Advertisement

ಮೊದಲ ದಿನವೇ CM ಸಿದ್ದರಾಮಯ್ಯ ವಾಗ್ಧಾಳಿ

11:35 PM May 20, 2023 | Team Udayavani |

ಬೆಂಗಳೂರು: ಜಿಎಸ್‌ಟಿ ಸೇರಿ ವಾರ್ಷಿಕ 4 ಲಕ್ಷ ಕೋಟಿ ರೂ. ತೆರಿಗೆಯನ್ನು ನಾವು (ಕರ್ನಾಟಕ ) ಕಟ್ಟುತ್ತೇವೆ. ಆದರೆ ಹದಿನೈದನೇ ಹಣಕಾಸು ಆಯೋಗ ನಿಗದಿ ಮಾಡಿದ್ದ 5,495 ಕೋಟಿ ರೂ. ಅನುದಾನವನ್ನೂ “ಆ ಯಮ್ಮ” (ನಿರ್ಮಲಾ ಸೀತಾರಾಮನ್‌) ತೆಗೆದು ಬಿಟ್ಟರು. ರಾಜ್ಯಕ್ಕೆ ಇದಕ್ಕಿಂತ ಹೆಚ್ಚು ಅನ್ಯಾಯ ಮಾಡಿದ ಸರಕಾರ ಬೇಕಾ? ಎಂದು ಕೇಂದ್ರ ಸರಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Advertisement

ತಮ್ಮ ಮೊದಲ ಸಂಪುಟ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಈ ಮೂಲಕ ಮೋದಿ ಸರಕಾರದ ವಿರುದ್ಧ ತಿಕ್ಕಾಟ ನಡೆಸುವ ಸಂದೇಶವನ್ನು ಮೊದಲ ದಿನವೇ ರವಾನಿಸಿದ್ದಾರೆ.

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕರ್ನಾಟಕದಿಂದಲೇ ರಾಜ್ಯ ಸಭೆಗೆ ಆಯ್ಕೆಯಾಗಿದ್ದಾರೆ. ಆದರೂ ಕೇಂದ್ರದ ತೆರಿಗೆಯಲ್ಲಿ ರಾಜ್ಯ ನ್ಯಾಯಯುತ ಪಾಲು ಪಡೆಯುವುದಕ್ಕೆ ಅಡ್ಡಿಯನ್ನುಂಟು ಮಾಡಿದ್ದಾರೆ. ಆ ಯಮ್ಮ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಂದ ರಾಜ್ಯ ಅತಿ ಹೆಚ್ಚು ತೊಂದರೆ ಅನುಭವಿಸಿದೆ. ಬೊಮ್ಮಾಯಿ ಜಿಎಸ್‌ಟಿ ಕೌನ್ಸಿಲ್‌ ಸದಸ್ಯರಾಗಿದ್ದರೂ ರಾಜ್ಯದ ಪರ ಧ್ವನಿ ಎತ್ತಿಲ್ಲ. ಇನ್ನು 25 ಸಂಸದರೂ ಈ ಬಗ್ಗೆ ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಜನರಿಗಾಗಿ ಈ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಹೊರಟರೆ, ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಲು ಕಾಂಗ್ರೆಸ್‌ ಹೊರಟಿದೆ ಎಂದು ಪ್ರಧಾನಿ ಮೋದಿಯವರು ತಮ್ಮ ಮನ್‌ ಕಿ ಬಾತ್‌ನಲ್ಲಿ ಟೀಕಿಸಿದರು. ಆದರೆ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದ್ದೇ ನರೇಂದ್ರ ಮೋದಿ. ಸ್ವಾತಂತ್ರ್ಯ ನಂತರ ಮನಮೋಹನ್‌ ಸಿಂಗ್‌ ಸರಕಾರದವರೆಗೆ ಕೇಂದ್ರ ಸರಕಾರ 53,11,000 ಕೋಟಿ ರೂ. ಸಾಲ ಮಾಡಲಾಗಿತ್ತು. ಆದರೆ ಮೋದಿ ಆಳ್ವಿಕೆಯ 9 ವರ್ಷದಲ್ಲಿ 155 ಲಕ್ಷ ಕೋಟಿ ಸಾಲ ಮಾಡಲಾಗಿದೆ. ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿ ಅಧಿಕಾರದಿಂದ ನಿರ್ಗಮಿಸುವವರೆಗೆ 2.42 ಲಕ್ಷ ಕೋಟಿ ರೂ. ಸಾಲ ಇತ್ತು. ಆದರೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರವೂ ಸೇರಿ ಬಿಜೆಪಿ ಅಧಿಕಾರದ ಕೊನೆಯಲ್ಲಿ 5.64 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಈ ವರ್ಷವೊಂದರಲ್ಲೇ ನಾವು 56 ಸಾವಿರ ಕೋಟಿ ಅಸಲು-ಬಡ್ಡಿ ಕಟ್ಟಬೇಕಿದೆ. ವಾಸ್ತವವಾಗಿ ರಾಜ್ಯ ಹಾಗೂ ರಾಷ್ಟ್ರವನ್ನು ಸಾಲದ ಸುಳಿಗೆ ಹಾಕಿದವರೇ ಬಿಜೆಪಿಯವರು. ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸದೇ ಈ ಐದು ಯೋಜನೆ ಜಾರಿ ಮಾಡುತ್ತೇವೆಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಹೇಳಿದರು.

ಕೇಂದ್ರ ತೆರಿಗೆ ಪಾಲಿನಲ್ಲಿ ನಮಗೆ ಕೇವಲ 50 ಸಾವಿರ ಕೋಟಿ ರೂ. ಮಾತ್ರ ಲಭಿಸುತ್ತಿದೆ. ವಾಸ್ತವದಲ್ಲಿ ನಮಗೆ 1 ಲಕ್ಷ ಕೋಟಿ ರೂ. ಸಿಗಬೇಕು. ಆದರೆ ಕೇಂದ್ರದಿಂದ ನಮಗೆ ನಿರಂತರ ಅನ್ಯಾಯವಾಗಿದೆ. ನಮ್ಮ ಗ್ಯಾರಂಟಿ ಯೋಜನೆಜಾರಿಗೆ ತತ್‌ಕ್ಷಣದಲ್ಲಿ 50 ಸಾವಿರ ಕೋಟಿ ರೂ. ಬೇಕಾಗಬಹುದು. ಎಷ್ಟೇ ಕಷ್ಟವಾದರೂ ಸರಿ ನಾವು ಈ ಯೋಜನೆಯನ್ನು ಜಾರಿ ಮಾಡುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಾವು ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆಗಳನ್ನು ಒಂದು ವರ್ಷದ ಅವಧಿಯಲ್ಲಿ ಈಡೇರಿಸುತ್ತೇವೆ. ಆದರೆ ಐದು ಗ್ಯಾರಂಟಿಗಳಿಗೆ ಮಾತ್ರ ಮೊದಲ ಸಂಪುಟ ಸಭೆಯಲ್ಲೇ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ವಿಪಕ್ಷಗಳು ಜನರನ್ನು ತಪ್ಪು ದಾರಿಗೆ ಎಳೆಯುವ ಆವಶ್ಯಕತೆ ಇಲ್ಲ. ನಮ್ಮದು ನುಡಿದಂತೆ ನಡೆಯುವ ಸರಕಾರ. ನಾವು ಹಿಂದೆ ಅಧಿಕಾರದಲ್ಲಿದ್ದಾಗ 165 ಭರವಸೆಗಳ ಪೈಕಿ 158ನ್ನು ಈಡೇರಿಸಿದ್ದೆವು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next