Advertisement

ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ಸಿದ್ದರಾಮಯ್ಯನಲ್ಲವೇ? ಸಿಎಂ ಹೇಳಿದ್ದೇನು?

04:44 PM May 12, 2017 | Team Udayavani |

ಬೆಂಗಳೂರು : ರಾಜ್ಯ ಕಾಂಗ್ರೆಸ್‌ನ ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿಕೆ ನೀಡಿದ್ದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. 

Advertisement

ಸರ್ಕಾರ 5 ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮದಲ್ಲಿ ನುಡಿದಂತೆ ನಡೆದಿದ್ದೇವೆ ಭರವಸೆಗಳನ್ನು ಈಡೇರಿಸಿದ್ದೇವೆ ಎನ್ನುವ ಪುಸ್ತಕವನ್ನು ಸಿದ್ದರಾಮಯ್ಯ ಅವರು ಬಿಡುಗಡೆಗೊಳಿಸಿದರು.ಅಚ್ಚರಿಯೆಂದರೆ ಈ ವೇಳೆ ಯವೊಬ್ಬ ಸಚಿವರೂ ಉಪಸ್ಥಿತರಿರಲಿಲ್ಲ. 

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ‘ನನಗೆ ಆತ್ಮವಿಶ್ವಾಸವಿದೆ ಕಾಂಗ್ರೆಸ್‌ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಮುಂದಿನ ಚುನಾವಣೆಯನ್ನು ನನ್ನ ನೇತೃತ್ವದಲ್ಲಿ ಎದುರಿಸಲಾಗುತ್ತದೆ. ಆದರೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ’ ಎಂದರು. 

ಈ ಹಿಂದೆ ನೀವೇ ಮುಂದಿನ ಸಿಎಂ ಅಭ್ಯರ್ಥಿ ನಾನೇ ಎಂದಿದ್ದೀರಲ್ಲಾ ಎಂದು ಪ್ರಶ್ನಿಸಿದಾಗ ‘ಇಲ್ಲಾ ಅದು ನಾನು ಭಾಷಣ ಮಾಡುವಾಗ ಯರೋ ಒಬ್ಬ ಎದ್ದು ನಿಂತು ನಿವೇ ಮುಂದೆಯೂ ಸಿಎಂ ಆಗ್ಬೇಕು ಎಂದ .ಅದಕ್ಕೆ ಆಯ್ತಪ್ಪಾ ಮುಂದೆಯೂ ನಾನೇ ಆಯ್ತೀನಿ ಬಿಡು ಅಂದಿದ್ದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥವಿಸಿಕೊಳ್ಳಲಾಗಿದೆ’ ಎಂದರು. 

ಯಡಿಯೂರಪ್ಪ ವಿರುದ್ಧ ಕಿಡಿ 

Advertisement

ಸರ್ಕಾರದ ಬಗ್ಗೆ ಯಡಿಯೂರಪ್ಪ ಹಾಕಿರುವ ಚಾರ್ಜ್ ಶೀಟ್ ಬಗ್ಗೆ ಕೇಳಿದಾಗ ಕೆಂಡಾಮಂಡಲವಾದ ಸಿದ್ದರಾಮಯ್ಯ ‘ಅದೊಂದು ಸುಳ್ಳಿನ ಕಂತೆ, ಜೈಲಿಗೆ ಹೋಗಿಬಂದು ಪೋಲಿಸರಿಂದ ಹತ್ತಾರು ಚಾರ್ಜ್ ಶೀಟ್ ಹಾಕಿಸಿಕೊಂಡಿರುವ, ಸುಪ್ರೀಂಕೋರ್ಟ್‌, ಹೈಕೋರ್ಟ್‌ ಮತ್ತು ಲೋಕಾಯುಕ್ತದಲ್ಲೂ ಮೊಕದ್ದಮೆಗಳನ್ನು ಎದುರಿಸುತ್ತಿರುವ ಯಡಿಯೂರಪ್ಪ ಹಾಗೂ ರಾಜ್ಯ  ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲ’ ಎಂದರು. 

ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ 1 ಎಂಬ ವರದಿ ಬಗ್ಗೆ ಕೇಳಿದಾಗ ಕಿಡಿಕಾರಿದ ಅವರು ‘ಈ ವರದಿಯನ್ನು  ನರೇಂದ್ರಮೋದಿ ಕೃಪಾಪೋಷಿತ ನಾಟಕ ಮಂಡಳಿಯಾದ  ನೀತಿ ಆಯೋಗದ ಸದಸ್ಯರೊಬ್ಬರು ಬಿಡುಗಡೆ ಮಾಡಿದ್ದು, ಆರೂವರೆ ಕೋಟಿ ಜನರ ಪೈಕಿ ಕೇವಲ 2000 ಜನರ ಅಭಿಪ್ರಾಯ ಪಡೆದು ನಡೆಸಿದ ಸಮೀಕ್ಷೆ ನಂಬಲು ಸಾಧ್ಯವಿಲ್ಲ’ ಎಂದರು. 

ವಿಧಾನಸಭಾ ಚುನಾವಣಾ ತಯಾರಿಯಲ್ಲಿರುವ ಕಾಂಗ್ರೆಸ್‌ ಪಕ್ಷ ಈಗಾಗಲೇ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿದ್ದು,ಇದೇ ವಿಚಾರದಲ್ಲಿ ಪಕ್ಷದಲ್ಲಿ ಭಿನ್ನಮತ ಕಾಣಿಸಿಕೊಂಡಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣಗೋಪಾಲ್‌ ಅವರ ಬಳಿ ರಾಜ್ಯದ ಹಲವು ನಾಯಕರು ಅಸಮಧಾನ ಹೊರ ಹಾಕಿದ್ದರು. ಆ ಬಳಿಕ ಎಐಸಿಸಿ ಪಕ್ಷದಲ್ಲಿ ಹಲವು ಬದಲಾವಣೆ ಮಾಡಲು ಮುಂದಾಗಿದೆ.  ಕೆಪಿಸಿಸಿಗೆ ನೂತನ ಅಧ್ಯಕ್ಷ ನ ಆಯ್ಕೆಯ ವಿಚಾರವೂ ಕಗ್ಗಂಟಾಗಿ ಪರಿಣಮಿಸಿದೆ. ಇದೀಗ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕಾಂಗ್ರೆಸ್‌ನ ನಾಯಕತ್ವದ ಬದಲಾವಣೆಯ ಸಾಧ್ಯತೆಯನ್ನು ಸೂಚಿಸುವಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next