ಮಂಗಳೂರು/ ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಮತ್ತು ಹರೀಶ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜತೆಗೆ ಗುರುವಾರ ಸಮಾಲೋಚನೆ ನಡೆಸಿದರು.
ನೂತನ ಜಿಲ್ಲಾಧಿಕಾರಿ ಕಚೇರಿಯ ಕಾಮಗಾರಿ ಪೂರ್ಣಗೊಳಿಸುವುದು, ಐಟಿ ಕ್ಷೇತ್ರ ಅಭಿವೃದ್ಧಿಗೆ ಕಿಯೋನಿಕ್ಸ್‌ನ ಸಹಭಾಗಿತ್ವದಲ್ಲಿ ನೂತನ ಯೋಜನೆ, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸೂಕ್ತ ಪ್ರಚಾರ ಮತ್ತು ಪೊಲೀಸ್ ವ್ಯವಸ್ಥೆ ಉನ್ನತೀಕರಣ ವಿಷಯಗಳ ಕುರಿತು ಚರ್ಚಿಸಲಾಯಿತು.
ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿಸುವ ಜನತೆಯ ಬಹುಕಾಲದ ಬೇಡಿಕೆಗೆ ಸ್ಪಂದಿಸುವುದು, ಮಂಗಳೂರಿನಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಬಗ್ಗೆ ಕೆಲವೊಂದು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಶೀಘ್ರವೇ ಸ್ಥಳಾಂತರಕ್ಕೆ ಕ್ರಮ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಈಗಾಗಲೇ ಅರ್ಧದಷ್ಟು ಅನುದಾನ ಮಂಜೂರಾಗಿದ್ದು ಯೋಜನೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಆದ್ಯತೆ, ಕೊçಲ ಪಶು ಸಂಗೋಪನ ಇಲಾಖೆಯಲ್ಲಿ ಖಾಸಗಿಯವರಿಗೆ ಉದ್ಯಮಕ್ಕೆ ಅವಕಾಶ ನೀಡುವ ಕುರಿತು ಈಗಾಗಲೇ ಸರಕಾರಕ್ಕೆ ಸಚಿವರ ಮೂಲಕ ಮನವಿ ಸಲ್ಲಿಸಲಾಗಿದ್ದು ಈ ಯೋಜನೆಗೆ ಅನುಮತಿ ನೀಡುವಂತೆ ಶಾಸಕರು ಪ್ರಸ್ತಾವಿಸಿದರು.
ಪುತ್ತೂರು ದೇಗುಲಕ್ಕೆ 25 ಕೋ.ರೂ.ಗೆ ಮನವಿ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾªರಕ್ಕೆ 25 ಕೋ.ರೂ. ಅನುದಾನ ನೀಡುವಂತೆ ಶಾಸಕರು ಮನವಿ ಮಾಡಿದರು.
ಮುಖ್ಯಮಂತ್ರಿಗಳು ಎಲ್ಲ ವಿಷಯಗಳ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಅಶೋಕ್ ರೈ ಅವರು ತಿಳಿಸಿದ್ದಾರೆ.