Advertisement

ಸಿಎಂ ಸಿದ್ದರಾಮಯ್ಯಗೆ ಅಕ್ರಮ ಕಲ್ಲು ಗಣಿ ಉರುಳು

06:05 AM Jan 12, 2018 | Team Udayavani |

ಮಂಡ್ಯ: ಪಾಂಡವಪುರ ಬೇಬಿ ಬೆಟ್ಟದ ಅಕ್ರಮ ಕಲ್ಲು ಗಣಿ ಉರುಳು ಇದೀಗ ಸಿಎಂ ಸಿದ್ದರಾಮಯ್ಯ ಅವರನ್ನು ಸುತ್ತಿಕೊಂಡಿದೆ. 

Advertisement

ಕಳ್ಳತನದಿಂದ ಕಲ್ಲು ಗಣಿಗಾರಿಕೆ ನಡೆಯುವುದಕ್ಕೆ ಸಿಎಂ ಪ್ರೋತ್ಸಾಹ ನೀಡುತ್ತಿದ್ದಾರೆಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ, ಹಿರಿಯ ಭೂ ವಿಜ್ಞಾನಿ ಕೆ.ಎಂ.ನಾಗಭೂಷಣ್‌, ಸಂಸದ ಸಿ.ಎಸ್‌.ಪುಟ್ಟರಾಜು,ನಾಗಮ್ಮ ಪುಟ್ಟರಾಜು, ಜಿಪಂ ಸದಸ್ಯ ಸಿ.ಅಶೋಕ್‌,ಸಿ.ಶಿವಕುಮಾರ್‌, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಬಿ.ಎಂ.ನಟರಾಜು ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲು: ಆರೋಪಿಗಳ ವಿರುದ್ಧ ಕಲಂ 200ರಡಿ ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಾಲಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿರುವ ಮೈಸೂರು ಮಹಾರಾಜರಿಗೆ ಸೇರಿದ ಅಮೃತ್‌ ಮಹಲ್‌ ಕಾವಲ್‌ನಲ್ಲಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಸಂಸದ ಸಿ.ಎಸ್‌. ಪುಟ್ಟರಾಜು ಹಾಗೂ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಬಿ.ಎಂ.ನಟರಾಜು ಅಧಿಕಾರಿಗಳಿಂದ ಅಕ್ರಮವಾಗಿ ಪರವಾನಗಿ ಪಡೆದು ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದರು.

ಹಿನ್ನೆಲೆ: ಸಿಎಂ ಸಿದ್ದರಾಮಯ್ಯ 2010ರಲ್ಲಿ ವಿರೋಧಪಕ್ಷದ ನಾಯಕರಾಗಿದ್ದ ವೇಳೆ ಇವರ ಆಪ್ತರಾಗಿದ್ದ ಬಿ.ಎಂ.ನಟರಾಜು ಒಡೆತನದ ಯತಿನ್‌ ಸ್ಟೋನ್‌ ಕ್ರಷರ್ ಹಾಗೂ ಕಲ್ಲು ಗಣಿಗಾರಿಕೆ ಸಮಾರಂಭದ ಪ್ರಾರಂಭೋತ್ಸವ ನೆರವೇರಿಸಿದ್ದರು.

Advertisement

ಕಲ್ಲು ಗಣಿ ಸಂಪತ್ತನ್ನು ಕಂಡು ಸಿಎಂ ಸಿದ್ದರಾಮಯ್ಯ 2014ರ ಫೆ. 24ರಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮೈಸೂರು ಪ್ರಾದೇಶಿಕ ಆಯುಕ್ತರ ಮೂಲಕ ಕಲ್ಲುಪುಡಿ ಮಾಡುವ ಘಟಕಗಳಿಗೆ ಬೇಕಿರುವ ಕಚ್ಚಾ ಮಾಲಿನ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡಿದ್ದರೆಂದು ಆರೋಪಿಸಿದ್ದಾರೆ.

ಅಧಿಕಾರ ದುರ್ಬಳಕೆ: ಸರ್ಕಾರಕ್ಕೆ ಬರಬೇಕಾದ ರಾಜಧನಕ್ಕೆ ನಷ್ಟ ಮಾಡಿ ಸಿದ್ದರಾಮಯ್ಯ ಅವರು ಹಿರಿಯ ಭೂ ವಿಜ್ಞಾನಿ ಕೆ.ಎಂ.ನಾಗಭೂಷಣ್‌ಗೆ ಒತ್ತಡ ಹಾಕಿ ಸಂಸದ ಪುಟ್ಟರಾಜು ಹಾಗೂ ಬಿ.ಎಂ.ನಟರಾಜು ಅವರಿಗೆ ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಿದ್ದಾರೆ. ಅಮೃತ್‌ಮಹಲ್‌ ಕಾವಲು ಮೈಸೂರು ಮಹಾರಾಜರ ಒಡೆತನಕ್ಕೆ ಸೇರಿದ್ದು ಎಂಬುದು ತಿಳಿದಿದ್ದರೂ ಅಕ್ರಮ ಖಾತೆ ಸೃಷ್ಟಿಸಿ ಕಲ್ಲು ಗಣಿಗಾರಿಕೆ ನಡೆಸಲು ಸಹಕರಿಸಿದ್ದಾರೆ ಎಂದು ಕೆ.ಆರ್‌.ರವೀಂದ್ರ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next