Advertisement

CM Siddaramaiah: ವ್ಯವಸಾಯಕ್ಕೆಂದು ಸಾಲ ಮಾಡಿ ಅದ್ದೂರಿ ಮದುವೆ ಮಾಡುವುದು ನಿಲ್ಲಿಸಿ: ಸಿಎಂ

11:33 AM Sep 27, 2023 | Team Udayavani |

ಚಾಮರಾಜನಗರ: ಸಾಲ ಮಾಡಿ ಅದ್ಧೂರಿ ಮದುವೆ ಮಾಡುವುದು ಅನಾರೋಗ್ಯಕಾರಿ. ವ್ಯವಸಾಯಕ್ಕೆಂದು ಸಾಲ ಮಾಡಿ ಮದುವೆ ಮಾಡುವುದನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

Advertisement

ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ದೇವಸ್ಥಾನದ ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಸರಳ ವಿವಾಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು. ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ ಅದ್ದೂರಿ ಮದುವೆಗಳು ಬಹಳ ದೊಡ್ಡ ಹೊರೆಯಾಗುತ್ತವೆ. ಜೀವನ ಪರ್ಯಂತ ಸಾಲ ತೀರಿಸುತ್ತಾ ಕೂರಬೇಕಾಗುತ್ತದೆ. ಆದ್ದರಿಂದ ಸರಳ ಮತ್ತು ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು ಎಂದರು.

ಮಹದೇಶ್ವರನ ಬೆಟ್ಟ ಅಧ್ಯಾತ್ಮಿಕ ಮಹತ್ವ ಇರುವ ಪುಣ್ಯ ಸ್ಥಳ. ಶೂದ್ರರು, ಶ್ರಮಿಕರು, ಬಡವರು, ಎಲ್ಲಾ ಜಾತಿಯವರ ಅಧ್ಯಾತ್ಮಿಕ ಕೇಂದ್ರವಾಗಿದೆ. ಈ ಕಾರಣಕ್ಕೇ ನನಗೆ ಈ ಕ್ಷೇತ್ರದ ಬಗ್ಗೆ ಅತ್ಯಂತ ಶ್ರದ್ದೆ ಮತ್ತು ಗೌರವ ಇದೆ. ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಮಲೈ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಈಗ ಪ್ರಾಧಿಕಾರದ ಆದಾಯವೂ ಹೆಚ್ಚಾಗಿದೆ. ಶಕ್ತಿ ಯೋಜನೆಯ ಪರಿಣಾಮ ಭಕ್ತರು, ಅದರಲ್ಲೂ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಲೈ ಮಾದೇಶ್ವರನ ದರ್ಶನ ಪಡೆಯುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಮುಂದಿನ ಐದು ವರ್ಷದಲ್ಲಿ ಮಲೈ ಮಹದೇಶ್ವರ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸ್ತೀವಿ ಎಂದು ಮಹತ್ವದ ಘೋಷಣೆ ಮಾಡಿದ ಮುಖ್ಯಮಂತ್ರಿಗಳು ಕುಡಿಯುವ ನೀರು ಮತ್ತು ಶುಚಿತ್ವಕ್ಕೆ ಹೆಚ್ಚಿನ ಆಧ್ಯತೆ ನೀಡಿ ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಪಟ್ಟದ ಗುರುಸ್ವಾಮಿಗಳು, ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಅಧ್ಯಕ್ಷತೆಯನ್ನು ಹನೂರು ಶಾಸಕ ಎಂ.ಆರ್.ಮಂಜುನಾಥ್ ವಹಿಸಿದ್ದರು. ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿ ಜಿಲ್ಲೆಯ ಶಾಸಕರು ಮತ್ತು ನಾಯಕರು ಉಪಸ್ಥಿತರಿದ್ದರು.

Advertisement

ರಾಷ್ಟ್ರಪತಿ ಭವನ ಇನ್ನು ಮುಂದೆ ತಪೋಭವನ :
ಮಲೈ ಮಹದೇಶ್ವರ ಬೆಟ್ಟದಲ್ಲಿರುವ ರಾಷ್ಟ್ರಪತಿ ಭವನದ ಹೆಸರು ಬದಲಾಗಿದೆ. ಇನ್ನು ಮುಂದೆ ಇದು ತಪೋಭವನ. ಮಾದೇಶ್ವರ ತಪಸ್ಸು ಮಾಡಿದ ಶಕ್ತಿ ಕೇಂದ್ರ ಇದು. ಆದ್ದರಿಂದ ಇದನ್ನು ನಾವು ತಪೋಭವನ ಎಂದು ಕರೆಯಬೇಕು. ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾ ಸ್ವಾಮಿಗಳ ಸಲಹೆಯಂತೆ ತಪೋಭವನ ಎಂದು ಬದಲಾಯಿಸಿದ್ದೇವೆ ಎಂದರು.

ಇದನ್ನೂ ಓದಿ: ‘Leo’ ಆಡಿಯೋ ಬಿಡುಗಡೆ ಕಾರ್ಯಕ್ರಮ ರದ್ದು; ರಾಜಕೀಯ ಒತ್ತಡವೇ ಕಾರಣವೆಂದ ದಳಪತಿ ಫ್ಯಾನ್ಸ್

Advertisement

Udayavani is now on Telegram. Click here to join our channel and stay updated with the latest news.

Next