ಧಾರವಾಡ : ನಾನು ಸಿಎಂ ಮನೆ ಮುಂದೆ ಕಾಯುವ ಅಧ್ಯಕ್ಷ ಅಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಸಾಹಿತ್ಯ ಪರಿಷತ್‌ಗೆ ಕೊಡಬೇಕಾದ ಗೌರವ ನೀಡುತ್ತಿಲ್ಲ ಎಂಬ ಭಾವನೆ ಮೂಡಿದೆ. ಸಿಎಂ ಹಳೇ ಮೈಸೂರಿನವರು. ಅವರು ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಆಗಿದ್ದರು. ಆದರೂ ಪೂರ್ವಾಗ್ರಹ ಪೀಡಿತ ಆಗಿದ್ದಾರೆ ಎನಿಸುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಅಂತಿಮ ಸಮಿತಿಯಲ್ಲಿ ಇದ್ದೇನೆ. ಆದರೆ ನನಗೆ ಆಮಂತ್ರಣ ನೀಡಲಿಲ್ಲ ಎಂದರು.
ಮಂಡ್ಯ ಸಮ್ಮೇಳನಕ್ಕೆ 25 ಕೋಟಿ ರೂ. ಅನುದಾನ ಕೇಳಿದ್ದೇವೆ. ಈ ಬಾರಿ ಮಂಡ್ಯದಲ್ಲಿ 87ನೇ ಸಾಹಿತ್ಯ ಸಮ್ಮೇಳನ ಜರುಗಲಿದೆ. ಬರ ಪರಿಸ್ಥಿತಿಯಿಂದ ಮಂಡ್ಯ ಸಮ್ಮೇಳನವನ್ನು ಮುಂದೂಡಲಾಗಿದೆ. ಆದರೂ 2024ರಲ್ಲಿ ಸಮ್ಮೇಳನ ನಡೆಯಲೇಬೇಕು ಎಂಬುದಾಗಿ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಅಳವಡಿಕೆ ವಿಚಾರವಾಗಿ ನಡೆದ ಹೋರಾಟದಲ್ಲಿ ಕಸಾಪ ಕೂಡ ಮುಂಚೂಣಿ ವಹಿಸಿತ್ತು. ಇದೀಗ ರಾಜ್ಯದ ಕನ್ನಡ ಶಾಲೆಗಳಲ್ಲಿ ಮೂಲ ಸೌಲಭ್ಯ ಇಲ್ಲ. ಕಸಾಪ ನೇತೃತ್ವದಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು. ಕರ್ನಾಟಕದಲ್ಲಿ ಹಿಂದಿ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದರು.
ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಧೂಳು ಮತ್ತು ಪ್ಲಾಸ್ಟಿಕ್ ರಹಿತವಾಗಿ ಆಚರಿಸಲಾಗಿತ್ತು. ಕಡಿಮೆ ನಿರ್ಣಯ ಕೈಗೊಳ್ಳಲಾಗಿತ್ತು. ಅವುಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಕಾನೂನು ಆಗಿದೆ. ಅದನ್ನು ಆಡಳಿತಾತ್ಮಕ ಆದೇಶದ ಮೂಲಕ ಜಾರಿಗೊಳಿಸಬೇಕು ಎಂದರು.
ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪುಗಳನ್ನು ಪ್ರಕಟಿಸುವ ನಿರ್ಣಯ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿಸಿದರು.