ಮಡಿಕೇರಿ: ನಗರದ ಹೊರಭಾಗದಲ್ಲಿರುವ ಇಬ್ಬನಿ ರೆಸಾರ್ಟ್‌ನಲ್ಲಿ ತಂಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕುಟುಂಬ ವರ್ಗ ಶನಿವಾರವೂ ಯಾರನ್ನೂ ಭೇಟಿ ಮಾಡಲಿಲ್ಲ. ಮುಂಜಾನೆ ಎದ್ದು ರೆಸಾರ್ಟ್‌ನ ಪರಿಸರದಲ್ಲಿ ವಾಕಿಂಗ್ ಮಾಡಿದ್ದು ಬಿಟ್ಟರೆ ಇನ್ನುಳಿದಂತೆ ಸಿಎಂ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ರೆಸಾರ್ಟ್‌ನ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮಾಧ್ಯಮದವರಿಗೂ ಅವರ ದರ್ಶನವಾಗಿಲ್ಲ. ಹೀಗಾಗಿ, ರೆಸಾರ್ಟ್ ಬಳಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಿದ್ದ ಕೆಲವು ಮಂದಿ ನಿರಾಸೆಯಿಂದ ತೆರಳುತ್ತಿದ್ದ ದೃಶ್ಯ ಕಂಡು ಬಂತು.
ದುಬಾರಿ ರೆಸಾರ್ಟ್‌ನಲ್ಲಿ ಮುಖ್ಯಮಂತ್ರಿಯವರು ವಾಸ್ತವ್ಯ ಹೂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. “ಚುನಾವಣೆಗೂ ಮೊದಲು ಗ್ರಾಮ ವಾಸ್ತವ್ಯ, ಚುನಾವಣೆ ಮುಗಿದ ಮೇಲೆ ರೆಸಾರ್ಟ್ ವಾಸ್ತವ್ಯ’ ಎಂದು ಕೆಲವರು ಕುಟುಕಿದ್ದಾರೆ.
ಸಿಎಂ ಜತೆಗೆ ಆಗಮಿಸಿದ್ದ ಸಚಿವ ಸಾ.ರಾ.ಮಹೇಶ್ ಮಾತ್ರ ಸಿಎಂ ಸೂಚನೆಯಂತೆ ಚುನಾವಣಾ ಆಯೋಗದ ಅನುಮತಿ ಪಡೆದು ಕೊಡಗು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಇದಕ್ಕೂ ಮೊದಲು ರೆಸಾರ್ಟ್ ಬಳಿ ಮಾತನಾಡಿದ ಅವರು, ಸಿಎಂ ರೆಸಾರ್ಟ್ ವಾಸ್ತವ್ಯವನ್ನು ಸಮರ್ಥಿಸಿಕೊಂಡರು.
ಎಲ್ಲರಿಗೂ ಖಾಸಗಿ ಬದುಕು ಮತ್ತು ವಿಶ್ರಾಂತಿಯ ಅಗತ್ಯವಿರುತ್ತದೆ. ಅದನ್ನು ಸಿಎಂ ಮಾಡುತ್ತಿದ್ದಾರೆ ಅಷ್ಟೆ. ಅಲ್ಲದೆ, ಕೊಡಗಿನಲ್ಲಿ ಹಿಂದೆ ಸಿದ್ದರಾಮಯ್ಯ ಉಳಿದುಕೊಂಡಿದ್ದ ರೆಸಾರ್ಟ್‌ಗೆ ಈಗ ಕುಮಾರಸ್ವಾಮಿ ಕೂಡ ಬಂದಿರುವುದು ಕೊಡಗು ಸುರಕ್ಷಿತವಾಗಿದೆ ಎಂಬ ಸಂದೇಶ ಸಾರಲು’ ಎಂದರು.