳಿದ್ದೇನೆ ಎಂದಿದ್ದಾರೆ. ಅಮಿತ್‌ ಶಾ ಹೆಸರು ಅನಗತ್ಯವಾಗಿ ಪ್ರಸ್ತಾವಿಸ ಲಾಗುತ್ತಿದೆ. ಅನರ್ಹ ಶಾಸಕರು ಮುಂಬಯಿಯಲ್ಲಿದ್ದ ವಿಚಾರ ಎಲ್ಲರಿಗೂ ಗೊತ್ತಿತ್ತು. ಸಿದ್ದರಾಮಯ್ಯ ಅವರಿಗೆ ಈ ರೀತಿಯ ವಿವಾದ ಬೇಕಾಗಿದೆ, ಆದ್ದರಿಂದಲೇ ಹೀಗೆ ಮಾತನಾಡುತ್ತಿದ್ದಾರೆ ಎಂದು ಬಿಎಸ್‌ವೈ ಹೇಳಿದ್ದಾರೆ.

ಅಧಿಕಾರ ದುರುಪಯೋಗ
ವೀಡಿಯೊ ಬಹಿರಂಗ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಆಪರೇಷನ್‌ ಕಮಲಕ್ಕೆ ಇದು ಸಾಕ್ಷಿ. ಈ ಹಿಂದೆ ಆಡಿಯೋ ಬಿಡುಗಡೆಯಾಗಿತ್ತು, ಈಗ ವೀಡಿಯೋ ಆಗಿದೆ. ಅಮಿತ್‌ ಶಾ ಅಧಿಕಾರ ದುರುಪಯೋಗ ಸಾಬೀತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಸುಪ್ರೀಂ ಕೋರ್ಟ್‌ಗೂ ದಾಖಲೆ ಸಲ್ಲಿಸು ತ್ತೇವೆ ಎಂದಿದ್ದಾರೆ.

ಅತ್ತ ದಿಲ್ಲಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್‌, ನಾವು ಸರಕಾರ ಬೀಳಿಸುವ ಷಡ್ಯಂತ್ರದಲ್ಲಿ ಬಿಜೆಪಿ ಹೈಕಮಾಂಡ್‌ ಪಾತ್ರ ಇದೆ ಎಂದು ಹೇಳುತ್ತಲೇ ಇದ್ದೆವು. ಈಗ ಮುಖ್ಯಮಂತ್ರಿಗಳೇ ಇದನ್ನು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಅಮಿತ್‌ ಶಾ ಉತ್ತರಿಸಲಿ
ಹುಬ್ಬಳ್ಳಿಯ ಸಭೆಯಲ್ಲಿ ಯಡಿಯೂರಪ್ಪ ಅವರೇ ಸಮ್ಮಿಶ್ರ ಸರಕಾರ ಉರುಳಿಸಲು 17 ಶಾಸಕರ ರಾಜೀನಾಮೆ ಕೊಡಿಸಿದೆವು, ಅವರನ್ನು ರಾಷ್ಟ್ರೀಯ ಅಧ್ಯಕ್ಷರೇ ಎರಡೂವರೆ ತಿಂಗಳು ಮುಂಬಯಿಯಲ್ಲಿ ಇರಿಸಿ ದ್ದರು. ಅನರ್ಹಗೊಂಡವರು ನಮಗಾಗಿ ಮನೆ ಮಕ್ಕಳು, ಮಡದಿ ಬಿಟ್ಟು ಹೋಗಿದ್ದರು ಎಂದು ಹೇಳಿದ್ದಾರೆ. ಇದಕ್ಕೆ ಅಮಿತ್‌ ಶಾ ಉತ್ತರಿಸ ಬೇಕು ಎಂದು ಒತ್ತಾಯಿಸಿರುವ ಮಾಜಿ ಮುಖಮಂತ್ರಿ ಕುಮಾರಸ್ವಾಮಿ, ನಾವೂ ಇದನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತರುತ್ತೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next