ಕಲಬುರಗಿ: ಲೋಕಾಯುಕ್ತ ನೀಡಿದ ನಾಲ್ಕೂ ದೂರುಗಳನ್ನು ಬದಿಗೊತ್ತಿ ಮುಡಾ ಪ್ರಕರಣದಲ್ಲಿ ಖಾಸಗಿ ವ್ಯಕ್ತಿಗಳು ನೀಡಿದ ದೂರನ್ನಾಧಿರಿಸಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ರಾಜ್ಯಪಾಲರ ಪಕ್ಷಪಾತ ಧೋರಣೆಯಾಗಿದೆ. ಆದ್ದರಿಂದ ನ್ಯಾಯಾಲಯದ ತೀರ್ಪು ವ್ಯತಿರಿಕ್ತ ಬಂದರೆ ಸಿಎಂ ರಾಜೀನಾಮೆ ನೀಡಬಾರದು ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿಗಳು ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ರಾಜ್ಯಪಾಲರನ್ನು ಬಳಕೆ ಮಾಡಿಕೊಂಡು ಸಿದ್ಧರಾಮಯ್ಯನವರ, 136 ಸ್ಥಾನಗಳಿಂದ ಜನಾಶೀರ್ವಾದ ಪಡೆದ ಸರಕಾರವನ್ನು ಅಸ್ಥಿರ ಮಾಡಿ, ಬದಲಿ ಸರಕಾರ ರಚಿಸಲು ಹೊಂಚು ಹಾಕಿದೆ. ಆದ್ದರಿಂದ ತಾವು ನ್ಯಾಯಾಲಯ ತೀರ್ಪಿನ ಬಳಿಕ ರಾಜೀನಾಮೆ ನೀಡದೆ ಸುಪ್ರಿಂ ಕೋರ್ಟ್ ನಲ್ಲಿ ದಾವೆ ಹೂಡಿ ನ್ಯಾಯ ಕೇಳಬೇಕು. ಅದಕ್ಕೆ ರಾಜ್ಯದ ಮಠಾಧೀಶರ ಬೆಂಬಲವೂ ಇದೆ ಎಂದರು.
ರಾಜ್ಯಪಾಲರ ನಡೆ ಪಕ್ಷಪಾತದಿಂದ ಕೂಡಿದೆ ಎನ್ನುವುದು ರಾಜ್ಯದ ಜನಾಭಿಪ್ರಾಯವೂ ಆಗಿದೆ. ಮುಡಾದಲ್ಲಿ ಅಧಿಕಾರಿಗಳು ಮಾಡಿರುವ ತಪ್ಪನ್ನು ಸಿಎಂ ಕೊರಳಿಗೆ ಹಾಕಿ ಅವರ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆ ಹಚ್ಚುವ ಆ ಮೂಲಕ ಒಂದು ಜನಪರ ಸರಕಾರವನ್ನು ಉರುಳಿಸುವ ಸಂಚು ಕೇಂದ್ರ ಸರಕಾರ ಮಾಡಿದೆ. ಇದಕ್ಕೆ ರಾಜ್ಯದ ನಾಯಕರೂ ಕೈಜೋಡಿಸಿರುವುದು ಸಂವಿಧಾನ ವಿರೋಧಿಯಾಗಿದೆ ಎಂದರು.
ಒಂದು ವೇಳೆ ಕೋರ್ಟ್ ತೀರ್ಪು ವ್ಯತಿರಿಕ್ತ ಬಂದರೆ, ರಾಜ್ಯದ ಮಠಾಧೀಶರ ನಡೆಯ ಮತ್ತು ಪ್ರತಿರೋಧ ಏನಾಗಿರಬೇಕು ಎನ್ನುವದರ ಕುರಿತು ನಮ್ಮ ತೀರ್ಮಾನ ತಿಳಿಸಲಾಗುವುದು ಎಂದ ಅವರು, ದೇಶದಲ್ಲಿ ಈ ಹಿಂದೆಯೂ ಕೇಂದ್ರ ಸರಕಾರಗಳು ರಾಜ್ಯಪಾಲರನ್ನು ಬಳಕೆ ಮಾಡಿಕೊಂಡು ರಾಜ್ಯ ಸರಕಾರಗಳನ್ನು ವಜಾ ಮಾಡಿದ ಎಷ್ಟೋ ಪ್ರಕರಣಗಳು ನಮಗೆ ಸಿಗುತ್ತವೆ ಎಂದು ನೆಹರು, ಇಂದಿರಾಗಾಂಧಿ ಹಾಗೂ ಜನತಾಪಕ್ಷದ ಕಾರನಾಮೆಗಳನ್ನು ನೆನಪಿಸಿದರು.
ರಾಜ್ಯದಲ್ಲಿ ದೇವೇಗೌಡ, ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಇಂತಹ ಆರೋಪಗಳು ಕೇಳಿ ಬಂದಿದ್ದವು. ಆದ್ದರಿಂದ ತಾವು ಅವಸರದಲ್ಲಿ ರಾಜೀನಾಮೆ ಕೋಡಬೇಡಿ ಎಂದರು.
ರಾಜ್ಯಪಾಲರಿಗೆ ಪ್ರದತ್ತವಾದ ಪರಮಾಧಿಕಾರದ ಕುರಿತು ಚರ್ಚೆಯಾಗಿ ಅವುಗಳನ್ನು ಮೊಟಕುಗೊಳಿಸುವ ಅಥವಾ ಸಮಾಪ್ತಿಗೊಳಿಸಬೇಕಿದೆ. ಬ್ರಿಟೀಷರ ಕಾಲದಲ್ಲಿ ಅದರ ಅಗತ್ಯವಿತ್ತು. ಈಗ ಇಲ್ಲಎಂದರು.
ಸುದ್ದಿಗೋಷ್ಠಿಯಲ್ಲಿ ಸುಲಫಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸೇರಿದಂತೆ 16 ಮಠಾಧೀಶರು ಇದ್ದರು.