Advertisement

CM ಸಿದ್ದರಾಮಯ್ಯ ಜನತಾ ದರ್ಶನ: ಊಟಕ್ಕೂ ವಿರಾಮ ಪಡೆಯಲಿಲ್ಲ

04:26 PM Nov 27, 2023 | |

ಬೆಂಗಳೂರು: ಜನರ ಬಳಿಗೆ ಸರ್ಕಾರ ಎಂಬ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ‘ಜನತಾ ದರ್ಶನ’ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಸೋಮವಾರ ನೂರಾರು ಜನರ ಅಹವಾಲುಗಳನ್ನು ಸ್ವೀಕರಿಸುವ ವೇಳೆ ಊಟಕ್ಕೂ ವಿರಾಮ ತೆಗೆದುಕೊಳ್ಳದೆ ಗಮನಸೆಳೆದಿದ್ದಾರೆ.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ನೂರಾರು ಜನರು ತಮ್ಮ ಸಮಸ್ಯೆಗಳನ್ನು ಸಿಎಂ ಬಳಿ ತೋಡಿಕೊಂಡರು. ಮಧ್ಯಾಹ್ನ ಊಟದ ಸಮಯದಲ್ಲಿ ವಿರಾಮ ಪಡೆಯದೇ ಕುಳಿತಲ್ಲೇ ಮೊಸರನ್ನ ತರಿಸಿ ಸೇವಿಸಿ ಅಹವಾಲು ಸ್ವೀಕರಿಸುವುದನ್ನು ಮುಂದುವರಿಸಿದರು.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ” ಇಂದಿನ ಜನತಾ ದರ್ಶನದಲ್ಲಿ ಅಹವಾಲು ಹೊತ್ತು ಬಂದವರ ಸಂಖ್ಯೆ ಬಹಳಷ್ಟಿದೆ. ದೂರದ ಊರುಗಳಿಂದ ಬಂದ ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಿಕೊಡಬೇಕಾದುದ್ದು ನನ್ನ ಕರ್ತವ್ಯ. ಹೀಗಾಗಿ ಊಟಕ್ಕೆ ಹೋಗಿ ಬರುವ ಸಮಯವನ್ನು ಉಳಿಸಿ, ಆ ಸಮಯವು ಮತ್ತಷ್ಟು ಜನರ ಕಷ್ಟ ಕೇಳಲು ಸದ್ಬಳಕೆಯಾಗಲಿ ಎಂದು ಜನತಾ ದರ್ಶನಕ್ಕೆ ಕುಳಿತಿದ್ದ ಜಾಗದಲ್ಲೇ ಬೇಗನೆ ಊಟ ಮಾಡಿ ಮುಗಿಸಿ ಮತ್ತೆ ಜನರ ಅಹವಾಲಿಗೆ ಕಿವಿಯಾಗಿದ್ದೇನೆ” ಎಂದು ಬರೆದಿದ್ದಾರೆ.

ಬೀದಿ ಬದಿ ವ್ಯಾಪಾರಿಗಳಿಗೆ, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರಿಗೆ ಪೊಲೀಸ್ ಮತ್ತು ಬಿಬಿಎಂಪಿ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಬಡ ವ್ಯಾಪಾರಿ ನಿಂಗಮ್ಮ ಅವರು ಜನತಾ ದರ್ಶನದಲ್ಲಿ ದೂರು ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ಅವರು ತತ್ ಕ್ಷಣ ಪೊಲೀಸ್ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ಕರೆಸಿ ನಿಂಗಮ್ಮ‌ ಅವರಿಗೆ ಇನ್ನುಮುಂದೆ ಯಾವುದೇ ತೊಂದರೆಯಾಗದಂತೆ ನಿಶ್ಚಿಂತರಾಗಿ ವ್ಯಾಪಾರ ಮಾಡಿಕೊಂಡು ಹೋಗಲು ಅವಕಾಶ ಮಾಡಿಕೊಡುವಂತೆ ಸೂಚನೆ ನೀಡಿದರು.

ವೃದ್ದಾಪ್ಯ ವೇತನ ಮಂಜೂರಾತಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ವೃದ್ಧರೊಬ್ಬರು ಜನತಾ ದರ್ಶನದಲ್ಲಿ ನೋವು ತೋಡಿಕೊಂಡರು.ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆ ನಿರ್ದೇಶಕರನ್ನು ಕರೆಸಿ ತಾಂತ್ರಿಕ‌ ತೊಂದರೆ ಇದ್ದರೆ ತತ್ ಕ್ಷಣ ಬಗೆಹರಿಸಿ, ಸಿಬ್ಬಂದಿಯಿಂದ ತೊಂದರೆ ಆಗುತ್ತಿದ್ದರೆ ಅವರ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದರು.

Advertisement

148 ಮಂದಿ ವಿಶೇಷ ಚೇತನರಿಂದ ಮೂರು ಚಕ್ರ ವಾಹನಕ್ಕೆ ಮನವಿ. ಸಿಡಾಕ್ ಸಂಸ್ಥೆಯಿಂದ ತರಬೇತಿ ಪಡೆದಿದ್ದರೂ ಎರಡು ವರ್ಷದಿಂದ ನೆರವು ನೀಡಿಲ್ಲ ಎಂಬ ದೂರು ಜನತಾ ದರ್ಶನದಲ್ಲಿ ಸಲ್ಲಿಕೆಯಾಯಿತು.ತರಬೇತಿ ಪಡೆದಿರುವ 98 ಮಂದಿಗೆ ಮುಂದಿನ 15 ದಿನಗಳ ಒಳಗೆ ಸಾಲ ಸೌಲಭ್ಯ ಒದಗಿಸಬೇಕು. ಉಳಿದವರಿಗೆ ತ್ರಿಚಕ್ರ ವಾಹನ ಕೊಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತರಾದ ತುಷಾರ ಗಿರಿನಾಥ್ ಅವರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next