Advertisement

‘ನಿಮಗೆ ಇಷ್ಟೆಲ್ಲಾ ಮಾಡಿದ ನನಗೆ ‘ಗೋ ಬ್ಯಾಕ್‌’ ಅನ್ನುತ್ತೀರಾ?’

10:41 AM Mar 14, 2019 | Team Udayavani |

ಮಂಡ್ಯ: ಸಕ್ಕರೆ ನಾಡಿನಲ್ಲಿ ಈ ಬಾರಿ ತಮ್ಮ ಮಗನನ್ನು ಶತಾಯಗತಾಯ ಗೆಲ್ಲಿಸಲೇಬೇಕೆಂದು ಪಣತೊಟ್ಟಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ನಗರದಲ್ಲಿ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ತಮ್ಮ ಮಗನ ರಾಜಕೀಯ ಪ್ರವೇಶಕ್ಕೆ ಮುನ್ನುಡಿಯನ್ನು ಬರೆದರು. ತಮ್ಮ ಭಾಷಣದುದ್ದಕ್ಕೂ ಮಂಡ್ಯ ಕ್ಷೇತ್ರದ ಮತದಾರರನ್ನು ಭಾವನಾತ್ಮಕವಾಗಿ ತಟ್ಟುವ ಪ್ರಯತ್ನವನ್ನು ಕುಮಾರಸ್ವಾಮಿಯವರು ಮಾಡಿದರು. ತನ್ನ ಅಧಿಕಾರವಧಿಯಲ್ಲಿ ಮಂಡ್ಯ ಕ್ಷೇತ್ರಕ್ಕೆ ಏನೆಲ್ಲಾ ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದೇನೆ ಎಂದು ಕುಮಾರಸ್ವಾಮಿಯವರು ದಾಖಲೆಗಳ ಸಹಿತ ಮಾಹಿತಿ ನೀಡಿದ್ದು ವಿಶೇಷವಾಗಿತ್ತು.

Advertisement

ಮಂಡ್ಯದ ಹೆಮ್ಮೆ ‘ಮೈ ಶುಗರ್‌’ ಅಭಿವೃದ್ಧಿಗೆ ವಿಸ್ತೃತ ಯೋಜನೆ ಹಾಗೂ ಹಣಕಾಸಿನ ನೆರವು, ಸುಲಭ ಬೆಲೆ ಸಾಲ ವಿಧಾನದ ಮೂಲಕ ರೈತರು ತಮ್ಮ ಒಡವೆಗಳನ್ನು ಗಿರವಿ ಇಟ್ಟು ಸಾಲ ಪಡೆದುಕೊಳ್ಳುವುದನ್ನು ತಪ್ಪಿಸಿದ್ದು, ಸಾಲ ಮನ್ನಾ ಯೋಜನೆಯ ಮೂಲಕ ರೈತರ ಸಂಕಷ್ಟವನ್ನು ಬಗೆಹರಿಸಿದ್ದು, ಕೆ.ಆರ್‌.ಎಸ್‌.ನಲ್ಲಿ ಫ್ಯಾಂಟಸಿ ಪಾರ್ಕ್‌ ನಿರ್ಮಾಣ ಯೋಜನೆಯ ಉದ್ದೇಶದ ಹಿಂದೆ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ ಸದುದ್ದೇಶವನ್ನು ಹೊಂದಿರುವುದು. ರೈತಾಪಿ ವರ್ಗದ ಯಾರೇ ಕಷ್ಟ ಎಂದು ತನ್ನ ಬಳಿ ಬಂದರೆ ನನ್ನ ಕೈಲಾದ ಸಹಾಯವನ್ನು ಮಾಡಿರುವುದು.. ಇತ್ಯಾದಿ ಉದಾಹರಣೆಗಳನ್ನು ಸಾಲು ಸಾಲಾಗಿ ಹೇಳುವ ಮೂಲಕ ಕುಮಾರಸ್ವಾಮಿ ಅವರು ಮಂಡ್ಯ ಮತದಾರರನ್ನು ಬಾವನಾತ್ಮಕವಾಗಿ ಕಟ್ಟಿಹಾಕುವ ಕಾರ್ಯ ಮಾಡಿದ್ದಾರೆ.

ಈ ಜಿಲ್ಲೆಗೆ ಇಷ್ಟೆಲ್ಲಾ ಮಾಡುತ್ತಿರುವ ನಿಮ್ಮವನೇ ಆಗಿರುವ ನನಗೆ ಯಾರೋ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ‘ಗೋ ಬ್ಯಾಕ್‌’ ಎಂದರೆ ನಾನಾಗಲೀ ನನ್ನ ಕಾರ್ಯಕರ್ತರಾಗಲೀ ಹೆದರುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿಯವರು ತಮ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ಮಂಡ್ಯದ ಜನ ಒರಟು ಎಂಬ ಮಾತಿದೆ ಆದರೆ ಅವರ ಸ್ವಭಾವ ಮಗುವಿನಂತದ್ದು, ಇಲ್ಲಿ ಜನ ಯಾರನ್ನಾದರೂ ಪ್ರೀತಿಸಿದರೆ ಅವರನ್ನು ತಲೆ ಮೇಲೆ ಹೊತ್ತು ಮೆರೆಸುತ್ತಾರೆ ಎಂದು ಮಂಡ್ಯದ ಜನರನ್ನು ಹೊಗಳಲು ಮುಖ್ಯಮಂತ್ರಿಯವರು ಮರೆಯಲಿಲ್ಲ. 

ಇನ್ನು ಸುಮಲತಾ ಅಂಬರೀಷ್‌ ಅವರ ಸ್ಪರ್ಧೆಗೆ ಅಡ್ಡಿಯಾಗುವ ಮೂಲಕ ತಾನು ಮತ್ತು ತನ್ನ ಪಕ್ಷ ಮಹಿಳಾ ವಿರೋಧಿ ಎಂಬ ಅಪವಾದದಿಂದ ಮುಕ್ತವಾಗುವ ಪ್ರಯತ್ನವನ್ನೂ ಕುಮಾರಸ್ವಾಮಿಯವರು ತಮ್ಮ ಭಾಷಣದುದ್ದಕ್ಕೂ ಮಾಡಿದಂತಿತ್ತು. ಈ ಹಿಂದೆ ತಮ್ಮ ಪಕ್ಷದಿಂದ ಮಹಿಳಾ ನಾಯಕಿಯೊಬ್ಬರನ್ನು ವಿಧಾನಪರಿಷತ್‌ ಗೆ ಆಯ್ಕೆ ಮಾಡಲು ಪ್ರಯತ್ನಪಟ್ಟಿರುವುದನ್ನು ಕುಮಾರಸ್ವಾಮಿಯವರು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು. ನನ್ನ ಪಕ್ಷಕ್ಕೆ ಐದು ಜನ ಶಾಸಕರನ್ನು ಆರಿಸಿಕೊಟ್ಟ ಮಂಡ್ಯ ಜಿಲ್ಲೆಯ ಜನಕ್ಕೆ ನಾನಾಗಲಿ ನನ್ನ ಮಗನಾಗಲೀ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿಯವರು ಪದೇ ಪದೇ ಹೇಳಿದರು.

ಹತ್ತು ವರ್ಷಗಳ ಹಿಂದೆ ನಾನು ಮುಖ್ಯಮಂತ್ರಿಯಾದಾಗಲೂ ಮಂಡ್ಯದ ಜನ ಏಳು ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದೀರಿ, ಈ ಬಾರಿಯೂ ಐದು ಶಾಸಕರನ್ನು ಗೆಲ್ಲಿಸಿದ್ದೀರಿ, ಹಾಗೆಯೇ ಈ ಬಾರಿ ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ ದಯವಿಟ್ಟು ಕೈ ಬಿಡಬೇಡಿ ಎಂದು ಅವರು ಮಂಡ್ಯದ ಜನತೆಯಲ್ಲಿ ಮನವಿ ಮಾಡಿಕೊಂಡರು. ನಿಖಿಲ್‌ ಗೆದ್ದು ದೆಹಲಿಗೆ ಹೋಗಲು ಇಲ್ಲಿಗೆ ಬಂದಿಲ್ಲ, ಗೆದ್ದ ಬಳಿಕ ನಿಮ್ಮ ನಡುವೆ ನಿಮ್ಮ ಮನೆ ಮಗನಂತೆ ಇದ್ದು ಜನತೆಯ ಕಷ್ಟಸುಖಗಳಿಗೆ ಧ್ವನಿಯಾಗಲಿದ್ದಾನೆ ಎಂಬ ಭರವಸೆಯನ್ನು ಕುಮಾರಸ್ವಾಮಿ ಅವರು ಇದೇ ಸಂದರ್ಭದಲ್ಲಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next