ಹಾಸನ: ರಾಜ್ಯದಲ್ಲಿ ಸಂಭವಿಸಿರುವ ಅತಿವೃಷ್ಟಿ ಹಾಗೂ ಪ್ರವಾಹ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರ ತಕ್ಷಣ ಕನಿಷ್ಟ 5 ಸಾವಿರ ಕೋಟಿ ರೂ ಬಿಡುಗಡೆ ಮಾಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತುರ್ತಾಗಿ ವಿರೋಧ ಪಕ್ಷಗಳ ಮುಖಂಡರ ಸಭೆ ಕರೆದು ಚರ್ಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.
ಪರಿಹಾರ ಘೋಷಿಸದ ಕೇಂದ್ರ ಸಚಿವರು: ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಷಾ ಅವರು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಸಮೀಕ್ಷೆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಯವರು ಹಾಗೂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ ನಂತರವೂ ತುರ್ತು ಪರಿಹಾರವನ್ನು ಘೋಷಣೆ ಮಾಡದೇ ಹೋಗಿರುವುದು ಅಶ್ವರ್ಯ ತಂದಿದೆ. ತುರ್ತು ಪರಿಹಾರ ಘೋಷಣೆ ಮಾಡಿದ್ದರೆ ಪ್ರವಾಹ ಸಂತ್ರಸ್ತರಿಗೆ ಧೈರ್ಯ ತುಂಬಿದಂತಾಗುತ್ತಿತ್ತು. ಬಹುಶಃ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಅಧ್ಯಯನಕ್ಕೆ ಬಂದು ಹಾನಿಯ ಅಂದಾಜಿನ ನಂತರ ಮುಖ್ಯಮಂತ್ರಿಯವ ಮನವಿಗೆ ಗೌರವ ಕೊಟ್ಟು ಪರಿಹಾರ ಬಿಡುಗಡೆ ಮಾಡಬಹುದೇನೋ ನೋಡೋಣ. ಈಗ ತಕ್ಷಣ ವಿಪಕ್ಷಗಳ ನಾಯಕರ ಸಭೆ ಕರೆದು ಯಾವ ಜಿಲ್ಲೆಯಲ್ಲಿ, ಯಾವ್ಯಾವ ಪರಿಹಾರ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಿ ಎಂದರು.
ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಹಾನಿ: ರಾಜಕೀಯ ಪಕ್ಷಗಳ ಮುಖಂಡರು ಒಂದು ವಾರ ಒಂದೊಂದು ಜಿಲ್ಲೆಯಲ್ಲಿ ಪ್ರವಾಸ ನಡೆಸಿದರೂ ಹಾನಿ ಸಂಭವಿಸಿರುವ ಹಳ್ಳಿಗಳಿಗೆ ಹೋಗಿ ಸಂತ್ರಸ್ತರಿಗೆ ಸಾಂತ್ವನ ಹೇಳಲು ಸಾಧ್ಯವಾಗದಷ್ಟು ಹಾನಿ ಸಂಭವಿಸಿದೆ. ಈಗಾಗಲೇ ಲಕ್ಷಾಂತರ ಕೋಟಿ ರೂ. ಆಸ್ತಿ, ಪಾಸ್ತಿ, ಜೀವ ಹಾನಿ, ಬೆಳೆ ಹಾನಿ ಸಂಭವಿಸಿದೆ. ಪ್ರವಾಹ ಇಳಿಮುಖವಾದ ನಂತರ ಪರಿಹಾರ ಕಾರ್ಯ ಗಳು ಮತ್ತು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿ ಸುವ ದೊಡ್ಡ ಸವಾಲು ಸರ್ಕಾರದ ಮುಂದಿದೆ. ಪರಿ ಹಾರ ಕಾರ್ಯಗಳಲ್ಲಿ ರಾಜಕೀಯ ಬೆರೆಸದೇ ಎಲ್ಲಾ ರಾಜ ಕೀಯ ಪಕ್ಷಗಳ ಮುಖಂಡರೂ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ ಎಂದರು.
ಅಧಿಕಾರಿಗಳು ಸಂತ್ರಸ್ತರಿಗೆ ಧೈರ್ಯ ತುಂಬಲಿ: ರಾಜ್ಯದಲ್ಲಿ ಸಚಿವ ಸಂಪುಟವಿಲ್ಲ. ಹಾಗಾಗಿ ಅಧಿಕಾರಿಗಳ ಪಾತ್ರ ದೊಡ್ಡದಿದೆ. ಶಾಸಕರು ಸಂತ್ರಸ್ತ ರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ. ನಿರಾಶ್ರಿತರಿಗೆ ಶಾಶ್ವತ ನೆಲೆ ಕಲ್ಪಿಸಬೇಕಾಗಿದೆ. ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಅನಾಹುತದ ಸಂದರ್ಭದಲ್ಲಿ ಶಾಶ್ವತ ನೆಲೆ ಕಲ್ಪಿಸುವ ಕೆಲಸ ಮಾಡಿದ್ದೆ. ಸಾರ್ವಜನಿಕರಿಂದ ಸಂಗ್ರಹವಾಗಿದ್ದ 198 ಕೋಟಿ ರೂ.ಗಳ ನೆರವಿನಲ್ಲಿ ಇನ್ನೂ 97 ಕೋಟಿ ರೂ. ಕೊಡಗು ಜಿಲ್ಲಾಧಿಕಾರಿಯವರ ಬಳಿ ಉಳಿದಿದೆ ಎಂದ ಅವರು, ಅತಿವೃಷ್ಟಿ ಹಾಗೂ ಪ್ರವಾದಿಂದಾದ ಹಾನಿಯ ಅಂದಾಜು ಮಾಡಲು ಕನಿಷ್ಠ ಒಂದು ತಿಂಗಳಾದರೂ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ತುರ್ತು ಪರಿಹಾರಕ್ಕೆ ಹಣದ ಕೊರತೆಯಿಲ್ಲ: ತುರ್ತು ಪರಿಹಾರ ಕೈಗೊಳ್ಳಲು ಸರ್ಕಾರಕ್ಕೆ ಹಣದ ಕೊರತೆ ಇಲ್ಲ. ನನ್ನ ನೇತೃತ್ವದ ಸರ್ಕಾರ ವಿವಿಧ ಕಾರ್ಯ ಕ್ರಮಗಳಿಗೆ ಮೀಸಲಿರಿಸಿದ್ದ ಅನುದಾನದಲ್ಲಿ ಹಣ ಉಳಿದಿದೆ. ಸಾಲ ಮನ್ನಾಕ್ಕೆ ನಿಗದಿಪಡಿಸಿದ್ದ ಅನುದಾನ ದಲ್ಲಿ ಹಣ ಉಳಿದಿದೆ. ಅದನ್ನು ಬಳಸಿಕೊಳ್ಳಬಹುದು. ಹಲವು ಅಭಿವೃದ್ಧಿ ಯೋಜನೆಗಳನ್ನು ನಾನು ಮಂಜೂರು ಮಾಡಿದ್ದೆ. ಆವುಗಳಿಗಾದರೂ ತಕ್ಷಣ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿ ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಅವರೂ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.